ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಡೀಸೆಲ್, ಅಧಿಕಾರಿಗಳು / ನೌಕರರ ವೇತನ ಸೇರಿದಂತೆ ನಿಗಮಗಳಿಗೆ ಬರಬೇಕಿರುವ ಇತರ ಸಾವಿರಾರು ಕೋಟಿ ರೂಪಾಯಿಯನ್ನು ಸರ್ಕಾರ ನಿಗಮಗಳಿಗೆ ಈವರೆಗೂ ಬಿಡುಗಡೆ ಮಾಡದೆ ಬಾಕಿ ಉಳಿಸಿಕೊಂಡಿದೆ.
ಸರ್ಕಾರ ಸಾರಿಗೆ ನಿಗಮಗಳಿಗೆ ಕೊಡಬೇಕಿರುವ ಹಣವನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡಿದರೆ ಈ ನಿಗಮಗಳು ಯಾವುದೇ ಕಾರಣಕ್ಕೂ ಲಾಸ್‌ನಲ್ಲಿ ಇರುವುದಿಲ್ಲ. ಜತೆಗೆ ಕಾಲಕಾಲಕ್ಕೆ ಅಧಿಕಾರಿಗಳು ಮತ್ತು ನೌಕರರಿಗೆ ಸಿಗಬೇಕಿರುವ ಮುಂಬಡ್ತಿ, ಇತರೆ ಆರ್ಥಿಕ ಸೌಲಭ್ಯಗಳು ಯಾವುದೇ ಸಮಸ್ಯೆ ಇಲ್ಲದೆ ಸಿಗುತ್ತವೆ.
ಆದರೆ, ಸರ್ಕಾರವೇ ತಾನು ಕೊಡಬೇಕಿರುವ ಸಾವಿರಾರು ಕೋಟಿ ರೂ.ಗಳನ್ನು ನೀಡದೆ ನಿಗಮಗಳು ಲಾಸ್‌ನಲ್ಲಿ ಇವೆ ಎಂದು ಹೇಳುತ್ತಿದೆ. ಈ ಹೇಳಿಕೆ ಕೆಲ ಸಾರಿಗೆ ಸಂಘಟನೆಗಳು ವಿರೋಧ ವ್ಯಕ್ತಪಡಿಸುವ ಬದಲಿಗೆ ಸರ್ಕಾರ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಇದರಿಂದ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರು ಕಾಲಕಾಲಕ್ಕೆ ಸಿಗಬೇಕಾದ ಆರ್ಥಿಕ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ನೋಡಿ ಸಾರಿಗೆ ಸಚಿವರೆ ಕೊಟ್ಟ ಮಾಹಿತಿ ಪ್ರಕಾರ 2023ರ ಅಕ್ಟೋಬರ್ ಅಂತ್ಯಕ್ಕೆ 4,150.38 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ. ಹೌದು! ಶಕ್ತಿ ಯೋಜನೆ ಕುರಿತು ಈ ಹಿಂದೆ ಬೆಳಗಾವಿಯ ಸುವರ್ಣಸೌಧಲ್ಲಿ ನಡೆದ ಅಧಿವೇಶನದಲ್ಲಿ ಹಲವು ಶಾಸಕರು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ ಪಾವತಿಸಲು ಬಾಕಿ ಇರುವ ಹಣಕಾಸಿನ ವಿವರಗಳನ್ನು ಮುಂದಿಟ್ಟಿದ್ದಾರೆ.
ಆದರೇ ಈಗ ಮತ್ತೊಂದು ಅಧಿವೇಶನ ನಡೆಯುತ್ತಿದ್ದು, ಈಗಲೂ ಈ ಬಗ್ಗೆ ಯಾವುದೇ ಪ್ರಸ್ತಾಪ ಮಾಡದೆ ಇರುವುದು ನೌಕರರ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಈಗಲಾದರೂ ಈ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.
ಶಕ್ತಿ ಯೋಜನೆಯಡಿ ಸಾರಿಗೆ ನಿಗಮಗಳಿಗೆ ಹಣ ಪಾವತಿಸಲು ಸರ್ಕಾರ ತನ್ನ ಹಂತದಲ್ಲಿ ಬಾಕಿ ಇರಿಸಿಕೊಂಡಿದೆ. ಜೂನ್ 2023ರಿಂದ ಮಾರ್ಚ್ 2024ರವರೆಗೆ ಅಂದಾಜಿಸಿರುವ ವಾಸ್ತವಿಕ ವೆಚ್ಚ 4,377.96 ಕೋಟಿ ರೂ. ಎಂದು ಅಂದಾಜಿಸಿತ್ತು. 2023-24ನೇ ಸಾಲಿನ ಆಯವ್ಯಯದಲ್ಲಿ ಒದಗಿಸಿರುವ 2,800 ಕೋಟಿ ರೂ.ಗಳ ಅನುದಾನ ಹೊರತುಪಡಿಸಿ 1,577.96 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಬೇಕು ಎಂಬ ಪ್ರಸ್ತಾವನೆಯು ಹಣಕಾಸು ಇಲಾಖೆಯ ಪರಿಶೀಲನೆಯಲ್ಲಿದೆ ಎಂಬ ಸಂಗತಿಯನ್ನೂ ಶಾಸಕರಿಗೆ ಕೊಟ್ಟಿರುವ ಉತ್ತರದಲ್ಲಿ ಸಚಿವರು ಉಲ್ಲೇಖಿಸಿದ್ದಾರೆ.
KSRTCಗೆ ಬರಬೇಕಿರುವುದು ಎಷ್ಟು?: ಕೆಎಸ್‌ಆರ್‌ಟಿಸಿಗೆ ಡೀಸೆಲ್, ಅಧಿಕಾರಿಗಳ/ ನೌಕರರ ವೇತನ ಮತ್ತು ಇತ್ಯಾದಿಗಳಿಗೆ ಅಕ್ಟೋಬರ್ 2023ರ ಅಂತ್ಯಕ್ಕೆ ಭವಿಷ್ಯ ನಿಧಿ 807.99 ಕೋಟಿ ರೂ. ನಿವೃತ್ತ ನೌಕರರ ಬಾಕಿ 85.55 ಕೋಟಿ ರೂ. ಸಿಬ್ಬಂದಿಗಳ ಬಾಕಿ ಪಾವತಿ 83.01 ಕೋಟಿ ರೂ. ಸರಬರಾಜುದಾರರ ಬಿಲ್ ಪಾವತಿ 24.40 ಕೋಟಿ ರೂ. ಡೀಸೆಲ್ ಬಿಲ್ ಪಾವತಿ 164.57 ಕೋಟಿ ರೂ. ಎಂವಿಸಿ ಕ್ಲೈಮ್ಸ್ 48.60 ಕೋಟಿ, ಇತರೆ ಬಿಲ್‌ಗಳು 51.49 ಕೋಟಿ ರೂ. ಸೇರಿದಂತೆ ಒಟ್ಟಾರೆ 1,265.61 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಸರ್ಕಾರ.
BMTCಗೆ ಸರ್ಕಾರ ಕೊಡಬೇಕಿರುವುದೆಷ್ಟು?: ಬಿಎಂಟಿಸಿಗೆ ಡೀಸೆಲ್ 101.34 ಕೋಟಿ ರೂ. ಹಾಲಿ, ನಿವೃತ್ತ ನೌಕರರ ಬಾಕಿ 210.06 ಕೋಟಿ ರೂ. ಇತ್ಯಾದಿ 896.70 ಕೋಟಿ ರೂ. ಸೇರಿ 1,106.76 ಕೋಟಿ ರೂ.ಗಳನ್ನು ಅಕ್ಟೋಬರ್ ಅಂತ್ಯಕ್ಕೆ ಕೊಡಬೇಕಿದೆ ಎಂದು ಸ್ವತಃ ಸಾರಿಗೆ ಸಚಿವರೇ ತಿಳಿಸಿದ್ದಾರೆ.
NWKRTCಗೆ ಬರಬೇಕಿರುವುದು ಎಷ್ಟು?: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಡೀಸೆಲ್ 103.53 ಕೋಟಿ ರೂ. ನಿವೃತ್ತಿ ನೌಕರರ ಬಾಕಿ 99.62 ಕೋಟಿ ರೂ. ಹಾಲಿ ನೌಕರರ ಬಾಕಿ 148.08 ಕೋಟಿ ರೂ. ಭವಿಷ್ಯ ನಿಧಿ ಬಾಕಿ 766.88 ಕೋಟಿ ರೂ. ಇತರೆ ಬಾಕಿ303.70 ಕೋಟಿ ರೂ. ಸೇರಿದಂತೆ ಒಟ್ಟಾರೆ 1,421.81ಕೋಟಿ ರೂ.ಗಳು ಬಾಕಿ ಉಳಿದಿದೆ ತಿಳಿದು ತಿಳಿಸಿದ್ದಾರೆ.
KKRTCಗೆ ಬರಬೇಕಿರುವುದು ಎಷ್ಟು?: ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ ಭವಿಷ್ಯ ನಿಧಿ 99.70 ಕೋಟಿ ರೂ. ನಿವೃತ್ತ ನೌಕರರ ಬಾಕಿ 84.16 ಕೋಟಿ ರೂ. ಸಿಬ್ಬಂದಿಗಳ ಬಾಕಿ ಪಾವತಿ 39.22 ಕೋಟಿ ರೂ. ಸರಬರಾಜುದಾರ ಬಿಲ್ ಪಾವತಿ 14.80 ಕೋಟಿ ರೂ. ಇಂಧನ ಬಾಕಿ ಪಾವತಿ 85 ಕೋಟಿ ರೂ. ಎಂವಿಸಿ ಕ್ಲೈಮ್ಸ್ 28.32 ಕೋಟಿ ರೂ. ಇತರೆ ಬಿಲ್ 5 ಕೋಟಿ ರೂ.ಗಳು ಸೇರಿ ಒಟ್ಟಾರೆ 356.20 ಕೋಟಿ ರೂ.ಗಳನ್ನು ಕೊಡಬೇಕಿದೆ.
ಒಟ್ಟಾರೆ ನಾಲ್ಕೂ ಸಾರಿಗೆ ನಿಗಮಗಳಿಗೆ ಅಕ್ಟೋಬರ್ ಅಂತ್ಯಕ್ಕೆ 4,150.38 ಕೋಟಿ ರೂ.ಪಾಯಿ ಬಾಕಿ ಇದೆ ಎಂದು ಸಾರಿಗೆ ಸಚಿವರು ವಿವರಣೆ ನೀಡಿದ್ದಾರೆ. ಆದರೆ ಮತ್ತೆ ಈಗ ನವೆಂಬರ್, ಡಿಸೆಂಬರ್, ಜನವರಿ ಈ ಮೂರು ತಿಂಗಳಲ್ಲಿ ಉಳಿಸಿಕೊಂಡಿರುವ ಬಾಕಿ ಸೇರಿದರೆ ಸುಮಾರು 5 ಸಾವಿರ ಕೋಟಿ ರೂ. ಬಾಕಿ ಎಂದು ಅಂದಾಜಿಸಲಾಗುತ್ತಿದೆ. ಈ ಎಲ್ಲ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.