ಬೆಂಗಳೂರು: ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ. ಬೆಳಕಿನ ಹಬ್ಬವನ್ನು ಕರುನಾಡು ಸಡಗರದಿಂದ ಸ್ವಾಗತಿಸಿ ಖುಷಿಪಡುತ್ತಿದೆ. ಈ ನಡುವೆಯೂ ರಾಜ್ಯದ ಸಾರಿಗೆ ನೌಕರರು ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ದೇಶದ ಸೈನಿಕರು ಹೇಗೆ ಗಡಿಯಲ್ಲಿ ತಮ್ಮ ಕರ್ತವ್ಯ ನಿಷ್ಠೆ ಮೆರೆಯುತ್ತಿದ್ದಾರೋ ಹಾಗೆಯೇ ನಾಡಿನ ಒಳಗೆ ಸಾರಿಗೆ ಅಧಿಕಾರಿಗಳು-ನೌಕರರು ಕೂಡ ಕರ್ತವ್ಯದಲ್ಲಿ ಮಗ್ನರಾಗಿದ್ದಾರೆ.
ಹೌದು! ಯಾವುದೇ ಹಬ್ಬವಾದರೂ ನಾರಿಯರಿಗೆ ಅದರ ಸಂಭ್ರಮ ಸ್ವಲ್ಪ ಜಾಸ್ತಿನೇ. ಆದರೆ, ಸಾರಿಗೆ ನಿಗಮಗಳಲ್ಲಿರುವ ಮಹಿಳೆಯರು ಸೇರಿದಂತೆ ಸಮಸ್ತ ನೌಕರರು ತಮ್ಮ ಕರ್ತವ್ಯದಲ್ಲೇ ಈ ಬೆಳಕಿನ ಹಬ್ಬದ ಸಂಭ್ರಮ ಕಾಣುತ್ತಿದ್ದಾರೆ. ಇಂದು ಕೂಡ ಕರ್ತವ್ಯಕ್ಕೆ ಹಾಜರಾಗಿ ನಾಡಿನ ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗುವಲ್ಲಿ ನಿತರಾಗಿದ್ದಾರೆ.
ಸಾರಿಗೆಯ ನಾಲ್ಕೂ ನಿಗಮಗಳ ಸಿಬ್ಬಂದಿಗಳು ಕರ್ತವ್ಯ ನಿಷ್ಠೆ ಮೆರೆಯುತ್ತಿದ್ದಾರೆ. ಮುಂಜಾನೆ 4 ಗಂಟೆಗೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಮುಂಜಾವು 5 ಗಂಟೆಗೆ ಡಿಪೋಗಳಲ್ಲಿ ಹಾಜರಾಗಿ ತಮ್ಮ ಕಾಯಕಕ್ಕೆ ಸೈನಿಕರಂತೆ ನೌಕರರು ಸಜ್ಜಾಗಿ ತೆರಳಿದ್ದಾರೆ.
ಈ ಎಲ್ಲವನ್ನು ನೋಡಿದರೆ, ಪ್ರತಿಯೊಬ್ಬರ ಮನೆಯಲ್ಲೂ ಹಬ್ಬದ ಸಂಭ್ರಮ. ಆದರೆ, ಮನೆಯಲ್ಲಿ ನಡೆಯುತ್ತಿರುವ ಈ ಬೆಳಕಿನ ಹಬ್ಬದ ಸಡಗರದಲ್ಲಿ ಕುಟುಂಬದವರ ಜತೆ ಸಂಭ್ರಮಿಸಲು ಈ ನೌಕರರಿಗೆ ಸಾಧ್ಯವಾಗುತ್ತಿಲ್ಲ. ಆದರೂ ತಮ್ಮ ಕರ್ತವ್ಯ ನಿಷ್ಠೆ ಮೂಲಕವೇ ಸಂಭ್ರಮ, ಸಡಗರ ಪಡುತ್ತ ನಾಡಿನ ಜನರನ್ನು ಖುಷಿಯಿಂದಲೆ ಒಂದೆಡೆಯಿಂದ ಮತ್ತೊಂದೆಡೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತಿದ್ದಾರೆ.
ಒಂದು ಗಂಟೆ ಬಸ್‌ಗಳು ತಡವಾದರೆ ನೂರಾರು ಮಂದಿ ತಾವು ತಲುಪಬೇಕಾದ ಸ್ಥಳವನ್ನು ತಲುಪುತ್ತೇವೋ ಇಲ್ಲವೋ ಎಂಬ ಚಿಂತೆಯಲ್ಲಿ ಒದ್ದಾಡುತ್ತಿರುತ್ತಾರೆ. ಅಂಥ ಜನರಿಗೆ ಸಂಜೀವಿನಿಯಂತೆ ಧಾವಿಸುವ ಸಾರಿಗೆ ಸಿಬ್ಬಂದಿಗಳು ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಅವರ ಸ್ಥಳಕ್ಕೆ ತಲುಪಿಸುತ್ತಿದಾರೆ. ಈ ರೀತಿ ಸೇವೆ ಮಾಡುವ ಇವರು ನಿಜವಾಗಲು ಸಾರ್ವಜನಿಕ ಸೇವಕರಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ.
ಇನ್ನು ಇಂಥ ಸಾರಿಗೆ ನೌಕರರನ್ನು ನಾಡಿನ ಜನರು ಗೌರವದಿಂದ ಕಾಣಬೇಕು. ಇದಕ್ಕೂ ಮಿಗಿಲಾಗಿ ರಾಜ್ಯ ಸರ್ಕಾರ ಈ ನೌಕರರಿಗೆ ಸಿಗಬೇಕಿರುವ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಮೀನಮೇಷ ಎಣಿಸಬಾರದು. ಆದರೆ, ಕಳೆದ ಬಿಜೆಪಿ ಸರ್ಕಾರ ಈ ನೌಕರರನ್ನು ಭಾರೀ ತುಚ್ಯವಾಗಿ ನಡೆಸಿಕೊಂಡಿದ್ದು ಮಾತ್ರ ಖೇದಕರ ಸಂಗತಿ.
ಬಿಜೆಪಿಗರಂತೆ ಕಾಂಗ್ರೆಸ್ ಸರ್ಕಾರ ನಡೆಸಿಕೊಳ್ಳದೆ ಸಾರಿಗೆ ಸಿಬ್ಬಂದಿಗೆ ನ್ಯಾಯಯುತವಾಗಿ ಸಿಗಬೇಕಿರುವ ಸೌಲಭ್ಯಗಳನ್ನು ಕೊಡುವಲ್ಲಿ ಹಿಂದೇಡು ಹಾಕಬಾರದು. ಜತೆಗೆ 2020 ಜನವರಿಯಿಂದ-2023ರ ಫೆಬ್ರವರಿ ನಡುವೆ ನಿವೃತ್ತರಾಗಿರುವ ನೌಕರರಿಗೆ ದೊರಕಬೇಕಿರುವ ಸೌಲಭ್ಯಗಳನ್ನು ನೀಡಬೇಕಿದೆ. ಇದನ್ನು ತಡಮಾಡದೆ ರಾಜ್ಯ ಸರ್ಕಾರ ಕೊಡಬೇಕು.
ಒಂದು ವೇಳೆ ತಡ ಮಾಡಿದರೆ ಈಗಾಗಲೇ 60 ವರ್ಷ ಪೂರೈಸಿರುವ ಜೀವಗಳು ನೀವು ತಡವಾಗಿ ಕೊಡುವ ಸೌಲಭ್ಯಗಳನ್ನು ಅನುಭವಿಸುವುದಕ್ಕೆ ಸಾಧ್ಯವಾಗುವುದಿಲ್ಲವೇನೋ. ಅದಕ್ಕೆ ಆ ಹಿರಿಯ ಜೀವಗಳು ಬದುಕಿರುವಾಗಲೇ ಅವರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ತಲುಪಿಸುವತ್ತ ಸರ್ಕಾರ ಮುಂದಾಗಬೇಕಿದೆ.
ಇನ್ನು 2024 ಜನವರಿ 1ರಿಂದ ಜಾರಿಗೆ ಬರುವಂತೆ ಸರ್ಕಾರಿ ನೌಕರರಿಗೆ ಸರಿ ಸಮಾನವಾದ ವೇತನವನ್ನು ಕೊಡುವ ಮೂಲಕ ಈ ನಾಡಿನೊಳಗಿನ ಸೈನಿಕರಾದ ಸಾರಿಗೆ ಅಧಿಕಾರಿಗಳು – ನೌಕರರಿಗೆ ಸಂತಸದ ವಾತಾವರಣವನ್ನು ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಕಲ್ಪಿಸಬೇಕು.
ಇನ್ನು ಈ ಹಬ್ಬ ಹರಿದಿನಗಳಲ್ಲೂ ತಮ್ಮ ಕರ್ತವ್ಯ ನಿಷ್ಠೆ ಮೆರೆಯುವ ಈ ಸಾರಿಗೆ ನೌಕರರು ನಾಡಿನ ಒಳಗಿನ ಸೈನಿಕರಾಗಿದ್ದು, ಹಬ್ಬದಲ್ಲೂ ಕರ್ತವ್ಯ ನಿರತ ಈ ಸಿಬ್ಬಂದಿಗೆ ಒಂದು ಸಲಾಮ್ ಅಲ್ಲ ಅಲ್ಲ ಕೋಟಿ ಕೋಟಿ ಸಲಾಮ್. ಎಲ್ಲ ಸಿಬ್ಬಂದಿಯೂ ಇನ್ನಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡುವುದಕ್ಕೆ ಈ ಬೆಳಕಿನ ಹಬ್ಬ ಇನ್ನಷ್ಟು ಶಕ್ತಿ ನೀಡುವುದಕ್ಕೆ ನಾಡಿನ ಜನತೆಯೂ ಪ್ರೇರಣೆಯಾಗಬೇಕು.