CRIMENEWSನಮ್ಮರಾಜ್ಯ

KSRTC ನಂಜನಗೂಡು: ಗ್ರೀನ್‌ ಕಾರ್ಡ್‌ ಹೆಸರಿನಲ್ಲಿ ತಿಂಗಳಿಗೆ ತಲಾ 15 ಸಾವಿರ ರೂ. ವಸೂಲಿ- ಸಂಸ್ಥೆಯ ಆದಾಯಕ್ಕೆ ಕತ್ತರಿ!?

ವಿಜಯಪಥ ಸಮಗ್ರ ಸುದ್ದಿ

ನಂಜನಗೂಡು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ನಗರ ವಿಭಾಗದ ನಂಜನಗೂಡು ಘಟಕದಲ್ಲಿ ನಿರ್ವಾಹಕರಿಗೆ ಅಕ್ರಮವಾಗಿ ಗ್ರೀನ್‌ ಕಾರ್ಡ್‌ ಕೊಟ್ಟು ಸಂಸ್ಥೆಯ ಆದಾಯಕ್ಕೆ ಕತ್ತರಿಹಾಕುವ ಮೂಲಕ ಲಕ್ಷಾಂತರ ರೂಪಾಯಿ ನುಂಗುವ ಒಂದು ದೊಡ್ಡಜಾಲವೇ ತಲೆಯತ್ತುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಗ್ರೀನ್‌ ಕಾರ್ಡ್‌ ಎಂದರೇನು?: ಗ್ರೀನ್‌ ಕಾರ್ಡ್‌ ಎಂದರೆ ಸಂಸ್ಥೆಯ ಮೈಸೂರು ನಗರ ವಿಭಾಗದ ಮಟ್ಟದ ಕೆಲ ಅಧಿಕಾರಿಗಳು ಸೇರಿಕೊಂಡು ಸಂಸ್ಥೆಯ ಆದಾಯವನ್ನು ತಿರುಚಿ ತಮ್ಮ ಜೇಬುಗಳಿಗೆ ಇಳಿಸಿಕೊಳ್ಳಲು ಮಾಡಿಕೊಂಡಿಕೊಂಡಿರುವ ಒಂದು ಅಕ್ರಮವಾದರೂ ವ್ಯವಸ್ಥಿತ ವ್ಯವಸ್ಥೆಯ ಜಾಲದ ರೂಪವಾಗಿದೆ.

ಈ ಗ್ರೀನ್‌ ಕಾರ್ಡ್‌ಅನ್ನು ಯಾರಿಗೆಂದರೆ ಅವರಿಗೆ ಕೊಡುವುದಿಲ್ಲ. ತಮಗೆ ನಿಷ್ಠರಾಗಿದ್ದು, ಪ್ರಾಮಾಣಿಕವಾಗಿ ತಮ್ಮ ಅಕ್ರಮದಲ್ಲಿ ಕೈಜೋಡಿಸುತ್ತಾರೆ ಎಂಬ ನಂಬಿಕೆ ಗಳಿಸಿಕೊಂಡಿರುವ ನಿರ್ವಾಹಕರಿಗೆ ಮಾತ್ರ ಈ ಕಾರ್ಡ್‌ಗಳನ್ನು ವಿತರಣೆ ಮಾಡಲಾಗುತ್ತದೆ.

ಬಳಿಕ ಲೈನ್‌ ಚೆಕಿಂಗ್‌ನಲ್ಲಿರುವ ಕೆಲ ಸಿಬ್ಬಂದಿಗಳಿಗೂ ಈ ಅಕ್ರಮದ ಬಗ್ಗೆ ಸಮಗ್ರವಾದ ಮಾಹಿತಿ ಕೊಟ್ಟಿರುತ್ತಾರೆ. ಇವರಲ್ಲೂ ಸಂಸ್ಥೆಗೆ ಪ್ರಾಮಾಣಿಕರಾಗಿರುವ ಲೈನ್‌ ಚೆಕಿಂಗ್‌ ಸಿಬ್ಬಂದಿಗಳನ್ನು ಈ ಭ್ರಷ್ಟಕೂಟ ಹೊರಗಿಟ್ಟು ತಮಗೆ ನಿಷ್ಠರಾಗಿರುವವರಿಗೆ ಮಾತ್ರ ಮಾಹಿತಿ ಕೊಟ್ಟಿರುತ್ತಾರಂತೆ.

ಇನ್ನು ಘಟಕದಿಂದ ಬಸ್‌ ಮಾರ್ಗಕ್ಕೆ ಇಳಿದ ಬಳಿಕ ಲೈನ್‌ ಚೆಕಿಂಗ್‌ ಸಿಬ್ಬಂದಿ ಬಸ್‌ ಹತ್ತಿ ಟಿಕೆಟ್‌ ತಪಾಸಣೆ ಮಾಡುವಾಗಿ ಈ ಗ್ರೀನ್‌ ಕಾರ್ಡ್‌ ಬಗ್ಗೆ ನಿರ್ವಾಹಕರು ಮತ್ತು ಲೈನ್‌ ಚೆಕಿಂಗ್‌ ಸಿಬ್ಬಂದಿ ಪರಸ್ಪರ ವ್ಯವಹರಿಸಿಕೊಳ್ಳುತ್ತಾರೆ. ಗ್ರೀನ್‌ ಕಾರ್ಡ್‌ ನಂಬರ್‌ ಹೇಳುತ್ತಿದ್ದಂತೆ ಟಿಕೆಟ್‌ ತಪಾಸಣೆ ಮಾಡುವ ಸಿಬ್ಬಂದಿ ಎಲ್ಲವನ್ನು ಓಕೆ ಮಾಡುತ್ತಾರಂತೆ.

ತಿಂಗಳಿಗೆ 15 ಸಾವಿರ ರೂಪಾಯಿ ಫಿಕ್ಸ್‌?: ನೋಡಿ ಈ ಗ್ರೀನ್‌ ಕಾರ್ಡ್‌ಗಳನ್ನು ಕೊಡುವುದಕ್ಕೆ ಘಟಕದಲ್ಲಿ ಚಾಲಕ ಕಂ ನಿರ್ವಾಹಕನಾಗಿರುವ ಸಂಸ್ಥೆಯ ಆದಾಯದಲ್ಲಿ ತಿಂದು ತೇಗುವ ಮಹಾ ಭ್ರಷ್ಟನನ್ನು ಈ ವಿಭಾಗದ ಮಟ್ಟದ ಹಾಗೂ ಘಟಕ ಮಟ್ಟದ ಅಧಿಕಾರಿಗಳು ನೇಮಿಸಿಕೊಂಡಿದ್ದಾರಂತೆ. ಹೀಗಾಗಿ ನೇರವಾಗಿ ಯಾವುದೇ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿಲ್ಲ ಎಂದು ತಿಳಿದು ಬಂದಿದೆ.

ಇನ್ನು ಈ ಘಟಕದಲ್ಲಿರುವ ಭ್ರಷ್ಟ ಚಾಲಕ ಕಂ ನಿರ್ವಾಹಕನಾಗಿರುವ ವ್ಯಕ್ತಿ ನಿರ್ವಾಹಕರಿಗೆ ಗ್ರೀನ್‌ ಕಾರ್ಡ್‌ ಕೊಟ್ಟು ಅದನ್ನು ಬಳಸುವ ಬಗ್ಗೆ ಸಮಗ್ರವಾದ ಮಾಹಿತಿ ಕೊಡುತ್ತಾನೆ. ಈ ವೇಳೆ ಸಂಸ್ಥೆಗೆ ಪ್ರಾಮಾಣಿಕವಾಗಿರುವ ನಿರ್ವಾಹಕರು ನಮಗೆ ಬೇಡ ಎಂದರೆ ಇದನ್ನು ಯಾರಿಗೂ ಹೇಳ ಬೇಡ ಹೇಳಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ದಮ್ಕಿ ಕೂಡ ಹಾಕುತ್ತಾನಂತೆ.

ಇನ್ನು ಇದಕ್ಕೆ ಸಾಥ್‌ ನೀಡುವ ನಿರ್ವಾಹಕರು ತಿಂಗಳಿಗೆ ಅವರು ಎಷ್ಟಾದರೂ ಕೊಳ್ಳೆಹೊಡೆಯಬಹುದು. ಆದರೆ, ತಿಂಗಳಿಗೆ ಗ್ರೀನ್‌ ಕಾರ್ಡ್‌ ಹೆಸರಿನಲ್ಲಿ 15 ಸಾವಿರ ರೂಪಾಯಿಯನ್ನು ಈ ಚಾಲಕ ಕಂ ನಿರ್ವಾಹಕನಾಗಿರುವ ಘಟಕ ಹಾಗೂ ವಿಭಾಗದ ನಡುವೆಯಷ್ಟೇ ಓಡಾಡಿಕೊಂಡಿರುವ ಕೆಲಸಮಾಡದ ಈತ ಆ ಹಣವನ್ನು ಪಡೆದು ಎಲ್ಲ ಅಧಿಕಾರಿಗಳಿಗೂ ಅವರವರ ಪಾಲನ್ನು ಕೊಡುತ್ತಾನಂತೆ.

ಸಂಸ್ಥೆಗೆ ಹೇಗೆ ಯಾಮಾರಿಸುತ್ತಾರೆ?: ಪ್ರಸ್ತುತ ರಾಜ್ಯದಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್‌ ವಿತರಣೆ ಮಾಡಲಾಗುತ್ತಿದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಈ ಗ್ರೀನ್‌ ಕಾರ್ಡ್‌ ಹೊಂದಿರುವ ನಿರ್ವಾಹಕರು ಪುರುಷ ಪ್ರಯಾಣಿಕರಿಗೂ ಮಧ್ಯೆದಲ್ಲಿ ಈ ಮಹಿಳೆಯರ ಉಚಿತ ಟಿಕೆಟ್‌ ವಿತರಿಸುತ್ತಾರಂತೆ. ಅದನ್ನು ಗಮನಿಸಿ ಪ್ರಯಾಣಿಕರು ಪ್ರಶ್ನೆ ಮಾಡಿದರೆ ಕ್ಷಮಿಸಿ ಸರ್‌ ಮಿಸ್‌ಆಗಿ ಬಂದಿದೆ. ದಯಮಾಡಿ ಇದನ್ನೇ ಇಟ್ಟುಕೊಳ್ಳಿ ಇಲ್ಲದಿದ್ದರೆ ನನ್ನ ವೇತನದಲ್ಲಿ ಹಣ ಕಡಿತವಾಗಿ ಬಿಡುತ್ತದೆ ಎಂದು ನಂಬಿಸುತ್ತಾರಂತೆ.

ಹೀಗೆ ಲಾಂಗ್‌ ರೂಟ್‌ನಲ್ಲಿ ದಿನಕ್ಕೆ 15ರಿಂದ 20 ಟಿಕೆಟ್‌ಗಳನ್ನು ಪುರುಷ ಪ್ರಯಾಣಿಕರಿಗೆ (100 ರೂ.ಗಳಿಂದ 150 ರೂ.ಗಳ ಟಿಕೆಟ್‌) ವಿತರಿಸಿ ಅವರು ಕೊಟ್ಟ ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಾರಂತೆ. ಈ ವೇಳೆ ಲೈನ್‌ ಚೆಕಿಂಗ್‌ ಸಿಬ್ಬಂದಿ ಬಂದರೆ ಗ್ರೀನ್‌ ಕಾರ್ಡ್‌ ಹೆಸರು ಹೇಳುತ್ತಾರಂತೆ. ಆಗ ಅವರು ತಪಾಣೆ ಮಾಡಿದಂತೆ ನಾಟಕವಾಡಿ ವರದಿ ಕೊಡುತ್ತಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಈ ಹಿಂದೆ ಬಿಎಂಟಿಸಿಯಲ್ಲಿ ಬಿಎಂ (ಬೋರ್ಡ್‌ ಮೆಂಬರ್‌) ಹೆಸರಿನ ಜಾಲವಿತ್ತು. ಅದೇ ರೀತಿ ಈಗ ಗ್ರೀನ್‌ ಕಾರ್ಡ್‌ ಹೆಸರಿನಲ್ಲಿ ದೊಡ್ಡಜಾಲವಿದ್ದು ಇದು ಹೀಗೆ ಮುಂದುವರಿದರೆ ಇಡೀ ಸಂಸ್ಥೆಯ ಎಲ್ಲ ಘಟಕಗಳನ್ನು ಆವರಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಾರಿಗೆ ಸಚಿವರು ಮೊಳಕೆಯಲ್ಲೇ ಚಿವುಟಿ ಹಾಕುವ ಕೆಲಸ ಮಾಡಬೇಕಿದೆ ಎಂದು ಸಂಸ್ಥೆಯ ಪ್ರಾಮಾಣಿಕ ನೌಕರರು ಒತ್ತಾಯಿಸಿದ್ದಾರೆ.

Megha
the authorMegha

Leave a Reply

error: Content is protected !!