ಬೆಂಗಳೂರು: ರಾಜ್ಯ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಸಂಘಟನೆಗಳ ಮುಖಂಡರೇ ಸಂಘಟನೆಯ ಪ್ರಭಾವಿ ನಾಯಕರೇ ಹಾಗೂ ಮುಂಚೂಣಿಯ ನಾಯಕರೇ ನಿಮ್ಮ ನಿಮ್ಮ ಸ್ವಾರ್ಥ ಪ್ರತಿಷ್ಠೆಯನ್ನು ಬದಿಗಿಟ್ಟು ಸಮಸ್ತ ನಾಲ್ಕು ನಿಗಮದ ಸಾರಿಗೆ ನೌಕರರನ್ನು ಉಳಿಸಿ ಇಲ್ಲ ಅಂದರೆ ಸಾರಿಗೆ ನೌಕರರು ರೊಚ್ಚಿಗೆದ್ದರೆ ಯಾವ ಸಂಘಟನೆಯೂ ಉಳಿಯುವುದಿಲ್ಲ.
ಸಾರಿಗೆ ನೌಕರರಿಗೆ ವೇತನ ಹೆಚ್ಚಳವಾಗಿ ಐದು ವರ್ಷಗಳೇ ಕಳೆದರೂ ಸಹ ಯಾವ ಮುಖಂಡರು ಸಹ ವೇತನ ಹೆಚ್ಚಿಸುವ ಕೆಲಸಕ್ಕೆ ಕೈ ಹಾಕದೇ ಇರುವುದನ್ನು ನೋಡಿದರೆ ನೀವು ನಿಮ್ಮ ಸಂಘಟನೆಯ ಅಸ್ತಿತ್ವ ಉಳಿಸಿಕೊಳ್ಳುವ ಭರಾಟೆಯಲ್ಲಿ ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಇತ್ತ ದಿನದಿಂದ ದಿನಕ್ಕೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿರುವ ಈ ದಿನಮಾನಗಳಲ್ಲಿ ಸಾರಿಗೆ ನೌಕರರು ಜೀವನ ನೆಡಸಲು ತುಂಬಾ ಪರಿತಪ್ಪಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಸಂಘಟನೆಯ ನಾಯಕರೇ ಕಿತ್ತಾಡಿಕೊಂಡು ಅವರ ಮೇಲೆ ಇವರು ಇವರ ಮೇಲೆ ಅವರು ಹೇಳಿಕೊಂಡು ತೇಜೋವಧೆ ಮಾಡಿಕೊಂಡು ಕಾಲಹರಣ ಮಾಡಿರುವುದು ಸಾಕು.
ಈಗ ನೌಕರರಿಗೆ ಆ ನಿಮ್ಮ ನಾಟಕಗಳು ಬೇಕಿಲ್ಲ. ಅವುಗಳನ್ನು ನಿಲ್ಲಿಸಿ ನಿಮ್ಮ ನಾಯಕತ್ವ ಗುಣಗಳನ್ನು ಉಳಿಸಿಕೊಳ್ಳಿ. ನಿಮ್ಮ ನಿಮ್ಮ ಪ್ರತಿಷ್ಠೆಯನ್ನು ಬದಿಗಿಟ್ಟು ನೌಕರರಿಗೆ ಕಿಂಚಿತ್ತಾದರೂ ಸಹಾಯ ಮಾಡುವ ಧೈರ್ಯ ತೋರಿಸಿ. ಅದನ್ನು ಬಿಟ್ಟು ಇನ್ನು ಮುಂದೆ ನಿಮ್ಮ ದೊಂಬರಾಟಗಳು ಸಭೆ ಸಮಾರಂಭಗಳು ಮುಂದುವರಿದರೆ ನೌಕರರು ರೊಚ್ಚಿಗೆಳುವ ಸಂದರ್ಭವನ್ನು ನೀವೆ ಸೃಷ್ಟಿಸಿದಂತೆ ಆಗುತ್ತದೆ.
ಇನ್ನು ಘಟಕಗಳ ಮಟ್ಟದಲ್ಲಿ ಅಧಿಕಾರಿಗಳು ಮತ್ತು ನೌಕರರಲ್ಲಿ ಉತ್ತಮ ಬಾಂಧವ್ಯ ಇದ್ದು ಈ ವ್ಯವಸ್ಥೆಯನ್ನು ಕೆಲ ಸಂಘಟನೆಗಳ ಮುಖಂಡರೆ ಹಾಳು ಮಾಡುತ್ತಿದ್ದಾರೆ. ಇಂಥ ಸಂಘಟನೆಯ ಮುಖಂಡರಿಂದ ನೌಕರರು ಅಧಿಕಾರಿಗಳ ನಡುವೆ ದ್ವೇಷದ ಕಿಚ್ಚು ಹೆಚ್ಚಾಗುತ್ತಿದೆ. ಅದಕ್ಕೆ ಕಾರಣ ಅವನು ಆ ಸಂಘಟನೆಯವನು ಇವನು ಈ ಸಂಘಟನೆಯವನು ಎಂದು ದೊಡ್ಡ ಮಟ್ಟದ ಅಧಿಕಾರಿಗಳ ಬಳಿ ನೌಕರರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು.
ಇತ್ತ ಅಧಿಕಾರಿಗಳು ನೌಕರರ ವಿರೋಧಿ ಎಂದು ಬಿಂಬಿಸುವ ಕೆಲಸವನ್ನೂ ಮಾಡುವುದು ಇದೇ ಸಂಘಟನೆಯ ಮುಖಂಡರೆ. ನಮ್ಮ ಸಂಸ್ಥೆಯ ಅಧಿಕಾರಿಗಳು ನೌಕರರಲ್ಲಿ ಯಾವುದೇ ಭಿನ್ನಭಿಪ್ರಾಯ ಇಲ್ಲ. ಅಧಿಕಾರಿ ವರ್ಗದವರು ಸಂಸ್ಥೆಯಿಂದಲೇ ವೇತನ ಪಡೆಯುವುದು. ಹಾಗಾಗಿ ಉತ್ತಮ ಬಾಂಧವ್ಯ ನಮ್ಮಲಿ ಇದ್ದ ಇದೆ. ಅದನ್ನು ಹಾಳು ಮಾಡುವವರು ಇನ್ನಾದರೂ ನಿಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಿ.
ಆ ಮೂಲಕ ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಎಲ್ಲ ಸಂಘಟನೆಗಳ ಮುಖಂಡರು ಒಗ್ಗೂಡಿ. ಇದರಿಂದ ಯಾವುದೇ ನ್ಯಾಯಯುತ ಹೋರಾಟ ಸೋಲುವುದಿಲ್ಲ ಎಂಬುದನ್ನು ಮನಗಾಣಿ. ಇದಕ್ಕಾದರೂ ಎಲ್ಲರೂ ತಮ್ಮ ಸ್ವಾರ್ಥಬಿಟ್ಟು ನೌಕರರಿಗಾಗಿ ಒಗ್ಗಟ್ಟಾಗಿ.
ಇಲ್ಲ ನಾವು ಯಾವುದೇ ಕಾರಣಕ್ಕೂ ಒಗ್ಗೂಡಲೂ ಸಾಧ್ಯವಿಲ್ಲ ಎಂದು ನಿರ್ಧಿಸಿದ್ದರೆ. ಅಂಥವರು ಮೌನವಾಗಿರಿ. ನೌಕರರ ಪರ ಕೆಲಸ ಮಾಡುವ ಸಂಘಟನೆಗಳಿಗೆ ಅವಕಾಶ ಮಾಡಿಕೊಡಿ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಬಿಎಂಟಿಸಿ ಅಧ್ಯಕ್ಷ ರುದ್ರೇಶ್ ಎಸ್. ನಾಯಕ ಸಲಹೆ ನೀಡಿದ್ದಾರೆ.