NEWSನಮ್ಮರಾಜ್ಯಲೇಖನಗಳು

KSRTC: ಇವರಿಗೆಲ್ಲ ಉಚಿತ ಬಸ್ ಪಾಸ್ ಸೌಲಭ್ಯ ಕೊಟ್ಟ ಸರ್ಕಾರ ನೌಕರರಿಗೆ ಸರಿಯಾದ ವೇತನ ಕೊಡಲು ಮಾತ್ರ ಎಣಿಸುತ್ತಿದೆ ಮೀನಾಮೇಷ!!!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರು, ಅಂಗವಿಕಲರು, ಅಂಧರು, ಪತ್ರಕರ್ತರು ಸೇರಿದಂತೆ ಹಲವರಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡಲಾಗಿದೆ. ಇನ್ನು ರಾಜ್ಯದ ಮಹಿಳೆಯರು ಯಾವುದೇ ಅಡ್ಡಿ ಆತಂಕವಿಲ್ಲದೆ ರಾಜ್ಯಾದ್ಯಂತ ಉಚಿತ ಪ್ರಯಾಣ ಮಾಡುವ ಅವಕಾಶವನ್ನು ನೀಡಿದೆ.

ಆದರೆ, ಹಗಲು ರಾತ್ರಿ ಎನ್ನದೆ ದಿನದ 24 ಗಂಟೆಯೂ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಸಾರಿಗೆ ನೌಕರರಿಗೆ ಮಾತ್ರ ಸರಿಯಾದ ವೇತನ ಕೊಡುವುದಕ್ಕೆ ಮೀನಾಮೇಷ ಎಣಿಸುತ್ತಿದೆ. ಇದು ಏಕೆ ಎಂಬುವುದು ಈವರೆಗೂ ತಿಳಿಯದ ಯಕ್ಷ ಪ್ರಶ್ನೆಯಾಗಿದೆ.

ರಾಜ್ಯದ ಮಹಿಳೆಯರು ಸೇರಿದಂತೆ ಹಲವರಿಗೆ ಸರ್ಕಾರ ಉಚಿತ ಸೌಲಭ್ಯ ನೀಡಿದೆ. ಇದು ಖುಷಿಯ ವಿಚಾರ. ಆದರೆ ನೌಕರರಿಗೂ ಅವರ ಸೇವಾ ಪರಿಶ್ರಮಕ್ಕೆ ತಕ್ಕಂತೆ ಇಂದಿನ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ವೇತನ ಕೊಡಬೇಕಲ್ಲ? ಅದನ್ನು ಕೊಡುವುದು ಸರ್ಕಾರದ ಜವಾಬ್ದಾರಿಯೂ ಆಗಿದೆ. ಆದರೂ ಈ ಜವಾಬ್ದಾರಿಯನ್ನು ಮರೆತಿರುವ ಸರ್ಕಾರದ ನಡೆ ನಿಜಕ್ಕೂ ಬೇಸರ ತರಿಸುತ್ತಿದೆ.

ಇನ್ನು ರಾಜ್ಯ ಸಾರಿಗೆ ಬಸ್‌ಗಳಲ್ಲಿ ಯಾರಿಗೆಲ್ಲಾ ಉಚಿತ ಬಸ್‌ಪಾಸ್ ಇದೆ ಎಂದರೆ; ಎಂಡೋಸಲ್ಫಾನ್ ಪೀಡಿತ ಸಂತ್ರಸ್ತರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಇದ್ದು, ಈ ಯೋಜನೆಗಾಗಿ 8.04 ಕೋಟಿಗಳನ್ನು ಸರ್ಕಾರದಿಂದ ಒದಗಿಸಲಾಗಿದೆ. ಈ ಯೋಜನೆಯನ್ನು 2013ರಲ್ಲಿ ಪ್ರಾರಂಭಿಸಲಾಯಿತು. ರಾಜ್ಯದ ಕರಾವಳಿ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಎಂಡೋಸಲ್ಫಾನ್ ಕಾಯಿಲೆಯಿಂದ ಬಳಲುತ್ತಿರುವ ಜನರ ಯೋಗಕ್ಷೇಮದ ದೃಷ್ಟಿಯಿಂದ ಎಂಡೋಸಲ್ಫಾನ್ ಪೀಡಿತರಿಗೆ ಅವರ ಸಹಾಯಕರೊಂದಿಗೆ ಪ್ರಯಾಣಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 4300 ಫಲಾನಿಭವಿಗಳಿಗೆ ಉಚಿತ ಬಸ್‌ಪಾಸ್‌ಗಳನ್ನು ವಿತರಿಸಿದೆ. ನಾಲ್ಕೂ ರಸ್ತೆ ಸಾರಿಗೆ ನಿಗಮಗಳು ನಗರ, ಉಪನಗರ, ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ರಾಜ್ಯದೊಳಗೆ ಎಲ್ಲಿ ಬೇಕಾದರೂ ಪ್ರಯಾಣಿಸಲು ಅನುಮತಿಸಲಾಗಿದೆ.

ಪತ್ರಕರ್ತರಿಗೆ ಉಚಿತ ಬಸ್: ಈ ಯೋಜನೆಗೆ 50 ಲಕ್ಷ ರೂ.ಗಳನ್ನು ಒದಗಿಸುತ್ತಿದ್ದು, 19.10.2010 ರಿಂದ (2010-11ನೇ ಸಾಲಿನಿಂದ) ವಾರ್ತಾ ಇಲಾಖೆಯಿಂದ ಗುರುತಿಸಲ್ಪಟ್ಟ ಮತ್ತು ಶಿಫಾರಸು ಮಾಡಿದ ಮಾನ್ಯತೆ ಪಡೆದ ಪತ್ರಕರ್ತರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಸ್ಮಾರ್ಟ್‌ ಕಾರ್ಡ್‌ಗಳನ್ನು ನೀಡಲಾಗುತ್ತದೆ ತಮ್ಮ ಪತ್ರಿಕಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ರಾಜ್ಯಾದ್ಯಂತ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ವಾರ್ತಾ ಇಲಾಖೆಯ ಬೇಡಿಕೆಯಂತೆ ಸ್ಮಾರ್ಟ್ ಕಾರ್ಡ್ ಮಾದರಿಯಲ್ಲಿ ಬಸ್‌ಪಾಸ್‌ಗಳನ್ನು ಸಿದ್ಧಪಡಿಸಿ ಪಾಲಿಕೆ ವತಿಯಿಂದ ವಾರ್ತಾ ಇಲಾಖೆಗೆ ನೀಡಲಾಗಿದೆ, ವಾರ್ತಾ ಇಲಾಖೆಯಿಂದ 2000 ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್‌ ಗಳನ್ನು ವಿತರಿಸಲು ಆದೇಶ ಹೊರಡಿಸಲಾಗಿದೆ.

ಅಂಧರಿಗೆ ಉಚಿತ ಬಸ್ ಪ್ರಯಾಣ: ಈ ಯೋಜನೆಗೆ 20.39 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು. ಈ ಯೋಜನೆಯನ್ನು 1978ರಲ್ಲಿ ಪ್ರಾರಂಭಿಸಲಾಯಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶೇ.100 ರಷ್ಟು ಅಂಧತ್ವ ಹೊಂದಿರುವ ಅಂಧರಿಗೆ ಉಚಿತ ಬಸ್‌ ಪಾಸ್‌ಗಳನ್ನು ವಿತರಿಸಲಾಗಿದೆ.ಈ ಪಾಸ್‌ನ ಸಿಂಧುತ್ವವು ಐದು ವರ್ಷಗಳು. 4 ರಸ್ತೆ ಸಾರಿಗೆ ನಿಗಮಗಳು ನಿರ್ವಹಿಸುವ ನಗರ, ಉಪನಗರ, ಸಾಮಾನ್ಯ, ವೇಗದೂತ ಸೇವೆಗಳಲ್ಲಿ (ಅಂತರ ರಾಜ್ಯ ಸೇವೆಗಳನ್ನು ಒಳಗೊಂಡಂತೆ) 19825 ಫಲಾನುಭವಿಗಳು ಪುಯಾಣಿಸಲು ಅನುಮತಿಸಲಾಗಿದೆ.ಮತ್ತು ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಗೆ ಕ್ರಮವಾಗಿ, 3.50 ಕೋಟಿ ರೂ. ಮತ್ತು 1.42 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ಅಂಗವಿಕಲರಿಗೆ ಉಚಿತ ಬಸ್ ಪಾಸ್: ಈ ಯೋಜನೆಗೆ 23.45 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, ಈ ಯೋಜನೆಯನ್ನು 2003ರಲ್ಲಿ ಪ್ರಾರಂಭಿಸಲಾಯಿತು ದೈಹಿಕ ವಿಕಲಚೇತನರಿಗೆ ರಿಯಾಯಿತಿ ಪಾಸ್‌ಗಳನ್ನು ನೀಡಲು ಮಂಜೂರು ಮಾಡಲಾಗುವುದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಶೇ.40 ರಷ್ಟು ಮತ್ತು ಅದಕ್ಕಿಂತ ಹೆಚ್ಚಿನ ವಿಕಲಾಂಗ ಫಲಾನುಭವಿಗಳಿಗೆ ಬಸ್ ಪಾಸ್‌ಗಳನ್ನು ರಿಯಾಯಿತಿಯಲ್ಲಿ ನೀಡುತ್ತಿದೆ. ಈ ಫಲಾನುಭವಿಗಳು ತಮ್ಮ ನಿವಾಸದಿಂದ 100 ಕಿಮೀ ವ್ಯಾಪ್ತಿಯ ರಾಜ್ಯದೊಳಗೆ ರಿಯಾಯಿತಿ ಪಾಸ್ ಅನ್ನು ಬಳಸಬಹುದು. 4 ರಸ್ತೆ ಸಾರಿಗೆ ನಿಗಮಗಳು ನಿರ್ವಹಿಸುವ ನಗರ, ಉಪನಗರ, ಸಾಮಾನ್ಯ, ವೇಗದೂತ ಸೇವೆಗಳಲ್ಲಿ 1,33,000 ಫಲಾನುಭವಿಗಳಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಮತ್ತು ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಗೆ ಕ್ರಮವಾಗಿ 4.02 ಕೋಟಿ ರೂ.ಮತ್ತು 1.63 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ಸ್ವಾತಂತ್ರ ಯೋಧರ ವಿಧವೆಯರ ಉಚಿತ ಬಸ್ ಪಾಸ್ ವಿತರಣೆ: ಈ ಯೋಜನೆಗೆ 0.02 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು. ಈ ಯೋಜನೆಯನ್ನು 2009ರಲ್ಲಿ ಪ್ರಾರಂಭಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರ ವಿಧವೆಯರಿಗೆ ಉಚಿತ ಬಸ್‌ಪಾಸ್ ನೀಡಲು. ಈ ಯೋಜನೆಯ ಅಡಿಯಲ್ಲಿ 2,000 ರೂ. ಮೌಲ್ಯದ ಉಚಿತ ಬಸ್ ಪ್ರಯಾಣ ಕೂಪನ್‌ಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯರು/ ವಿಧವೆಯರಿಗೆ ನೀಡಲಾಗುತ್ತಿದೆ. ಕರ್ನಾಟಕ ಆಡಳಿತ ಸುಧಾರಣಾ ಸಮಿತಿ-2ರ ಮೊದಲ ವರದಿಗಳ ಶಿಫಾರಸುಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ 12.10.2021 ರಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡಾವಳಿಗಳ ಪ್ರಕಾರ ಜೀವಮಾನದ ಬಸ್ ಪಾಸ್‌ಗಳನ್ನು ವಿತರಿಸಲು ನಿರ್ದೇಶನವಿದೆ.

ಸಾಮಾನ್ಯ ಸ್ಥಾಯಿ ಸಮಿತಿ ಆದೇಶ ಸಂಖ್ಯೆ.816/2022ರಲ್ಲಿ ಹೊರಡಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯರಿಗೆ/ ವಿಧವೆಯರಿಗೆ ಜೀವಮಾನದ ಉಚಿತ ಬಸ್ ಪಾಸ್ ನೀಡಲು ನಿಗಮದಿಂದ ಕ್ರಮ ಕೈಗೊಳ್ಳಲಾಗಿದೆ. ಈ ಪಾಸ್ ಹೊಂದಿರುವವರು ರಾಜ್ಯ ಮತ್ತು ಅಂತರ ರಾಜ್ಯದಾದ್ಯಂತ ಎಲ್ಲ ವರ್ಗದ ಬಸ್‌ಗಳಲ್ಲಿ ಪ್ರಯಾಣಿಸಲು ಅನುಮತಿಸಲಾಗಿದೆ. 75 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 110 ಫಲಾನುಭವಿಗಳು ಒಬ್ಬ ಸಂಗಾತಿಯೊಂದಿಗೆ ಪ್ರಯಾಣಿಸಲು ಅನುಮತಿಸಲಾಗಿದೆ.

ಹಿರಿಯ ನಾಗರಿಕರಿಗೆ ರಿಯಾಯಿತಿ ಪ್ರಯಾಣ ಸೌಲಭ್ಯ: ಈ ಯೋಜನೆಗೆ 36.42 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, ಹಿರಿಯ ನಾಗರಿಕರಿಗೆ ರಿಯಾಯಿತಿ ಟಿಕೆಟ್‌ಗಳನ್ನು ಒದಗಿಸುವ ಯೋಜನೆ 2008ರಲ್ಲಿ ಪ್ರಾರಂಭಿಸಲಾಯಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಕರ್ನಾಟಕ ರಾಜ್ಯದ 1640 ಹಿರಿಯ ನಾಗರಿಕರ ನಿವಾಸಗಳಿಗೆ ಟಿಕೆಟ್ ದರದ ಶೇ.25ರಷ್ಟು ರಿಯಾಯಿತಿಯನ್ನು ನೀಡಲಾಗಿರುತ್ತದೆ. ನಾಲ್ಕು ರಸ್ತೆ ಸಾರಿಗೆ ನಿಗಮಗಳು ನಿರ್ವಹಿಸುವ ನಗರ, ಉಪನಗರ, ಸಾಮಾನ್ಯ, ವೇಗದೂತ ಮತ್ತು ರಾಜಹಂಸ ಬಸ್‌ಗಳಲ್ಲಿ (ಅಂತರ ರಾಜ್ಯ ಬಸ್ಸುಗಳನ್ನು ಒಳಗೊಂಡಂತೆ) ಪ್ರಯಾಣಿಸಲು ಅವರಿಗೆ ಅನುಮತಿಸಲಾಗಿದೆ ಮತ್ತು ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಕ್ರಮವಾಗಿ 6.25 ಕೋಟಿ ರೂ. ಮತ್ತು 2.53 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ಹುತಾತ್ಮರ ಅವಲಂಬಿತರಿಗೆ ಉಚಿತ ಬಸ್ ಪಾಸ್: ಈ ಯೋಜನೆಗೆ 1.51 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು. ಈ ಯೋಜನೆಯನ್ನು 2012ರಲ್ಲಿ ಪ್ರಾರಂಭಿಸಲಾಯಿತು. ಅವಲಂಬಿತ ಹುತಾತ್ಮರಿಗೆ ಉಚಿತ ಪಾಸ್‌ಗಳನ್ನು ಒದಗಿಸಲು ದೇಶದ ರಕ್ಷಣೆಗಾಗಿ ಮಡಿದ ಹುತಾತ್ಮರ ಅವಲಂಬಿತರಿಗೆ 1350 ಉಚಿತ ಬಸ್ ಪಾಸ್ ನೀಡಲಾಗಿದೆ. ರಾಷ್ಟ್ರೀಯ ಸೇವೆ/ಯುದ್ಧದಲ್ಲಿ ಮಡಿದ ಹುತಾತ್ಮರ ಅವಲಂಬಿತರಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ. ನಾಲ್ಕು ರಸ್ತೆ ಸಾರಿಗೆ ನಿಗಮಗಳು ನಿರ್ವಹಿಸುವ ನಗರ, ಉಪನಗರ, ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ (ರಾಜ್ಯದೊಳಗೆ) ಪ್ರಯಾಣಿಸಲು ಅನುಮತಿಸಲಾಗಿದೆ.

ಗೋವಾ ಚಳುವಳಿಗಾರರಿಗೆ ಉಚಿತ ಬಸ್ ಪಾಸ್ ಸೌಲಭ್ಯ: ಈ ಯೋಜನೆಗೆ 2.12 ಕೋಟಿ ರೂ. ಒದಗಿಸಲಾಗಿದ್ದು. 2017-18ನೇ ಸಾಲಿನಿಂದ ಗೋವಾ ವಿಮೋಚನಾ ಹೋರಾಟಗಾರರಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ. ಗೋವಾ ವಿಮೋಚನಾ ಆಂದೋಲನದಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ನಿಗಮವು 465 ಉಚಿತ ಬಸ್ ಪಾಸ್ ವಿತರಿಸಿದೆ. ಫಲಾನುಭವಿಗಳು ರಾಜ್ಯ ಮತ್ತು ಅಂತರರಾಜ್ಯ ಮಾರ್ಗಗಳಲ್ಲಿ ನಿಗಮದ ಎಲ್ಲಾ ವರ್ಗದ ಬಸ್‌ಗಳಲ್ಲಿ ಪ್ರಯಾಣಿಸಬಹುದು. 75 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಫಲಾನುಭವಿಗಳು ಒಬ್ಬರು ಸಹ ಪ್ರಯೋಶಿಕರೊಂದಿಗೆ ಉಚಿತವಾಗಿ ಪ್ರಯಾಣಿಸಬಹುದು.

ಸ್ವಾತಂತ್ರ ಹೋರಾಟಗಾರರಿಗೆ ಉಚಿತ ಬಸ್ ಪಾಸ್: ಈ ಯೋಜನೆಗೆ 0.44 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು. ಈ ಯೋಜನೆಯನ್ನು 1995 ರಿಂದ ಪ್ರಾರಂಭಿಸಲಾಯಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸ್ವಾತಂತ್ರ್ಯ ಹೋರಾಟಗಾರರಿಗೆ ಉಚಿತ ಬಸ್ ಪಾಸ್‌ಗಳನ್ನು ನೀಡುತ್ತಿದೆ.75 ವರ್ಷ ಮೇಲ್ಪಟ್ಟ ಸ್ವಾತಂತ್ರ ಹೋರಾಟಗಾರರು ಒಬ್ಬ ಸಹಾಯಕನೊಂದಿಗೆ ಮುಕ್ತವಾಗಿ ಪ್ರಯಾಣಿಸಲು ಅವಕಾಶವಿದೆ. ಅನುಷ್ಠಾನಕ್ಕೆ ಸಂಬಂಧಿಸಿದಂತೆ 12.10.2021 ರಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡಾವಳಿಗಳ ಪ್ರಕಾರ ಈ ಪ್ರಯಾಣಿಕರಿಗೆ ರಾಜ್ಯದ 4 ರಸ್ತೆ ಸಾರಿಗೆ ನಿಗಮಗಳು ನಿರ್ವಹಿಸುವ ಎಲ್ಲ ವರ್ಗದ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿಸಲಾಗಿದೆ.

ಕರ್ನಾಟಕ ಆಡಳಿತ ಸುಧಾರಣಾ ಸಮಿತಿ-2ರ ಮೊದಲ ವರದಿಗಳ ಶಿಫಾರಸುಗಳು ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯರು/ ವಿಧವೆಯರಿಗೆ ಜೀವಮಾನದ ಬಸ್ ಪಾಸ್‌ಗಳನ್ನು ನೀಡಲು ನಿರ್ದೇಶನವಿದೆ.ಅದರಂತೆ ಸಾಮಾನ್ಯ ಸ್ಥಾಯಿ ಸಮಿತಿ ಆದೇಶ ಸಂಖ್ಯೆ.816/2022 ಹೊರಡಿಸುವ ಮೂಲಕ ಸ್ವಾತಂತ್ರ ಹೋರಾಟಗಾರರ ಪತ್ನಿಯರಿಗೆ/ ವಿಧವೆಯರಿಗೆ ಜೀವಮಾನದ ಉಚಿತ ಬಸ್ ಪಾಸ್ ನೀಡಲು ನಿಗಮದಿಂದ ಕ್ರಮ ಕೈಗೊಳ್ಳಲಾಗಿದೆ. ಈ ಪಾಸ್ ಹೊಂದಿರುವವರು ರಾಜ್ಯ ಮತ್ತು ಅಂತರ ರಾಜ್ಯದಾದ್ಯಂತ ಎಲ್ಲಾ ವರ್ಗದ ಬಸ್‌ಗಳಲ್ಲಿ ಪಯಾಣಿಸಲು ಅನುಮತಿಸಲಾಗಿದೆ. 75 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 190 ಫಲಾನುಭವಿಗಳು ಒಬ್ಬ ಸಂಗಾತಿಯೊಂದಿಗೆ ಪ್ರಯಾಣಿಸಲು ಅನುಮತಿಸಲಾಗಿದೆ.

ಹೀಗೆ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಉಚಿತ ಮತ್ತು ರಿಯಾಯಿತಿಯಡಿ ಪ್ರಯಾಣ ಮಾಡಲು ಅವಕಾಶಕೊಟ್ಟಿರುವ ಸರ್ಕಾರ ರಿಯಾಯಿತಿ ಹಣವನ್ನು ಸರಿಯಾಗಿ ನಿಗಮಗಳಿಗೆ ಕೊಡುತ್ತಿಲ್ಲ. ಇದರಿಂದ ಸಂಸ್ಥೆಗಳು ಲಾಸ್‌ನಲ್ಲಿ ನಡೆಯುತ್ತಿವೆ. ಜತೆಗೆ ನೌಕರರನ್ನು ಭಾರಿ ಕೀಳಾಗಿ ಸರ್ಕಾರ ಕಾಣುತ್ತಿರುವುದರಿಂದ ನೌಕರರ ಆಕ್ರೋಶದ ಕಟ್ಟೆಯೂ ಯಾವಾಗಬೇಕಾದರೂ ಒಡೆಯಬಹುದು. ಅಲ್ಲದೆ ಈ ಸಂಬಂಧ ನೌಕರರ ಕುಟುಂಬ ಸದಸ್ಯರು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮಾರ್ಚ್‌ನಿಂದ ಧರಣಿ ಸತ್ಯಾಗ್ರಹ ಕೈಗೊಳ್ಳುವುದಕ್ಕೂ ಈಗಾಗಲೇ ಗೌಪ್ಯ ಸಭೆಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಕೂಡಲೇ ಒದಗಿಸಿ ಕೊಡಬೇಕು ಎಂಬ ಆಗ್ರಹವನ್ನು ಸಮಸ್ತ ನೌಕರರು ಮಾಡಿದ್ದಾರೆ.

Megha
the authorMegha

Leave a Reply

error: Content is protected !!