ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ 15ಮಂದಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಿಡಿಸಿದ್ದಾರೆ.
ಪ್ರಸ್ತುತ KSRTC ಕೇಂದ್ರ ಕಚೇರಿಯಲ್ಲಿ ಮುಖ್ಯ ಕಾನೂನು ಅಧಿಕಾರಿಯಾಗಿದ್ದ ಪ್ರಸನ್ನಕುಮಾರ ಬಾಳನಾಯಕ್ ಅವರನ್ನು NWKRTC ಕೇಂದ್ರ ಕಚೇರಿಗೆ ಮುಖ್ಯ ಕಾನೂನು ಅಧಿಕಾರಿಯಾಗಿ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ.
KSRTC ನಿಗಮ ಮಾಲೂರಿನಲ್ಲಿರುವ ಕೇಂದ್ರೀಯ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿದ್ದ ಕೆ.ಆರ್. ವಿಶ್ವನಾಥ ಅವರನ್ನು ನಿಗಮ ಶಿವಮೊಗ್ಗ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ.
ನಿಗಮ ಚಿತ್ರದುರ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್. ಹೆಬ್ಬಾಳ್ ಅವರನ್ನು ದಾವಣಗೆರೆ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ, ನಿಗಮ ಶಿವಮೊಗ್ಗ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ವಿಜಯಕುಮಾರ ಅವರನ್ನು NWKRTCಗೆ ನಿ 17/1 ರಡಿ ಉಪ ಮುಖ್ಯ ಸಂಚಾರ ವ್ಯವಸ್ಥಾಪಕರಾಗಿ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ.
ನಿಗಮದ ಪುತ್ತೂರು ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಬಿ. ಅವರನ್ನು ಬಿಎಂಟಿಸಿ ಪಶ್ಚಿಮ ವಲಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ನಿಗಮದ ಪ್ರಾದೇಶಿಕ ತರಬೇತಿ ಕೇಂದ್ರ ಹೊಳಲ್ಕೆರೆಯಲ್ಲಿ ಪ್ರಾಂಶುಪಾಲರಾಗಿದ್ದ ನವೀನ್ ಟಿ.ಆರ್. ಅವರನ್ನು ನಿಗಮ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ.
ನಿಗಮದ ಕೋಲಾರ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜು ಅವರನ್ನು ಚಿಕ್ಕಬಳ್ಳಾಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಮತ್ತು ನಿಗಮದ ರಾಮನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಎಂ. ಅವರನ್ನು ಬಿಎಂಟಿಸಿ ಕೇಂದ್ರೀಯ ವಿಭಾಗ (ವೋಲ್ಲೊ)ದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.
ಬಿಎಂಟಿಸಿಯಲ್ಲಿ ಉಪ ಮುಖ್ಯ ಯಾಂತ್ರಿಕ ಅಭಿಯಂತರರಾಗಿದ್ದ ಎಸ್.ಆರ್. ಕಿರಣ್ ಕುಮಾರ್ ಅವರನ್ನು ನಿಗಮ ರಾಮನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನೇಮಿಸಲಾಗಿದೆ. ಹಾಗೆಯೇಮಂಗಳೂರಿನ ಸಾರಿಗೆ ಇಲಾಖೆ ನಿಯಂತ್ರಣದಲ್ಲಿರುವ ಭಾರಿ ವಾಹನ ಚಾಲಕರ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಕೆ.ಸತ್ಯ ಸುಂದರಂ ಅವರನ್ನು ಬಿಎಂಟಿಸಿ ಪೂರ್ವ ವಲಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನಿಯೋಜನೆಗೊಳಿಸಿ ಆದೇಶಿಸಿದ್ದಾರೆ.
ಬಿಎಂಟಿಸಿ ಪೂರ್ವ ವಲಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎನ್. ಶ್ರೀನಾಥ್ ಅವರನ್ನು ಕೆಎಸ್‌ಆರ್‌ಟಿಸಿ ನಿ 17/1 ರಡಿ ಉಪ ಮುಖ್ಯ ಸಂಚಾರ ವ್ಯವಸ್ಥಾಪಕರಾಗಿ ನಿಯೋಜಿಸಿದ್ದರೆ, ಬಿಎಂಟಿಸಿ ಕೇಂದ್ರೀಯ ವಿಭಾಗದ (ವೋಲ್ಲೊ) ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್. ನಾಗರಾಜ ಮೂರ್ತಿ ಅವರನ್ನು ಕೆಎಸ್‌ಆರ್‌ಟಿಸಿ ಉಪ ಮುಖ್ಯ ತಾಂತ್ರಿಕ ಅಭಿಯಂತರರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಬಿಎಂಟಿಸಿ ಪಶ್ಚಿಮ ವಲಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ಸಿದ್ದಲಿಂಗೇಶ್ ಅವರನ್ನು NWKRTC ಹುಬ್ಬಳ್ಳಿ -ಧಾರವಾಡ ನಗರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿಯೂ, ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಉಪ ಮುಖ್ಯ ಕಾನೂನು ಅಧಿಕಾರಿಯಾಗಿದ್ದ ಸತೀಶ್ ರಾಜು ಜೆ. ಅವರನ್ನು ಬಿಎಂಟಿಸಿಗೆ ನಿ 17/1 ರಡಿ ಉಪ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರಾಗಿ ನೇಮಿಸಲಾಗಿದೆ.
ನಿಗಮದ ದಾವಣಗೆರೆ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸಮೂರ್ತಿ ಸಿ.ಇ. ಅವರನ್ನು ಚಿತ್ರದುರ್ಗ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನಿಯೋಜಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ಇನ್ನು ಸಿದ್ದೇಶ್ವರ ಎನ್ ಹೆಬ್ಬಾಳ್, ಎಂ.ಜಗದೀಶ್ ಹಾಗೂ ಎಸ್.ಆರ್. ಕಿರಣ್ ಕುಮಾರ್ ಇವರ ವರ್ಗಾವಣೆಯನ್ನು ಕೋರಿಕೆ ಮೇರೆಗೆ ಪರಿಗಣಿಸಿದ್ದು ವರ್ಗಾವಣಾ ಸೌಲಭ್ಯಕ್ಕೆ ಅರ್ಹರಿರುವುದಿಲ್ಲ. ಇನ್ನುಳಿದ ಅಧಿಕಾರಿಗಳ ವರ್ಗಾವಣೆಯನ್ನು ಆಡಳಿತಾತ್ಮಕ ಕಾರಣಗಳ ಮೇರೆಗೆ ಪರಿಗಣಿಸಿದ್ದು, ಕಾರ್ಯಕ್ಷೇತ್ರದಲ್ಲಿ ಬದಲಾವಣೆ ಇರುವ ಅಧಿಕಾರಿಗಳು ಮಾತ್ರ ನಿಯೋಜನಾ ಸೌಲಭ್ಯಕ್ಕೆ ಅರ್ಹರಿರುತ್ತಾರೆ ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶದಲ್ಲಿ ತಿಳಿಸಿದ್ದಾರೆ.