ಮಂಡ್ಯ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಾಗಮಂಗಲ ಘಟಕದ ಚಾಲಕ ಕಂ ನಿರ್ವಾಹಕ ಜಗದೀಶ್ ಅವರ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ನನ್ನ ಪಾತ್ರವೇನು ಇಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಅನಾವಶ್ಯಕ ರೀತಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇದೇ ಅವರ ಕಾಯಕ. ವರ್ಗಾವಣೆ ಪ್ರಕ್ರಿಯೆ ಸಹಜ. ಸರ್ಕಾರ ಬದಲಾದಾಗ ಎಲ್ಲರ ಕಾಲದಲ್ಲೂ ವರ್ಗಾವಣೆ ಆಗಿರುತ್ತದೆ. ನಾನು ಆ ಚಾಲಕನ ವರ್ಗಾವಣೆಗೆ ಲೆಟರ್ ಕೊಟ್ಟಿಲ್ಲ, ವರ್ಗಾವಣೆ ಮಾಡಿ ಎಂದು ನಾನು ಹೇಳಿಲ್ಲ. ಆದರೆ ವರ್ಗಾವಣೆ ಆಗಿದೆ ಎಂದರು.
ಆ ಚಾಲಕನ ಬಾವ ನನಗೆ ಫೋನ್ ಮಾಡಿದ್ದರು. ಹಾಗಾಗಿ ಅದನ್ನು ನಾನೇ ಹೋಲ್ಡ್ ಮಾಡುವಂತೆ ಹೇಳಿದ್ದೇನೆ. ಏನಾದರೂ ತಪ್ಪಿದ್ದರೆ ತನಿಖೆ ಮಾಡಿ ಆಮೇಲೆ ವರ್ಗಾವಣೆ ಮಾಡಿ ಎಂದು ಹೇಳಿದ್ದೆ. ಅದನ್ನು ಕ್ಯಾನ್ಸಲ್ ಮಾಡಿ ಎಂದು ಒತ್ತಾಯಿಸಿ ನಿನ್ನೆ ಈ ರೀತಿ ಮಾಡಿಕೊಂಡಿದ್ದಾರೆ. ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
ಸಚಿವ ಚಲುವರಾಯಸ್ವಾಮಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಜಗದೀಶ್ ಅವರು ಸಚಿವರ ಶಿಫಾರಸ್ಸಿನ ಮೇರೆಗೆ ನನ್ನನ್ನು ವರ್ಗಾವಣೆ ಮಾಡಿದ್ದಾರೆ. ನನಗೆ ಹಿರಿಯ ಅಧಿಕಾರಿಗಳು ಕೊಟ್ಟಿರುವ ಟಾರ್ಚರ್ನಲ್ಲಿ ಸಚಿವರ ಕೈವಾಡ ಇದೆ ಎಂದು ಆತ್ಮಹತ್ಯೆಗೆ ಯತ್ನಿಸಿ ಸದ್ಯ ತುರ್ತು ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಪ್ರಶ್ನೆ ಮಾಡಿದ್ದಾರೆ. ಈ ನಡುವೆ ತಮ್ಮ ಮೇಲೆ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲೇ ಚಲುವರಾಯಸ್ವಾಮಿ ಈ ರೀತಿ ಪ್ರತಿಕ್ರಿಯೆ ನೀಡಿದ್ದು, ಮುಂದೆ ಯಾವ ಹಂತಕ್ಕೆ ಹೋಗುತ್ತದೆಯೋ ಕಾದು ನೋಡಬೇಕಿದೆ.