NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಶಿವಮೊಗ್ಗ: ಹೆಚ್ಚುವರಿ ಬಸ್‌ ಬಿಡಿ ಎಂದರೂ ಸ್ಪಂದಿಸದ ಅಧಿಕಾಗಳ ವಿರುದ್ಧ ಬಸ್‌ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಸಾಸ್ವೆಹಳ್ಳಿ (ಶಿವಮೊಗ್ಗ): ಸಮರ್ಪಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಹೊನ್ನಾಳಿ ತಾಲೂಕು ಲಿಂಗಾಪುರ ಬಸ್‌ ನಿಲ್ದಾಣದಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಬಸ್‌ ತಡೆದು ಪ್ರತಿಭಟನೆ ನಡೆಸಿ ಸಂಸ್ಥೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಿನ್ನೆ ಬೆಳಗ್ಗೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಹೊನ್ನಾಳಿಯಿಂದ ಸಾಸ್ವೆಹಳ್ಳಿ ಆನವೇರಿ ಮಾರ್ಗವಾಗಿ ಶಿವಮೊಗ್ಗಕ್ಕೆ ಹೋಗುವ ಸಾರಿಗೆ ಬಸ್‌ಗಳು ಪ್ರತಿನಿತ್ಯ ಹೊನ್ನಾಳಿಯಿಂದ ಸಾಸ್ವೆಹಳ್ಳಿ ಬಸ್‌ ನಿಲ್ದಾಣಕ್ಕೆ ಬರುವಷ್ಟರಲ್ಲಿ 90 ರಿಂದ 150 ಪ್ರಯಾಣಿಕರು ತುಂಬಿರುತ್ತಾರೆ.

ಹೀಗಾಗಿ ಸಾಸ್ವೆಹಳ್ಳಿ ನಂತರ ಶಿವಮೊಗ್ಗದವರೆಗೂ 45 ಕಿಮೀ ಯಾವುದೇ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಹತ್ತಲು ಬಸ್‌ನಲ್ಲಿ ಸ್ಥಳವೇ ಇರಲ್ಲ. ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್‌ ಗೆ ಜೋತು ಬಿದ್ದು ಪ್ರಯಾಣಿಸುವ ದುಸ್ಥಿತಿ ಎದುರಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.

ಈ ಬಗ್ಗೆ ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್‌ ಕುಮಾರ್‌ ಹಾಗೂ ಡಿಟಿಒ ದಿನೇಶ್‌ ಚನ್ನಗಿರಿಗೆ ಹಲವು ಬಾರಿ, ಈ ಮಾರ್ಗದಲ್ಲಿ ಹೆಚ್ಚುವರಿ ಬಸ್‌ ಬಿಡುವಂತೆ ಮನವಿ ಸಲ್ಲಿಸಲಾಗಿದೆ. ಆದರೆ ಈ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಹೀಗಾಗಿ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ತಿಳಿಸಿದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೊನ್ನಾಳಿ ಡಿಪೋ ಮ್ಯಾನೇಜರ್‌ ರಾಮಚಂದ್ರಪ್ಪ ಬಂದು ಮಾತನಾಡಿ, ವಿದ್ಯಾರ್ಥಿಗಳಿಗೆ ಅಕ್ಟೋಬರ್‌ 6 ರೊಳಗೆ ಈ ಮಾರ್ಗವಾಗಿ ಸರ್ವೆ ಕಾರ್ಯ ನಡೆಸಿ ಹೆಚ್ಚುವರಿ ಬಸ್‌ ಬಿಡುವುದಾಗಿ ತಿಳಿಸಿದರು.

ಆಗ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಈ ನಿಗದಿತ ದಿನದೊಳಗೆ ಹೆಚ್ಚುವರಿ ಬಸ್‌ ಬಿಡದೆ ಹೋದಲ್ಲಿ ಅ.6ರಂದು ಸಾಸ್ವೆಹಳ್ಳಿಯಲ್ಲಿ ಸಾರಿಗೆ ಬಸ್‌ ತಡೆಯುವ ಮೂಲಕ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ, ಪ್ರತಿಭಟನೆ ಹಿಂಪಡೆದರು.

Advertisement

ಈ ಸಮಯದಲ್ಲಿ ಸಾರಿಗೆ ಇಲಾಖೆಯ ಸೆಕ್ಯೂರಿಟಿ ಆಫೀಸರ್‌ ಮಂಜುನಾಥ್‌, ತಪಾಸಣೆ ಇನ್ಸ್‌ಫೆಕ್ಟರ್‌ ಚಂದ್ರಶೇಖರ್‌, ಟ್ರಾಫಿಕ್‌ ಕಂಟ್ರೋಲರ್‌ ನಾಗರಾಜಪ್ಪ, ಪೊಲೀಸ್‌ ಪೇದೆಗಳಾದ ದೇವರಾಜ್‌, ಮಂಜುನಾಥ್‌, ಲಿಂಗಾಪುರ ಹಾಗೂ ಸುತ್ತಮುತ್ತಲಿನ ಹಳ್ಳಿಯ ವಿದ್ಯಾರ್ಥಿಗಳು, ಪೋಷಕರು ಇದ್ದರು.

Megha
the authorMegha

Leave a Reply

error: Content is protected !!