CRIMENEWSನಮ್ಮರಾಜ್ಯ

KSRTC: ಕೋವಿಡ್ ಸೋಂಕಿನಿಂದ ಮೃತಪಟ್ಟ ಸಾರಿಗೆಯ 4 ಸಂಸ್ಥೆಗಳ 213 ನೌಕರರ ಪೈಕಿ ಕೇವಲ 7 ಜನರಿಗೆ ಮಾತ್ರ ಪರಿಹಾರ, ಏಕೆ ಈ ತಾರತಮ್ಯ -ಚಾಟಿ ಬೀಸಿದ ಹೈಕೋರ್ಟ್‌

ವಿಜಯಪಥ ಸಮಗ್ರ ಸುದ್ದಿ
  • ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಒದಗಿಸುತ್ತಿರುವ ಉಚಿತ ಬಸ್ ಸೇವೆ ಹೇಗೆ ಕೆಲಸ ಮಾಡುತ್ತಿದೆ?
  • ಇದುವರೆಗೆ ಸರ್ಕಾರ ಎಷ್ಟು ಹಣ ಬಿಡುಗಡೆ ಮಾಡಿದೆ ಎಂಬುದರ ವಿವರ  ಸಲ್ಲಿಸಲು ನ್ಯಾಯಪೀಠ ನಿರ್ದೇಶನ

ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ನಷ್ಟದಲ್ಲಿ ನಡೆಯುತ್ತಿದ್ದು, ಕೋವಿಡ್ ಸಂದರ್ಭದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಪರಿಹಾರ ಧನ ಪಾವತಿ ಮಾಡಲು ನಿಗಮಗಳ ಬಳಿ ಹಣವಿಲ್ಲ. ವೇತನ ನೀಡುವುದೇ ಕಷ್ಟವಾಗಿದೆ ಎಂದು ಕರ್ನಾಟಕ ಸಾರಿಗೆ ನಿಗಮಗಳ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಕೋವಿಡ್ ಸಮಯದಲ್ಲಿ ಮೃತಪಟ್ಟ ನಾಲ್ಕೂ ನಿಗಮಗಳ ಸಿಬ್ಬಂದಿಗೆ ತಲಾ ₹30 ಲಕ್ಷ ಪರಿಹಾರ ಬಿಡುಗಡೆ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ದಾವಣಗೆರೆಯ ತಾಹಿರ್ ಹುಸೇನ್ ಮತ್ತು ರಾಯಚೂರಿನ ಅಜೀಜ್ ಪಾಷ ಜಹಗೀರ್‌ದಾ‌ರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಮೊನ್ನೆ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಪಿ.ಉಸ್ಮಾನ್, ಕೋವಿಡ್ ವೇಳೆ, ಸಾರಿಗೆ ಸಂಸ್ಥೆಯ ಉದ್ಯೋಗಿಗಳಿಂದ ಬಲವಂತವಾಗಿ ಕೆಲಸ ಮಾಡಿಸಲಾಗಿದೆ. ಆಗ ಮೃತಪಟ್ಟ ಏಳು ಮಂದಿಯ ಕುಟುಂಬಗಳಿಗೆ ತಲಾ ₹30 ಲಕ್ಷ ಪರಿಹಾರ ಪಾವತಿಸಲಾಗಿದೆ. ಅಂದು ಶಿಕ್ಷಕರು ಮುಂಚೂಣಿ ಆರೋಗ್ಯ ಕಾರ್ಯಕರ್ತರಾಗಿರಲಿಲ್ಲ. ಆದರೂ, ಅವರಿಗೆ ಯೋಜನೆ ವಿಸ್ತರಿಸಿ ಪರಿಹಾರ ಪಾವತಿಸಲಾಗಿದೆ. ಆದರೆ, ಸಾರಿಗೆ ನಿಗಮಗಳ ಸಿಬ್ಬಂದಿಗೆ ಪರಿಹಾರ ಪಾವತಿಸಲು 4ವರ್ಷಗಳು ಕಳೆದರೂ ಮೀನಮೇಷ ಎಣಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿಯಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪರ ವಕೀಲೆ ಎಚ್.ಆ‌ರ್.ರೇಣುಕಾ ಅವರು, ನಿಗಮಗಳು ನಷ್ಟದಲ್ಲಿ ನಡೆಯುತ್ತಿದ್ದು, ಎರಡು ವರ್ಷದಿಂದ ಬಿಎಂಟಿಸಿ ಉದ್ಯೋಗಿಗಳಿಗೆ ಗ್ರಾಚುಟಿ ಹಣ ನೀಡಿಲ್ಲ. ಶಕ್ತಿ ಯೋಜನೆಯಡಿ ಸರ್ಕಾರ ಬಿಡುಗಡೆ ಮಾಡುತ್ತಿರುವ ಹಣವನ್ನು ಗ್ರಾಚುಟಿ ಮತ್ತಿತರ ವೆಚ್ಚಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಏಳು ಕುಟುಂಬಗಳಿಗೆ ಪರಿಹಾರ ನೀಡಿ ಉಳಿದವರಿಗೆ ನೀಡದೇ ತಾರತಮ್ಯ ಮಾಡಲಾಗದು. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಒದಗಿಸುತ್ತಿರುವ ಉಚಿತ ಬಸ್ ಸೇವೆ ಹೇಗೆ ಕೆಲಸ ಮಾಡುತ್ತಿದೆ? ಇದುವರೆಗೆ ಸರ್ಕಾರ ಎಷ್ಟು ಹಣ ಬಿಡುಗಡೆ ಮಾಡಿದೆ ಎಂಬುದರ ವಿವರವನ್ನು ಸಲ್ಲಿಸಿ ಎಂದು ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಮಾರ್ಚ್ 23ಕ್ಕೆ ಮುಂದೂಡಿದೆ.

2021ರ ಅಕ್ಟೋಬರ್‌ನಲ್ಲಿ ಬಂದ ಮಾಧ್ಯಮವಗಳ ವರದಿ: ಕೋವಿಡ್ -19 ಸೋಂಕಿಗೆ ಬಲಿಯಾಗಿದ್ದ ಸಾರಿಗೆ ಸಿಬ್ಬಂದಿಗೆ ಪರಿಹಾರ ನೀಡಲು ಅಂದು ಅಂದರೆ 2021ರ ಅಕ್ಟೋಬರ್‌ನಲ್ಲಿ ಲಂಚ ಕೇಳುತ್ತಿದ್ದ ಆರೋಪ ಕೇಳಿಬಂದಿತ್ತು. ಆ ಬಳಿಕ ಕೋವಿಡ್ ಸೋಂಕಿನಿಂದ ಮೃತಪಟ್ಟ 213 ಸಿಬ್ಬಂದಿ ಪೈಕಿ ಕೇವಲ 7 ಜನರಿಗೆ ಮಾತ್ರ ಪರಿಹಾರ ನೀಡಿದ್ದು, ಈವರೆಗೂ ಉಳಿದವರ ಕುಟುಂಬ ಸದಸ್ಯರಿಗೆ ಪರಿಹಾರ ನೀಡಿಲ್ಲ. ಅಂದು ₹30 ಲಕ್ಷ ಪರಿಹಾರ ನೀಡಲು ₹5 ಲಕ್ಷ ಲಂಚಕ್ಕೆ ಬೇಡಿಕೆ ಇಡುತ್ತಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಅಧಿಕಾರಿಗಳಿಗೆ ಲಂಚ ನೀಡಿದರೆ ಮಾತ್ರ ನಿಯಮ ಸಡಿಲಿಕೆ ಮಾಡುತ್ತಾರೆ. ಮನಸೋಇಚ್ಛೆ ನಿಯಮ ಮಾಡಿರುವ ಸಾರಿಗೆ ನಿಗಮಗಳು, ಪರಿಹಾರ ನೀಡಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಹೇಳಲಾಗಿದೆ. ಕೊರೊನಾಗೆ ಬಲಿಯಾದ ಸಾರಿಗೆ ಸಿಬ್ಬಂದಿ ವರದಿ ನೀಡಿರಬೇಕು. ರಜೆ ಪಡೆದಿದ್ದ 5 ದಿನದೊಳಗೆ ವರದಿಯನ್ನು ಸಲ್ಲಿಸಿರಬೇಕು. ಕೊರೊನಾ ಬಿಟ್ಟು ಬೇರೆ ಆರೋಗ್ಯ ಸಮಸ್ಯೆ ಇರಬಾರದು. ಕೊರೊನಾಗೆ ಬಲಿಯಾಗಿದ್ದಾನೆಂದು ವರದಿ ನೀಡಿರಬೇಕು. ವೈದ್ಯರು ವರದಿ ನೀಡಬೇಕೆಂದು ಇಲಾಖೆ ನಿಯಮ ಮಾಡಿತ್ತು.

ಸಾರಿಗೆ ನೌಕರರು ಕೊರೊನಾದಿಂದ ಮೃತಪಟ್ಟರೆ ಮೂವತ್ತು ಲಕ್ಷ ರೂಪಾಯಿ ಪರಿಹಾರ ನೀಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಕೆಎಸ್ಆರ್​ಟಿಸಿ ಬಿಎಂಟಿಸಿ, ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆಯ 213 ನೌಕರರು ಸೋಂಕಿನಿಂದ ಮೃತಪಟ್ಟಿದ್ರು. ಆದರೆ, ಇಲ್ಲಿಯವರೆಗೆ 7 ಜನರಿಗೆ ಮಾತ್ರ 30 ಲಕ್ಷ ರೂಪಾಯಿ ನೀಡಿದ್ದಾರೆ. ಇತ್ತ ಮನೆಯ ಯಜಮಾನನು ಇಲ್ಲದೆ, ಪರಿಹಾರವು ಇಲ್ಲದೆ ಕುಟುಂಬಸ್ಥರು ಕಷ್ಟ ಪಡುವಂತಾಗಿದೆ.

ಬಿಎಂಟಿಸಿಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 109 ಆಗಿದೆ. ಕೆಎಸ್​ಆರ್​ಟಿಸಿ ವಾಯುವ್ಯ ಮತ್ತು ಈಶಾನ್ಯ ಕರ್ನಾಟಕ ಸಾರಿಗೆಯಿಂದ 104 ನೌಕರರು ಮೃತಪಟ್ಟಿದ್ದರು. ಸಂಕಷ್ಟದ ಸಮಯದಲ್ಲಿ ಜನರ ಸೇವೆಗೆ ನಿಂತವರು ಸಾರಿಗೆ ನೌಕರರು, ಆದರೆ ಈಗ ರಾಜ್ಯ ಸರ್ಕಾರ ಅವರನ್ನು ನಡು ನೀರಲ್ಲಿ ಕೈಬಿಟ್ಟಿದೆ ಎಂಬ ಮಾತುಗಳು ಕೇಳಿಬಂದಿದೆ.

ಮೃತರಲ್ಲಿ ಕೆಲವರು ರಜೆಯ ಮೇಲಿದ್ದರು, ಮತ್ತೆ ಕೆಲವರಿಗೆ ಮೊದಲೇ ಅರೋಗ್ಯ ಸಮಸ್ಯೆಗಳಿತ್ತು. ಕೆಲವರಿಗೆ ಆಸ್ಪತ್ರೆಯ ವೈದ್ಯರಿಂದ ಯಾವುದೇ ಸರ್ಟಿಫಿಕೇಟ್ ಬಂದಿಲ್ಲ. ಈ ಹಿನ್ನೆಲೆಯಲ್ಲಿ ನಾವು ಯಾವುದೇ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಇಲಾಖೆಯವರು ಜಾರಿಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಕೊರೊನಾ ಕಠಿಣ ಕಾಲದಲ್ಲಿ ಕೆಲಸಕ್ಕೆ ಬರುವಂತೆ ಒತ್ತಡ ಹೇರಿದ್ದರು. ಆದರೆ ನೌಕರರಿಗೆ ಕೊರೊನಾ ಬಂದು ಸಾವನ್ನಪ್ಪುತ್ತಿರುವ ವೇಳೆ ಸರ್ಕಾರ ಅವರನ್ನು ಕೈಬಿಟ್ಟಿದೆ ಎಂದು ಹೇಳಲಾಗುತ್ತಿದೆ ಎಂದು ಸಮಗ್ರ ವರದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು.

ಅಂದಿನಿಂದ ಈವರೆಗೂ ಕೋವಿಡ್ -19 ಸೋಂಕಿಗೆ ಬಲಿಯಾಗಿದ್ದ ಸಾರಿಗೆ ಸಿಬ್ಬಂದಿಗೆ ಪರಿಹಾರ ನೀಡಲು ಮಾತ್ರ ಸಾರಿಗೆ ನಿಗಮಗಳ ಅಧಿಕಾರಿಗಳು ಮುಂದಾಗಿಲ್ಲ. ಹೀಗಾಗಿ ಈ ಸಂಬಂಧ ಇಂದು ಹೈಕೋರ್ಟ್‌ ಮೆಟ್ಟಿಲೇರಿದ್ದು ಪರಿಹಾರ ಕೊಡಿಸಲು ಮನವಿ ಮಾಡಲಾಗುತ್ತಿದೆ.

Megha
the authorMegha

Leave a Reply

error: Content is protected !!