
ಬನ್ನೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೈಸೂರು ವಿಭಾಗದ ಬಸ್ ಇಂಜಿನಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್‌ನ ಮುಂದಿನ ಭಾಗ ಸುಟ್ಟು ಬೂದಿಯಾಗಿರುವ ಘಟನೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಬನ್ನೂರು ಬಳಿ ಮೈಸೂರು-ಮಳ್ಳವಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ.
ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಸ್‌ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಭಾರಿ ಅನಾಹುತವೊಂದು ತಪ್ಪಿದೆ.
ಇಂದು ಮಧ್ಯಾಹ್ನ ಬನ್ನೂರಿನಿಂದ ಮೈಸೂರಿಗೆ ಬಸ್ ಬರುತ್ತಿದ್ದಾಗ ಬಸ್ ಮುಂಭಾಗ ಇಂಜಿನ್‌ನಲ್ಲಿ ಹೊಗೆ ಬರುತ್ತಿತ್ತು. ಆ ಹೊಗೆ ನೋಡಿದ ಚಾಲಕ, ಕೂಡಲೇ ಬಸ್ ಅನ್ನು ರಸ್ತೆ ಬದಿಗೆ ನಿಲ್ಲಿಸಿ ಎಲ್ಲ ಪ್ರಯಾಣಿಕರನ್ನು ಕೆಳಗೆ ಇಳಿಸಿ ಅಗ್ನಿಶಾಮಕ ಸಾಧನದಿಂದ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಇಂಜಿನ್‌ನಿಂದ ಹೊತ್ತಿದ ಬೆಂಕಿಯು ನಂತರ ಬಸನ್ನು ಆವರಿಸಿಕೊಳ್ಳುತ್ತಿತ್ತು.
ಅದನ್ನು ಗಮನಿಸಿದ ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ರಸ್ತೆ ಬದಿಯಲ್ಲಿ ಸಿಕ್ಕ ಮರಳನ್ನು ಬೆಂಕಿ ಹೊತ್ತಿಕೊಂಡಿದ್ದೆಡೆ ಎರಚಿ ಎರಚಿ ಬೆಂಕಿಯನ್ನು ನಂದಿಸಿದರು. ಆದರೆ, ಅಷ್ಟರಲ್ಲಾಗಲೇ ಬಸ್‌ನ ಮುಂದಿನ ಭಾಗ ಸಂಪೂರ್ಣ ಸುಟ್ಟು ಕರಕಲಾಗಿತ್ತು.
ಒಟ್ಟಾರೆ ಬಸ್ ಹಳೆಯದಾಗಿದ್ದು ಸ್ಕ್ರಾಪ್ ಬಸನ್ನು ರಸ್ತೆ ಮೇಲೆ ಬಿಟ್ಟಿರುವುದರಿಂದ ಈ ಬೆಂಕಿ ಅನಾಹುತ ಸಂಭವಿಸಿದೆ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಸುತ್ತಿದ್ದರು. ಇನ್ನು ಬಸ್ ಹಳೆಯದಾಗಿದ್ದರೂ ಅದನ್ನು ಮಾರ್ಗಾಚರಣೆಗೆ ಇಳಿಸಿ ಪ್ರಯಾಣಿಕರ ಜೀವದ ಜತೆ ಚೆಲ್ಲಾಟವಾಡುವುದು ಸರಿಯಲ್ಲ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದರು.
ಒಟ್ಟಾರೆ ಬಸ್ ಚಾಲಕ ಸಮಯ ಪ್ರಜ್ಞೆ ಮೆರೆದಿಲ್ಲ ಎಂದಿದ್ದರೆ ಭಾರಿ ಅನಾಹುತವೇ ಅಂಭವಿಸುತ್ತಿತ್ತು. ಇದರಿಂದ ಹಲವಾರು ಪ್ರಯಾಣಿಕರು ಪ್ರಾಣವನ್ನು ಕಳೆದುಕೊಳ್ಳಬೇಕಿತ್ತು. ಸದ್ಯ ಅಂತಹ ಅನಾಹುತಕ್ಕೆ ಚಾಲಕರು ಅವಕಾಶವಿಲ್ಲದಂತೆ ತಕ್ಷಣ ಬಸ್ ನಿಲ್ಲಿಸಿ ಹತ್ತಾರು ಜೀವಗಳನ್ನು ಉಳಿಸಿದ್ದಾರೆ ಎಂದು ಸ್ಥಳದಲ್ಲಿದ್ದ ಮಂದಿ ಚಾಲಕನ ಸಮಯ ಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.

Related









