ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಮುಖ್ಯ ಕಾನೂನು ಅಧಿಕಾರಿಗಳು, ಉಪ ಮುಖ್ಯ ವ್ಯವಸ್ಥಾಪಕರು ಸೇರಿದಂತೆ 7 ಮಂದಿ ಅಧಿಕಾರಿಗಳನ್ನು ಕೋರಿಕೆ/ಆಡಳಿತಾತ್ಮಕ ಕಾರಣಗಳ ಮೇರೆಗೆ ಕೂಡಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ಬುಧವಾರ ಜೂನ್ 26ರಂದು ಆದೇಶ ಹೊರಡಿಸಲಾಗಿದ್ದು, ಈವರೆಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಮುಖ್ಯ ಕಾನೂನು ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಟಿ. ವೆಂಕಟೇಶ್ ಅವರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ಬಿಎಂಟಿಸಿಯಲ್ಲಿ ಉಪ ಮುಖ್ಯ ಕಾನೂನು ಅಧಿಕಾರಿ ಪ್ರಸ್ತುತ ನಿ 17/1 ರಡಿ ಸಿಬ್ಬಂದಿ ಉಪ ಮುಖ್ಯ ವ್ಯವಸ್ಥಾಪಕರಾಗಿದ್ದ ಜೆ. ಸತೀಶ್ ರಾಜು ಅವರನ್ನು ಬಿಎಂಟಿಸಿಯ ಮುಖ್ಯ ಕಾನೂನು ಅಧಿಕಾರಿ (ಸ್ವತಂತ್ರ ನಿರ್ವಹಣೆ)ಯಾಗಿ ನಿಯೋಜಿಸಿ ಆದೇಶ ಹೊರಡಿಸಲಾಗಿದೆ.
ಕೆಎಸ್ಆರ್ಟಿಸಿಯ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಉಪ ಮುಖ್ಯ ಗಣಕ ವ್ಯವಸ್ಥಾಪಕರಾಗಿದ್ದ ಎಚ್.ಗುರುರಾಜ್ ಅವರನ್ನು ನಿ 17/1 ರಡಿಯಲ್ಲಿ ಉಪ ಮುಖ್ಯ ಸಂಚಾರ ವ್ಯವಸ್ಥಾಪಕ (ಕಾ) ರಾಗಿ ನಿಯೋಜಿಸಿ ನಿಗಮದ ಕೇಂದ್ರ ಕಚೇರಿಯಲ್ಲೇ ಮುಂದುವರಿಯುವಂತೆ ಆದೇಶ ನೀಡಲಾಗಿದೆ.
ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ಉಪ ಮುಖ್ಯ ಯಾಂತ್ರಿಕ ಅಭಿಯಂತರರು ಪ್ರಸ್ತುತ ನಿ 17/1 ರಡಿ ಉಪ ಮುಖ್ಯ ಸಂಚಾರ ವ್ಯವಸ್ಥಾಪಕರಾಗಿ ಎನ್. ಶ್ರೀನಾಥ್ ಅವರನ್ನು ನಿಗಮ ಕೋಲಾರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.
ಕೆಎಸ್ಆರ್ಟಿಸಿ ಪುತ್ತೂರು ವಿಭಾಗದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಆರ್. ನವೀನ್ ಅವರನ್ನು ಶಿವಮೊಗ್ಗ ವಿಭಾಗಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.
ಕೆಎಸ್ಆರ್ಟಿಸಿಯ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕ (ವಾಣಿಜ್ಯ)ರಾಗಿದ್ದ ಎಸ್. ರಾಜೇಶ್ ಅವರನ್ನು ವಡ್ಡರಹಳ್ಳಿಯಲ್ಲಿರುವ ಬಿಎಂಟಿಸಿ ತರಬೇತಿ ಕೇಂದ್ರದ ಪ್ರಾಂಶುಪಾಲರನ್ನಾಗಿ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ.
ಕೆಎಸ್ಆರ್ಟಿಸಿಯ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಮುಖ್ಯ ಯೋಜನಾ ಸಂಖ್ಯಾಧಿಕಾರಿಯಾಗಿದ್ದ ವೀಣಾ ಪಿ. ದೇಸಾಯಿ ಅವರನ್ನು ನಿ 17/1 ರಡಿ ಮುಖ್ಯ ಸಂಚಾರ ವ್ಯವಸ್ಥಾಪಕ (ವಾಣಿಜ್ಯ)ರಾಗಿ ನಿಯೋಜೀಸಿ ವರ್ಗಾವಣೆ ಮಾಡಲಾಗಿದೆ.
ಮುಂದುವರಿದು ಬಿಎಂಟಿಸಿ ದಕ್ಷಿಣ ವಲಯ ವಿಭಾಗೀಯದ ನಿಯಂತ್ರಣಾಧಿಕಾರಿ ಕೆ. ಕೀರ್ತಿಚಂದ್ರ ಅವರನ್ನು ಉಪ ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿಯಾಗಿ ಮುಂದುವರಿಸಲಾಗಿದೆ.
ಬಿಎಂಟಿಸಿ ಸಂಸ್ಥೆಯ ಉಪ ಮುಖ್ಯ ಕಾರ್ಮಿಕ & ಕಲ್ಯಾಣಾಧಿಕಾರಿ ಎಚ್. ದಿವಾಕರ ಅವರನ್ನು ನಿಗಮದ ಈಶಾನ್ಯ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿ ಹುದ್ದೆಯಲ್ಲಿ ಮುಂದುವರಿಸಲಾಗಿದೆ.
ಇನ್ನು ಟಿ.ವೆಂಕಟೇಶ್, ಜೆ. ಸತೀಶ್ ರಾಜು, ಎಚ್.ಗುರುರಾಜ್, ಎಸ್.ರಾಜೇಶ್ ಹಾಗೂ ವೀಣಾ ಪಿ.ದೇಸಾಯಿ ಅವರ ಕಾರ್ಯಕ್ಷೇತ್ರದಲ್ಲಿ ಬದಲಾವಣೆ ಇಲ್ಲದಿರುವುದರಿಂದ ಯಾವುದೇ ನಿಯೋಜನಾ ಸೌಲಭ್ಯಕ್ಕೆ ಅರ್ಹರಿರುವುದಿಲ್ಲ. ಟಿ.ಆರ್ ನವೀನ್ ಅವರ ವರ್ಗಾವಣೆಯನ್ನು ಕೋರಿಕೆ ಮೇರೆಗೆ ಪರಿಗಣಿಸಿರುವುದರಿಂದ ಯಾವುದೇ ನಿಯೋಜನಾ ಸೌಲಭ್ಯಕ್ಕೆ ಅರ್ಹರಿರುವುದಿಲ್ಲ.
ಎನ್.ಶ್ರೀನಾಥ್ ಅವರ ವರ್ಗಾವಣೆಯನ್ನು ಆಡಳಿತಾತ್ಮಕ ಕಾರಣಗಳ ಮೇರೆಗೆ ಪರಿಗಣಿಸಿರುವುದರಿಂದ ನಿಯಮಾನುಸಾರ ನಿಯೋಜನಾ ಸೌಲಭ್ಯಕ್ಕೆ ಅರ್ಹರಿರುತ್ತಾರೆ ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶದಲ್ಲಿ ತಿಳಿಸಿದ್ದಾರೆ.