ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಸಮಸ್ತ ನೌಕರರ ಪರವಾಗಿ ಶೇ.45ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಬೇಡಿಕೆ ಇಟ್ಟು ಈ ಬಗ್ಗೆ 2023ರ ಫೆಬ್ರವರಿ ತಿಂಗಳಿನಲ್ಲಿ ಹೈ ಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದ ವಕೀಲರ ನಡೆಯನ್ನು ಟೀಕಿಸಿದ್ದ ಜಂಟಿ ಸಂಘಟನೆ ಮತ್ತು ಸದಾ ನಾವು ನೌಕರರ ಪರ ಎಂದು ಹೇಳುವ ವ್ಯಕ್ತಿ ಸರ್ಕಾರಿ ನೌಕರರಿಗೆ ಒಟ್ಟಾರೆ ಶೇ.58.5ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿರುವ ಬಗ್ಗೆ ಏನು ಹೇಳುತ್ತಾರೆ?
ಶೇ.45ರಷ್ಟು ವೇತನ ಕೊಡಿಸುವುದಕ್ಕೆ ಅಂದು ಕರ್ನಾಟಕ ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ಅವರು ಮುಂದಾಗಿದ್ದನ್ನು ಟೀಕಿಸಿದ್ದ ಈ ಮಹಾನುಭಾವರ ದಿಸೆಯಿಂದ ಇಂದು ಸರ್ಕಾರಿ ನೌಕರರಿಗಿಂತಲೂ ಹೆಚ್ಚು ವೇತನ ಪಡೆಯಬೇಕಾದ ನೌಕರರು ಸುಮಾರು ಶೇ.45ರಷ್ಟು ಕಡಿಮೆ ವೇತನ ಪಡೆಯುವಂತಾಗಿದೆ.
ಇನ್ನು ಈ ಪರಿಸ್ಥಿತಿಯಲ್ಲೂ ಇಂಥವರನ್ನೇ ಕೆಲ ನೌಕರರು ನಂಬಿಕೊಂಡು ಅವರ ಹಿಂದೆ ಹೋಗುತ್ತಿರುವುದು ಏನನ್ನು ಸಾಧಿಸುವುದಕ್ಕೆ ಎಂಬುವುದು ಗೊತ್ತಾಗುತ್ತಿಲ್ಲ. ಇನ್ನಾದರೂ ಇಂಥ ನೌಕರರ ವಿರೋಧಿ ಜಂಟಿ ಸಂಘಟನೆಯನ್ನು ಬಿಟ್ಟು ನೌಕರರ ಪರವಾಗಿ ಸದಾ ನಿಲ್ಲುತ್ತಿರುವ ಕೂಟಕ್ಕೆ ಸಮಸ್ತ ನೌಕರರು ಬೆಂಬಲ ನೀಡಿ ತಮಗೆ ನ್ಯಾಯಯುತವಾಗಿ ಸಿಗಬೇಕಿರುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಕೂಟದ ಅಧ್ಯಕ್ಷ ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಸಾರಿಗೆ ನೌಕರರನ್ನು ನಂಬಿಸಲು ಈ ನಿಗಮಕ್ಕೆ ವರ್ಗಾವಣೆಗೊಂಡು ಬಂದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಕೆಲ ಸಂಘಟನೆಗಳ ಮುಖಂಡರ ಕೈಗೊಂಬೆಯಾಗಿ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಪರಿಣಾಮ ಕಳೆದ 2020 ಜನವರಿ 1ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬಿಡುಗೆ ಮಾಡುವುದಕ್ಕೆ ಮೀನಮೇಷ ಎಣಿಸುತ್ತಿದ್ದಾರೆ.
ಇಂಥ ಅಧಿಕಾರಿಗಳು ನಾಲ್ಕೂ ನಿಗಮಗಳಲ್ಲೂ ಸೇರಿಕೊಂಡರೆ ಈ ಎಲ್ಲ ನಿಗಮಗಳ ಅಧಿಕಾರಿಗಳು ಮತ್ತು ನೌಕರರ ಪಾಡು ಮೂರಾಬಟ್ಟೆಯಾಗುವುದರಲ್ಲಿ ಸಂಶಯವೇ ಇಲ್ಲ. ನೌಕರರು ಮಾಡುವ ಪ್ರತಿಭಟನಾ ಧರಣಿ ಸ್ಥಳಕ್ಕೆ ಖುದ್ದು ಹೋಗಿ ಅವರಿಗೆ ಬೆಣ್ಣೆಯಲ್ಲಿ ಕೂದಲು ತೆಗೆದಷ್ಟೆ ನಂಬಿಕೆಯ ಮಾತನಾಡಿ ಬಂದಿರುವ ಈ ಎಂಡಿ ಅನ್ಬುಕುಮಾರ್ 2500 ಮಂದಿ ಇರುವ ನಿವೃತ್ತ ನೌಕರರ ಪರಿಷ್ಕರಣೆಗೊಂಡಿರುವ ವೇತನ ಕೊಡುವುದಕ್ಕೆ 93 ದಿನಗಳು ಕೊಟ್ಟು ಆದೇಶ ಮಾಡಿರುವ ಮಹಾನ್ ಅಧಿಕಾರಿ.
ಇದನ್ನು ಗಮನಿಸಿದರೆ ಇಂಥ ಅಧಿಕಾರಿಗಳು ಒಂದು ಈ ರೀತಿ ಕೆಲವರ ಕೈಗೊಂಬೆಗಳಾಗಿ, ಕಾನೂನು ರೀತಿ ನಾವು ನಡೆದುಕೊಳ್ಳಬೇಕು ಎಂದು ಅಧಿಕಾರ ವಹಿಸಿಕೊಂಡಾಗ ತೆಗೆದುಕೊಂಡ ಪ್ರತಿಜ್ಞೆಯನ್ನೇ ಮರೆತಿರುವುದು ನೋವಿನ ಸಂಗತಿ. ಇನ್ನು ನೌಕರ ವಿರೋಧಿ ಚಟುವಟಿಯಲ್ಲಿ ಸದಾ ತೊಡಗುತ್ತಿದ್ದ ಕ್ರಿಮಿಗಳನ್ನು ಹತ್ತಿರವೂ ಸುಳಿಯಲು ಬಿಡದ ಬಿಎಂಟಿಸಿಯ ನಿಕಟ ಪೂರ್ವ ಎಂಡಿ ಸತ್ಯವತಿ ಮಹಿಳಾಧಿಕಾರಿಯಾದರೂ ದಕ್ಷ ಆಡಳಿತ ನಡೆಸಿ ನೌಕರರ ಪಾಲಿಗೆ ದೇವರಾಗಿದ್ದರು.
ಈ ರೀತಿ ಹೆಸರು ಮಾಡುವುದಕ್ಕೂ ಯೋಗ್ಯತೆ ಇರಬೇಕು. ಆ ಯೋಗ್ಯತೆ ಕೆಎಸ್‌ಆರ್‌ಟಿಸಿ ಎಂಡಿ ನನಗಿಲ್ಲ ಎಂಬುವುದನ್ನು ತೋರಿಸಿಕೊಂಡು ಕೆಲ ಸಂಘಟನೆಗಳ ಪರ ನಿಂತು ತಮ್ಮತನವನ್ನೇ ಅಡವಿಟ್ಟಿರುವುದು ನೌಕರರಲ್ಲಿ ಬೇಸರ ಮೂಡಿಸುತ್ತಿದೆ. ಇನ್ನಾದರೂ ತಾವು ಒಬ್ಬ ಐಎಎಸ್ ಅಧಿಕಾರಿ ನಾನು ಯಾರ ಕೈಗೊಂಬೆಯೂ ಅಲ್ಲ ಎಂಬುದನ್ನು ತೋರಿಸಿ ಸರ್ಕಾರಿ ನೌಕರರಿಗೆ ಸರಿ ಸಮನಾದ ವೇತನ ಕೊಡಿಸುವುದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಸರ್ಕಾರಿ ನೌಕರರಿಗೆ ಒಟ್ಟಾರೆ ಶೇ.58.5ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಮಾಡಿದ್ದು ಅಲ್ಲದೆ ಅದನ್ನು ಪ್ರಸ್ತುತ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲೂ ಓದುವ ಮೂಲಕ ರೆಕಾರ್ಡ್‌ನಲ್ಲಿ ಸೇರುವಂತೆ ನೋಡಿಕೊಂಡಿದ್ದಾರೆ. ಇದಕ್ಕೆ ಅಭಿನಂದನೆ ತಿಳಿಸುತ್ತೀರೋ ಇಲ್ಲವೋ ಎಂದು ಜಂಟಿ ಸಂಘಟನೆಯ ಮಹಾನುಭವಬ್ಬರು ತಿಳಿಸಬೇಕು.
ಏಕೆಂದರೆ ಈ ಹಿಂದೆ ಅಂದರೆ 2023ರಲ್ಲಿ ಹೇಳಿದ್ದರಲ್ಲ ಶೇ.45ರಷ್ಟು ವೇತನ ಹೆಚ್ಚಳವಾದರೆ ಎಲ್ಲಿ ಇಟ್ಟುಕೊಳ್ಳುತ್ತೀರಿ? ನೀವು ಕೆಲಸ ಮಾಡುತ್ತೀರಾ ಎಂದು. ಇಂದು ಹೇಳಿ ಎಲ್ಲಿ ಇಟ್ಟುಕೊಳ್ಳಬೇಕು. ಕೆಲಸ ಮಾಡಬೇಕೋ ಬೇಡವೋ ಅಂತ ಎಂದು ಸಾರಿಗೆ ನೌಕರರು ವ್ಯಂಗ್ಯವಾಗಿ ಪ್ರಶ್ನಿಸುತ್ತಿದ್ದಾರೆ.
2020ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆಯ ಶೇ.15ರಷ್ಟು ಹೆಚ್ಚಳದ ಹಿಂಬಾಕಿ ಕೊಡುವುದಕ್ಕೆ ನಿಗಮಗಳಲ್ಲಿ ಹಣವಿಲ್ಲ ಎಂದು ನೀವೇ ಬೊಬ್ಬೆಹೊಡೆದರೆ ಆಡಳಿತ ಮಂಡಳಿ ನಮಗೆ ಸೌಲಭ್ಯಕೊಡಲು ಮುಂದಾಗುತ್ತದೆಯೇ? ನೀವುಗಳು ನಮ್ಮ ಮುಖಂಡರು ಅಲ್ವಾ?
ನೀವು ನಮ್ಮ ಪರವಾಗಿ ಹೋರಾಟ ಮಾಡುತ್ತಿದ್ದೀರೋ ಇಲ್ಲ ಸರ್ಕಾರದ ಪರ ಆಡಳಿತ ಮಂಡಳಿಗಳ ಪರವಾಗಿ ಹೋರಾಟ ಮಾಡುತ್ತಿದ್ದೀರೋ ಎಂಬುದನ್ನು ಬಹಿರಂಗವಾಗಿ ಹೇಳುತ್ತೀರ ನಿಮ್ಮ ಬಾಯಿಂದ ಅದನ್ನು ಕೇಳಿಸಿಕೊಂಡಾದರೂ ನಮ್ಮ ಕರ್ಣಗಳು ಸಮಾಧಾನಗೊಳ್ಳಲಿ ಎಂದು ಕಿಡಿಕಾರುತ್ತಿದ್ದಾರೆ.
ಇನ್ನು ನೀವು ಕಳೆದ 3-4 ದಶಕಗಳಿಂದ ನೌಕರರನ್ನು ತುಳಿಯುತ್ತಲೇ ಅವರ ಹಣದಲ್ಲೇ ಅಂದರೆ ವಂತಿಕೆ, ದೇಣಿಗೆ, ಸಹಕಾರ ಸಂಘಗಳಲ್ಲಿ ನೌಕರರು ಹೂಡಿರುವ ಹಣದಿಂದಲೇ ನಿಮ್ಮ ಜೀವನ ಸಾಗಿಸುತ್ತ ಬಂದಿರುವ ನಿಮಗೆ ನೌಕರರ ಪರವಾಗಿ ಧ್ವನಿಯಾಗಬೇಕು ಎಂಬ ಮನಸ್ಸಿಲ್ಲದಿರುವುದು ಭಾರೀ ನೋವು ತರುತ್ತಿದೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.