ಬೆಳಗಾವಿ: ಕಳೆದ ಏಳು ವರ್ಷದಿಂದ ಸಾರಿಗೆ ನಿಗಮಗಳಿಗೆ ಚಾಲನಾ ಸಿಬ್ಬಂದಿಯ ನೇಮಕವಾಗಿಲ್ಲ. ಆದರೆ, 13888 ಮಂದಿ ನೌಕರರು ನಿವೃತ್ತರಾಗಿದ್ದಾರೆ. ಹೀಗಾಗಿ ತೆರವಾಗಿರುವ ಚಾಲನಾ ಸಿಬ್ಬಂದಿ ಸ್ಥಳಗಳ ಭರ್ತಿಗೆ 9 ಸಾವಿರ ನೌಕರರನ್ನು ಅತೀಶೀಘ್ರದಲ್ಲೇ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ತಾಲೂಕಿನ ಸುವರ್ಣ ಗಾರ್ಡನ್ ಬಳಿಯ ಟೆಂಟ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆ ಜಾರಿಯಾದ ಮೇಲೆ ಜನರು ಜಾಸ್ತಿ ಓಡಾಡುತ್ತಿದ್ದಾರೆ. ಮೊದಲು 85 ಲಕ್ಷ ಜನರು ಓಡಾಡುತ್ತಿದ್ದರು. ಈಗ 1 ಕೋಟಿ ಮಂದಿ ಓಡಾಡುತ್ತಿದ್ದಾರೆ.
ಇತ್ತ ಜನರ ಓಡಾಟ ಜಾಸ್ತಿಯಾಗಿರುವುದರಿಂದ ಶಾಲೆಗೆ ಹೋಗುವಾಗ, ಬರುವಾಗ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಕಳೆದ ನಾಲ್ಕು ವರ್ಷಗಳಲ್ಲಿ ಒಂದೇಒಂದೂ ಬಸ್ಸನ್ನು ಖರೀದಿ ಮಾಡಿಲ್ಲದಿರುವುದು. ಹೊಸ ಬಸ್ ತಗೊಂಡು ಹಳೆಯ ಬಸ್ಸುಗಳನ್ನು ಸ್ಕ್ರ್ಯಾಪ್ ಮಾಡಬೇಕು. ಹೀಗೆ ಆಗಿದ್ದರೆ ಏನು ಸಮಸ್ಯೆ ಆಗುತ್ತಿರಲಿಲ್ಲ ಎಂದು ಹೇಳಿದರು.
ಇನ್ನು ಬೆಳಗಾವಿ ಸಾರಿಗೆ ವಿಭಾಗಕ್ಕೆ ಬಿಎಂಟಿಸಿಯ ಹಳೇ ಬಸ್ ಬಿಟ್ಟಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಇಲ್ಲಿ ಬಸ್ ಇಲ್ಲ ಎಂಬ ಕಾರಣಕ್ಕೆ ತೆಗೆದುಕೊಂಡಿದ್ದರು, ಆದರೆ ಮತ್ತೆ ಆ ಬಸ್‌ಗಳನ್ನು ವಾಪಸ್ ಕಳುಹಿಸಿದ್ದಾರೆ. ಸತತವಾಗಿ ನಾಲ್ಕು ವರ್ಷ ಬಸ್ ಖರೀದಿ ಮಾಡಿಲ್ಲ, ಏಳು ವರ್ಷಗಳಿಂದ ಯಾವುದೇ ನೌಕರರನ್ನು ನೇಮಕ ಮಾಡಿಕೊಂಡಿಲ್ಲ. ಹೀಗಾಗಿ ಸಮಸ್ಯೆ ಆಗುತ್ತಿದೆ. ಆದ್ದರಿಂದ 5500 ಹೊಸ ಬಸ್ ಖರೀದಿ ಮಾಡುತ್ತಿದ್ದು, 9 ಸಾವಿರ ಸಿಬ್ಬಂದಿ ನೇಮಕ ಮಾಡಲಿದ್ದೇವೆ ಎಂದು ತಿಳಿಸಿದರು.
2013ರಿಂದ 2017ರವರೆಗೆ ನಾನು ಸಾರಿಗೆ ಸಚಿವ ಇದ್ದಾಗ ಈ ಭಾಗಕ್ಕೆ ಹೆಚ್ಚು ಬಸ್ ನಿಲ್ದಾಣ ಕೊಟ್ಟಿದ್ದೇನೆ. ಬೆಳಗಾವಿ, ಬಾಗಲಕೋಟೆ, ಗದಗ, ಹುಬ್ಬಳ್ಳಿ ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಅತಿಹೆಚ್ಚು ಬಸ್ ನಿಲ್ದಾಣ ನೀಡಿದ್ದೆ. ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣಕ್ಕೆ ಎರಡು ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ಹಾಕಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಇನ್ನು ಬೆಳಗಾವಿ ನಗರಕ್ಕೆ 100 ಹೊಸ ಬಸ್ ಖರೀದಿ ಮಾಡಲಾಗುವುದು. ಈ ಕೆಲಸವನ್ನು ಮೂರು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು. ಬಳಿಕ ಬಸ್ ಹೊಸ ಬಸ್‌ಗಳು ಬರುವುದರಿಂದ ಬಹುತೇಕ ಸಮಸ್ಯೆ ಹತೋಟಿಗೆ ಬರುತ್ತದೆ ಎಂದು ತಿಳಿಸಿದರು.