ನಮ್ಮಜಿಲ್ಲೆನಮ್ಮರಾಜ್ಯ

KSRTC “ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ”: ನೌಕರರಿಗೆ 38 ತಿಂಗಳ ಹಿಂಬಾಕಿ, 2024ರ ವೇತನ ಹೆಚ್ಚಳ ಮಾಡಲಾಗದಿದ್ದರೂ ಸರ್ಕಾರದಿಂದ “ಶಕ್ತಿಯ” ಒಣಾಡಂಬರ..!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: “ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ” ಅಂದಂಗೆ ಸಾರಿಗೆ ನೌಕರರಿಗೆ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಟ್ಟಿಲ್ಲ. ಜತೆಗೆ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳ ಮಾಡಿಲ್ಲ. ಈ ವೇತನ ಹೆಚ್ಚಳ ಮಾಡಿದರೆ ಮತ್ತೆ 18 ತಿಂಗಳ ಇದರ ಹಿಂಬಾಕಿಯನ್ನು ಕೊಡಬೇಕು ಇದರ ಬಗ್ಗೆ ಕ್ರಮ ಕೈಗೊಳ್ಳದ ಸರ್ಕಾರ ಶಕ್ತಿ ಯೋಜನೆ ಹೆಸರಿನಲ್ಲಿ ಜನರ ದುಡ್ಡಿನಿಂದ ಸಂಭ್ರಮಿಸುತ್ತಿದೆ.

ಅದಕ್ಕೆ ಹೇಳುತ್ತಿರುವುದು “ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ” ಇದು ಕನ್ನಡದ ಗಾದೆ. ಇದರ ಅರ್ಥವೇನೆಂದರೆ, ಊಟಕ್ಕೂ ಗತಿ ಇಲ್ಲದಿದ್ದರೂ, ತೋರಿಕೆಗೆ ಚೆನ್ನಾಗಿ ಕಾಣಿಸಿಕೊಳ್ಳುವುದು ಅಥವಾ ಆಡಂಬರ ಮಾಡುವುದು. ಅಂದರೆ ನ್ಯಾಯಯುತವಾಗಿ ನೌಕರಿಗೆ ಕೊಡಬೇಕಿರುವ ವೇತನವನ್ನು ಕೊಡುವ ಬಗ್ಗೆ ಮಾತನಾಡುತ್ತಿಲ್ಲ.

ಆದರೆ ನಾಡಿನ ಜನರ ಮೆಚ್ಚುಗೆಗಾಗಿ ಅನಗತ್ಯವಾಗಿ ಸಾರ್ವಜನಿಕರ ಹಣ ವ್ಯಯಿಸಿ ಶಕ್ತಿ ಯೋಜನೆ ಹೆಸರಿನಲ್ಲೂ ಕೊಳ್ಳೆಹೊಡೆಯುವ ಹುನ್ನಾರ ಮಾಡುತ್ತಿದೆ ಈ ನಾಚಿಕೆ ಇಲ್ಲದ ಸರ್ಕಾರ. ನೌಕರರಿಗೆ ಸಿಗಬೇಕಿರುವ ಮೂಲಭೂತ ಅವಶ್ಯಕತೆಗಳನ್ನು ಪೂರೈಸದಿದ್ದರೂ ಈ ತೋರಿಕೆಯ ಆಡಂಬರದಲ್ಲಿ ತೊಡಗುವುದು ಎಷ್ಟು ಸರಿ ಎಂದು ಪ್ರಜ್ಞಾವಂತ ನಾಗರಿಕರು ಚೀಮಾರಿ ಹಾಕುತ್ತಿದ್ದಾರೆ ಈ ಸರ್ಕಾರಕ್ಕೆ.

ಇನ್ನು ಈಗಲಾದರೂ ತಾವು ವಿಧಾನಸಭೆ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ನೌಕರರಿಗೆ ಸರಿ ಸಮಾನ ವೇತನ ಮಾಡಬೇಕು. ಜತೆಗೆ 38 ತಿಂಗಳ ಹಿಂಬಾಕಿ ಕೊಡಬೇಕು. ನೌಕರರಿಗೆ ಸಿಗಬೇಕಿರುವ ಇತರ ಸಲವತ್ತುಗಳನ್ನು ಕೂಡಲೇ ಕೊಡುತ್ತೇವೆ ಎಂದು ಘೋಷಣೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಇದೇ ನಾಡಿನ ಜನ ಆಗ್ರಹಿಸಿದ್ದಾರೆ.

ಇನ್ನು ಸಾರಿಗೆ ಸಚಿವರು ಹಳೆ ಕತೆಯನ್ನೇ ಅಂದರೆ ಹಿಂದಿನ ಬಿಜೆಪಿ ಸರ್ಕಾರ 5900 ಕೋಟಿ ರೂ. ಹೊರೆ ಹಾಕಿ ಹೋಯಿತು ಎಂದು ಹೇಳಿಕೊಂಡು ತಿರುಗುತ್ತಿರುವುದು ಬಿಟ್ಟರೆ ಅಧಿಕಾರ ವಹಿಸಿಕೊಂಡ ಈವರೆಗೂ ಇವರಿಗೆ ನೌಕರರಿಗೆ ಕೊಡಬೇಕಿರುವ 38 ತಿಂಗಳ ಹಂಬಾಕಿ ಕೊಡುವುದಕ್ಕೂ ಆಗಿಲ್ಲ. ಆದರೆ ಸಾರಿಗೆ ನೌಕರರು ನಮ್ಮ ಕುಟುಂಬ ಇದ್ದಂತೆ ಎಂದು ತಲೆಮೇಲೆ ಕೈಯಾಡಿಸುತ್ತ ನೌಕರರನ್ನು ಕಳೆದ 2 ವರ್ಷಗಳಿಂದಲೂ ಯಾಮಾರಿಕೊಂಡು ಬರುವುದರಲ್ಲಿ ಭಾರೀ ಜಾಣ್ಮೆ ಪ್ರದರ್ಶಿಸುತ್ತಿದ್ದಾರೆ.

ಈ ನಡುವೆ ಸಾರಿಗೆ ನೌಕರರಿಗೆ ಸಿಗಬೇಕಿರುವ ನ್ಯಾಯಯುತ ಸೌಲಭ್ಯ ಕೊಡಿಸುವುದಕ್ಕೆ ಮುಂದಾಗಬೇಕಾದ ಸಂಘಟನೆಗಳು ತಮ್ಮ ಸ್ವಾರ್ಥಕ್ಕಾಗಿ ಒಬ್ಬರಿಗೊಬ್ಬರು ಮಾಧ್ಯಮಗಳ ಮುಂದೆ ನಿಂದಿಸಿಕೊಳ್ಳುವುದರಲ್ಲೇ ಕಾಲ ಕಳೆಯುತ್ತಾಲೇ 4-5 ಕಳೆದಿದ್ದಾರೆ. ಇದರಿಂದ ನೌಕರರಿಗೆ ಪ್ರಯೋಜನವಾಗಿದ್ದಾದರು ಏನು?

ಇನ್ನು ನಾವು ಸರಿ ಸಮಾನ ವೇತನ ಕೊಡಿಸುತ್ತೇವೆ ದುಡುಕಬೇಡಿ ಎಂದು ಹೇಳಿಕೊಳ್ಳುತ್ತಿರುವ ಕೂಟ ಈವರೆಗೂ ಈ ಹೇಳಿಕೆ ಕೊಡುವುದನ್ನು ಬಿಟ್ಟರೆ ಮತ್ತೇನನ್ನು ಮಾಡುತ್ತಿಲ್ಲ. ಇತ್ತ ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಇಲ್ಲ ಇಲ್ಲ ಸಾರಿಗೆ ಕಾರ್ಮಿಕರಿಗೆ ಸರ್ಕಾರಿ ನೌಕರರಿಗಿಂತ ಹೆಚ್ನ ವೇತನ ಸಿಗುವಂತೆ ಮಾಡುವುದೇ ನಮ್ಮ ಗುರಿ ನಾವೇಕೆ ಸರಿ ಸಮಾನ ವೇತನ ಕೇಳಬೇಕು ಅದಕ್ಕಿಂತಲೂ ಹೆಚ್ಚಿನ ವೇತನ ಕೊಡಿಸುತ್ತೇವೆ ಎಂದು ಕೇವಲ ಶೇ.25ರಷ್ಟು ವೇತನ ಹೆಚ್ಚಳ ಮಾಡಿ ಎಂದು ಸರ್ಕಾರಕ್ಕೆ ಆಗ್ರಹ ಮಾಡುತ್ತಾರೆ.

ಶೇ.40ರಿಂದ 45ರಷ್ಟು ವೇತನ ಕಡಿಮೆ ಪಡೆಯುತ್ತಿರುವ ನೌಕರರಿಗೆ ಇವರ ಒತ್ತಾಯದಂತೆ ಸರ್ಕಾರ ಶೇ.25ರಷ್ಟು ವೇತನ ಹೆಚ್ಚಳ ಮಾಡಿದರೆ ಸರ್ಕಾರಿ ನೌಕರರಿಗಿಂತಲೂ ಹೆಚ್ಚಿನ ವೇತನ ಕೊಡಿಸಿದಂತಾಗುತ್ತದೆಯೇ? ಇಲ್ಲ ಮತ್ತೆ 2028ಕ್ಕೆ ಇನ್ನೊಂದು ಒಪ್ಪಂದವಾಗುತ್ತದೆ ಆ ವೇಳೆ ಮತ್ತೆ ಶೇ.25ರಷ್ಟು ವೇತನ ಹೆಚ್ಚಳ ಮಾಡಿದರೆ ಸರ್ಕಾರಿ ನೌಕರರಿಗಿಂತ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ.

ಅಂದರೆ, ಈಗ ಕಡಿಮೆ ತೆಗೆದುಕೊಳ್ಳಿ ಮುಂದೆ ಹೆಚ್ಚಾಗುತ್ತದೆ ಎಂಬುವುದು ಇವರ ಮಾತು. ಆದರೆ ಈ 2024-2028ರ ನಡುವೆ ನಿವೃತ್ತಿ ಹೊಂದುವವರಿಗೆ ಎಷ್ಟು ವೇತನ ಹೆಚ್ಚಳವಾದಂತಾಗುತ್ತದೆ. ಅವರಿಗೆ ಲಾಸ್‌ ಆಗುವುದಿಲ್ಲವೇ ಎಂದರೆ ಅದಕ್ಕೆ ನಾವೇನು ಮಾಡುವುಕ್ಕೂ ಆಗುವುದಿಲ್ಲ ಎಂಬ ಹೇಳಿಕೆ ನೀಡುತ್ತಾರೆ ಈ ಜಂಟಿಯವರು. ಇದಕ್ಕೆ ಏನು ಹೇಳಬೇಕು?

ಏನೆ ಆಗಲೇ ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಆಗಲೇ ಬೇಕು ಎಂದು ಕಳೆದ 5 ವರ್ಷಗಳಿಂದಲೂ ಪಟ್ಟು ಹಿಡಿದಿರುವ ನೌಕರರ ಒಕ್ಕೂಟ ಈಗಲಾದರೂ ತಮ್ಮ ಬೇಡಿಕೆ ಈಡೇರಿಸಲೇ ಬೇಕು ಎಂದು ಒಂದು ಗಡುವನ್ನು ನೀಡಬೇಕು. ಆ ಗಡುವಿನಲ್ಲಿ ಸರ್ಕಾರ ವೇತನ ಹೆಚ್ಚಳ ಮಾಡದಿದ್ದರೆ ಅಧಿಕಾರಿಗಳ ಒಳಗೊಂಡಂತ್ತೆ ಹೋರಾಟಕ್ಕೆ ದುಮುಕಬೇಕು. ಹೀಗೆ ಆದರೆ ಸರ್ಕಾರ ತಾನು ಕೊಟ್ಟಿರುವ ಭರವಸೆ ಈಡೇರಿಸುತ್ತದೆ ಇಲ್ಲ ಹೀಗೆ ಕಾಲ ದೂಡುತ್ತಲೇ ಹೋಗುತ್ತದೆ. ಹೀಗಾಗಿ ಈಗಲಾದರೂ ಒಕ್ಕೂಟ ಹಾಗೂ ಸಾರಿಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂಬುವುದು ಸಾಮಾನ್ಯ ನೌಕರರ ಆಗ್ರಹ.

Megha
the authorMegha

Leave a Reply

error: Content is protected !!