KSRTC: ಎಲ್ಲ ಸಾರಿಗೆ ಅಧಿಕಾರಿ, ನೌಕರರ ಒಗ್ಗೂಡಿಸಿ ಬೇಡಿಕೆಗಳ ಈಡೇರಿಕೆ ಬಗ್ಗೆ ಚರ್ಚಿಸಲು ಅ.15ರಂದು ರಾಜ್ಯ ಮಟ್ಟದ ವಿಚಾರ ಸಂಕಿರ್ಣ



ಧಾರವಾಡ: ರಾಜ್ಯ ಮಟ್ಟದ ಸಾರಿಗೆ ನೌಕರರ ಒಕ್ಕೂಟದ ವಿಚಾರ ಸಂಕಿರ್ಣ ಸಭೆ ವಾಯುವ್ಯ ಸಾರಿಗೆ ನೌಕರರ ಕೂಟ ಹುಬ್ಬಳ್ಳಿ-ಧಾರವಾಡ ಭಾಗದ ಗೌರವಾಧ್ಯಕ್ಷ, ವಕೀಲ ಪಿ.ಎಚ್. ನೀರಲಕೇರಿ ನೇತೃತ್ವದಲ್ಲಿ ಇದೇ ಅ.15ರಂದು ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದೆ.
ಧಾರವಾಡದ ಮಹಾನಗರ ಪಾಲಿಕೆ ಎದುರಿರುವ ಕರ್ನಾಟಕ ವಿದ್ಯಾವರ್ಧಕ ಸಂಘ (ನಾಡೋಜ ಪಾಟೀಲ ಪುಟ್ಟಪ್ಪ ಭವನ)ದಲ್ಲಿ ಸಭೆ ಆಯೋಜಿಸಿದ್ದು, ಈ ಸಭೆಯಲ್ಲಿ ವಿವಿಧರ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತಿದೆ.
ಚರ್ಚೆಯ ಪ್ರಮುಖ ವಿಷಯಗಳೆಂದರೆ ನಾಲ್ಕು ನಿಗಮಗಳ ಅಧಿಕಾರಿ/ ನೌಕರರನ್ನು ಒಗ್ಗೂಡಿಸಿ ನೌಕರರಿಗೆ ಸಿಗಬೇಕಾದ ಸವಲತ್ತುಗಳ ಪಡೆಯುವುದಕ್ಕೆ ಹೋರಾಟ ರೂಪಿಸುವುದು.
ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ನಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು ಹಾಗೂ ಸದ್ಯದಲ್ಲಿ ಸರ್ಕಾರ ಮಧ್ಯಂತರ ಪರಿಹಾರ ನೀಡಲು ಆಗ್ರಹಿಸಬೇಕು.
ಇನ್ನು ಶಕ್ತಿ ಯೋಜನೆಯನ್ನು ಯಶಸ್ವಿಗೊಳಿಸಿದ ಶ್ರಮಜೀವಿ ನೌಕರರಿಗೆ ಬೋನಸ್ ನೀಡಬೇಕು ಎಂಬುದರ ಬಗ್ಗೆ ಸರ್ಕಾರಕ್ಕೆ ಒತ್ತಾಯ ಹೇರಬೇಕು.
ಸಾರಿಗೆ ನೌಕರರ ಆರೋಗ್ಯದ ಬಗ್ಗೆ ಸಂಸ್ಥೆಯಲ್ಲಿರುವ ಸಿ.ಜಿ.ಎಚ್.ಎಸ್.ಆರ್. ಯೋಜನೆ ಕುರಿತು ಹಾಗೂ ಎಚ್.ಆರ್.ಎಮ್.ಎಸ್. ಅಳವಡಿಕೆ ಬಗ್ಗೆಯೂ ಚರ್ಚೆ ನಡೆಸಲಾಗುವುದು.

ಇವುಗಳ ಜತೆಗೆ ನಿವೃತ್ತ ನೌಕರರ ಜ್ವಲ್ವಂತ ಸಮಸ್ಯೆಗಳಿಗೆ ಪರಿಹಾರ. 2025 ನೇ ಸಾಲಿನ ಹುಬ್ಬಳ್ಳಿ ಸಹಕಾರಿ ಪತ್ತಿನ ಸಂಘದ ಚುನಾವಣೆ ಕುರಿತು, ಸಾರಿಗೆ ನೌಕರ ಕುಟುಂಬ ವರ್ಗ ಹಾಗೂ ಅವರ ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರ ಉಚಿತ ಶಿಕ್ಷಣ ಒದಗಿಸುವುದರ ಬಗ್ಗೆ ಚರ್ಚೆ ನಡೆಯಲಿದೆ.
ಒಕ್ಕೂಟವು ಸರ್ಕಾರ ಹಾಗೂ ಅಧಿಕಾರಿಗಳಿಗೆ ಸೇತುವೆಯಾಗಿ ಕಾರ್ಯನಿರ್ವಹಿಸಿ ಸಂಸ್ಥೆಯನ್ನು ಅಭಿವೃದ್ಧಿಗೊಳಿಸಿ ನೌಕರರ ಭವಿಷ್ಯ ಉಜ್ವಲಗೊಳಿಸುವ ಕುರಿತು ಚರ್ಚಿಸುಲು ಹಾಗೂ ರಾಜ್ಯದ ಎಲ್ಲ ಸಾರಿಗೆ ಅಧಿಕಾರಿ/ ನೌಕರರನ್ನು ಒಗ್ಗೂಡಿಸಿ ಒಟ್ಟಾರೆ ಬೇಡಿಕೆಗೆ ಸರ್ಕಾರ ಸ್ಪಂದಿಸುವಂತೆ ಮಾಡುವುದೆ ಒಕ್ಕೂಟದ ಮೂಲ ಉದ್ದೇಶವಾಗಿದ್ದು ಎಲ್ಲರೂ ಈ ಸಭೆಗೆ ಬರಬೇಕು ಎಂದು ಒಕ್ಕೂಟ ಮನವಿ ಮಾಡಿದೆ.
Related
