NEWSನಮ್ಮರಾಜ್ಯಬೆಂಗಳೂರು

KSRTC: ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ಜಾಹೀರಾತುಗಳ ನಿರ್ಬಂಧ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಸಾರಿಗೆ ಬಸ್‌ ಹಾಗೂ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಜಾಹೀರಾತನ್ನು ನಿರ್ಬಂಧಿಸಿ ಸಾರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ಸಾರಿಗೆಯ ನಾಲ್ಕೂ ನಿಗಮಗಳ ವ್ಯವಸ್ಥಾಪಕರಿಗೆ ಶುಕ್ರವಾರ ಜ.30ರಂದು ಸೂಚನೆ ನೀಡಿರುವ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ. ಈ ಕೂಡಲೇ ಜಾರಿಗೆ ಬರುವಂತೆ, ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ/ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಯಾವುದೇ ಜಾಹೀರಾತುಗಳನ್ನು ಇನ್ನು ಮುಂದೆ ಪ್ರಚಾರ ಮಾಡದಂತೆ ತಾಕೀತು ಮಾಡಿದ್ದಾರೆ.

ಮುಂದುವರಿದು, ಈಗಾಗಲೇ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವಂತಹ ಜಾಹೀರಾತುಗಳನ್ನು ಬಸ್ಸುಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಅಳವಡಿಸಿದ್ದರೆ, ಅದನ್ನು ತೆಗೆಯಲು ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ, ಆ ನಿಗದಿತ ಸಮಯದೊಳಗೆ ಈ ಜಾಹೀರಾತುಗಳನ್ನು ತೆಗೆದು ಹಾಕುವಂತೆ ಸಂಬಂಧಪಟ್ಟವರಿಗೆ ಕಟ್ಟುನಿಟ್ಟಾಗಿ ನಿರ್ದೇಶನ ನೀಡಬೇಕು ಎಂದು ಎಂಡಿಗಳಿಗೆ ಹೇಳಿದ್ದಾರೆ.

ವಿಜಯಪಥವೂ ಮಾಡಿತ್ತು ಸಮಗ್ರ ವರದಿ: ಇದೇ ಜ.29ರಂದು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಹಾಕಿದ್ದ ಗುಟ್ಕಾ ಜಾಹೀರಾತುಗಳ ಪೋಸ್ಟರನ್ನು(Tobacco Advertisements Poster) ಕನ್ನಡ ಸಂಘಟನೆಗಳ ಕಾರ್ಯಕರ್ತರು ಕಿತ್ತೆಸೆಯುತ್ತಿದ್ದಾರೆ ಎಂಬ ಬಗ್ಗೆ ವಿಜಯಪಥದಲ್ಲೂ ಸಮಗ್ರ ವರದಿ ಪ್ರಕಟವಾಗಿತ್ತು.

ಈ ಮೂಲಕ ಜೀವಕ್ಕೆ ಮಾರಕವಾಗುವ ಗುಟ್ಕಾದಂತಹ ವಸ್ತುಗಳ ಜಾಹೀರಾತುಗಳನ್ನು ಸಾರಿಗೆ ಇಲಾಖೆಯ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗಳ ಮೇಲೆ ಅಂಟಿಸಿದ್ದರ ವಿರುದ್ಧ ಸಮರ ಸಾರಿದ್ದಾರೆ. ಇನ್ನು ತಂಬಾಕು ಜಾಹಿರಾತುಗಳನ್ನು ಕನ್ನಡಿಗರು ಕಿತ್ತೆಸೆಯುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಆರಂಭವಾದ ಈ ಕಿಚ್ಚು ಇದೀಗಾ ಬೆಂಗಳೂರಿಗೂ ವ್ಯಾಪಿಸಿದೆ ಎಂದು ವರದಿಯಲ್ಲಿ ವಿಜಯಪಥ ವಿವರಿಸಿತ್ತು.

ಅಲ್ಲದೆ ಮೆಜೆಸ್ಟಿಕ್, ಕೆ.ಆರ್.ಪುರಂ ಬಸ್ ನಿಲ್ದಾಣಗಳಲ್ಲಿ ಹತ್ತಾರು ಮಂದಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬಸ್‌ನಲ್ಲಿದ್ದ ತಂಬಾಕು ಉತ್ಪನ್ನಗಳ ಜಾಹಿರಾತುಗಳನ್ನು ಹರಿದು ಹಾಕಿದ್ದಾರೆ. ಅಲ್ಲದೆ ವಿಮಲ್, ಆರ್‌ಎಂಡಿ ಸೇರಿ ತಂಬಾಕು ಉತ್ಪನ್ನಗಳ ಜಾಹೀರಾತು ಪೋಸ್ಟರ್‌ಗಳನ್ನು ಸಾರಿಗೆ ಬಸ್‌ಗಳ ಮೇಲೆ ಅಂಟಿಸಿರೋದಕ್ಕೂ ಸಂಘಟನೆಗಳು ಕೂಡ ವಿರೋಧಿಸಿ ಪೋಸ್ಟರ್ ತೆರವು ಮಾಡಲು ಮುಂದಾಗಿದ್ದಾರೆ.

ಇನ್ನು ರೂಪೇಶ್ ರಾಜಣ್ಣ ನೇತೃತ್ವದ ಯುವ ಕರ್ನಾಟಕ ತಂಡದ ಕಾರ್ಯಕರ್ತರು ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ನುಗ್ಗಿ ಪೋಸ್ಟರ್, ಸ್ಟಿಕ್ಕರ್‌ಗಳನ್ನು ತೆರವು ಮಾಡಿದರು. ಈ ವೇಳೆ ಸಾರ್ವಜನಿಕರು ಕೂಡ ಕನ್ನಡ ಪರ ಹೋರಾಟಗಾರರನ್ನು ಬೆಂಬಲಿಸಿದರು. ಅಲ್ಲದೆ ಕೂಡಲೇ ಎಲ್ಲ ಬಸ್‌ಗಳ ಮೇಲೆ ಅಂಟಿಸಿರೋ ಪೋಸ್ಟರ್‌ಗಳನ್ನು ತೆರವು ಮಾಡಬೇಕು. ಇಲ್ಲದಿದ್ದರೆ ಕಂಡ ಕಂಡಲ್ಲಿ ಬಸ್‌ಗಳನ್ನು ನಿಲ್ಲಿಸಿ ಜಾಹೀರಾತುಗಳಿಗೆ ಮಸಿ ಬಳಿಯುತ್ತೇವೆ ಅಂತ ಎಚ್ಚರಿಕೆ ನೀಡಿದರು.

ಜಾಹೀರಾತು ಪೋಸ್ಟರ್‌ಗಳನ್ನು ಕಿತ್ತೆಸೆಯುತ್ತಿರುವ ಬಗ್ಗೆ ಅಂದು ಅಸಮಾಧಾನ ವ್ಯಕ್ತಪಡಿಸಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರತಿಕ್ರಿಯಿಸಿ, ಒಂದು ವರ್ಷಕ್ಕೆ ಬಿಎಂಟಿಸಿ ಬಸ್‌ಗಳಿಗೆ ಅಳವಡಿಸಿರುವ ಜಾಹೀರಾತುಗಳಿಂದಲೇ 60 ಕೋಟಿ ರೂಪಾಯಿ ಆದಾಯ ನಿಗಮಕ್ಕೆ ಬರುತ್ತದೆ. ಕೇಂದ್ರ ಸರ್ಕಾರವೇ ತಂಬಾಕು ನಿಷೇಧ ಮಾಡಲಿ ಅಂತ ಹೇಳಿಕೆ ನೀಡಿದ್ದರು.

ಸಚಿವರ ಈ ಹೇಳಿಕೆಗೆ ಕೆಂಡಮಂಡಲರಾಗಿದ್ದ ಕನ್ನಡ ಸಂಘಟನೆಯ ಕಾರ್ಯಕರ್ತರು ಆದಾಯ ಆಸೆ ಬಿಟ್ಟು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿ. ಹೀಗೆ ಮೊಂಡುತನ ಪ್ರದರ್ಶನ ಮಾಡೋದು ಸರಿಯಲ್ಲ ಅಂತ ಎಚ್ಚರಿಸಿದ್ದರು. ಈ ನಡುವೆ ಒಂದೇ ದಿನದಲ್ಲಿ ಗುಟ್ಕಾ ಜಾಹೀರಾತುಗಳ ವಿರುದ್ಧ ಎದ್ದಿದ್ದ ಕಿಚ್ಚನ್ನು ನಂದಿಸುವ ಕೆಲಸವನ್ನು ಸಾರಿಗೆ ಸಚಿವರು ಮಾಡಿರುವುದು ಇದು ಉತ್ತಮ ಕೆಲಸ ಎಂದು ಕನ್ನಡಪರ ಸಂಘಟನೆಗಳು ಸ್ವಾಗತಿಸಿವೆ.

Megha
the authorMegha

Leave a Reply

error: Content is protected !!