ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಾಗರ ಘಟಕದ ಭದ್ರತಾ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಸಾಗರದಲ್ಲಿ ನಡೆದಿದೆ.
ಸಾಗರದ ನಿವಾಸಿ ಸಂದೀಪ್ (41) ಮೃತರು. ಬುಧವಾರ ರಾತ್ರಿ ಪಾಳಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಈ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಸಂದೀಪ್ ಅವರನ್ನು ಸಹೋದ್ಯೋಗಿಗಳು ಬಸ್ಸಿನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು.
ಈ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಬಂದ ಸಿಬ್ಬಂದಿ ಚಂದ್ರು ಎಂಬುವರು ಮಾತನಾಡಿ, ನಾನು ಬಸ್ನಲ್ಲಿ ಚಾಲಕ ಕಂ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದೇನೆ. ರಾತ್ರಿ ನಾನು ಬಸನ್ನು ಡಿಪೋಗೆ ಬಿಡಲು ಬಂದಾಗ ಗೇಟ್ ಬಳಿ ಹಾರ್ನ್ ಮಾಡಿದ್ರು ಸಹ ಸಂದೀಪ್ ಹೊರಗೆ ಬರಲಿಲ್ಲ.
ಸಂದೀಪ್ ಅವರು ಬಂದು ಬಸ್ ಚೆಕ್ ಮಾಡಿದ ಮೇಲೆಯೇ ಬಸ್ ಒಳಗೆ ಬಿಡಬೇಕಿತ್ತು. ಬಹಳ ಹೊತ್ತು ಇವರು ಬಾರದ ಕಾರಣಕ್ಕೆ ನಾನು ಬಸ್ ಇಳಿದು ಅವರ ರೂಮ್‌ನ ಬಳಿ ಹೋಗಿ ನೋಡಿದಾಗ ಅವರು ಕುಸಿದು ಬಿದ್ದಿದ್ದರು.
ಆ ತಕ್ಷಣ ನಮ್ಮದೇ ಬಸ್ನಲ್ಲಿ ಸಂದೀಪ್ ಅವರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದೆವು. ಅಷ್ಟೊತ್ತಿಗಾಗಲೇ ಸಂದೀಪ್ ನಿಧನರಾಗಿದ್ದಾರೆ ಎಂದು ವೈದ್ಯರು ಖಚಿತಪಡಿಸಿದರು ಎಂದು ಚಂದ್ರು ಹೇಳಿದ್ದಾರೆ.
Related









