ಬೆಂಗಳೂರು: ತುಮಕೂರು ಬಸ್ ನಿಲ್ದಾಣದಲ್ಲಿ ಇದೇ 15ರಂದು ಆಗಿರುವ ಅಪಘಾತದಲ್ಲಿ ಚಾಲಕ- ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗ ಜೈಲಿನಲ್ಲಿದ್ದಾರೆ. ಹೀಗಾಗಿ ಇವರೆ ಬೆಲ್ ಕೊಡಿಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅನ್ಬುಕುಮಾರ್ ಅವರಿಗೆ CITU ಫೆಡರೇಷನ್ ಒತ್ತಾಯಿಸಿ ಪತ್ರ ಬರೆದಿದೆ.
ಪತ್ರದ ವಿವರ: ತುಮಕೂರು ಜಿಲ್ಲಾ ಕೇಂದ್ರವಾಗಿದ್ದು ಈಗಿರುವ ಬಸ್ ನಿಲ್ದಾಣವು ಜನ ಸಂಖ್ಯೆಗೆ ಅನುಗುಣವಾಗಿರದೆ ಅತ್ಯಂತ ಕಿರಿದಾಗಿದೆ. ಶಕ್ತಿ ಯೋಜನೆ ಜಾರಿ ನಂತರದಲ್ಲಿ ಮಿತಿ ಮೀರಿ ಪ್ರಯಾಣಿಕರಿಂದ ತುಂಬಿರುತ್ತದೆ. ಇಂತಹ ವೇಳೆಯಲ್ಲಿ ಹೆಚ್ಚು ಸಂಚಾರಿ ನಿಯಂತ್ರಕರನ್ನು ನಿಯೋಜಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು. ಅದು ವಿಭಾಗೀಯ ಆಡಳಿತದ ಪ್ರಮುಖ ಜವಾಬ್ದಾರಿಯಾಗಿದೆ.
ಈ ನಡುವೆ 15:09:2023 ರಂದು ನಡೆದಿರುವ ದುರ್ಘಟನೆಗೆ ಸದರಿ ವೈಪಲ್ಯವು ಸಹ ಕಾರಣವಾಗಿದೆ. ಅದನ್ನು ಮೃತರ ದೂರುದಾರರು ನೀಡಿರುವ ದೂರಿನಲ್ಲಿಯೂ ದಾಖಲಾಗಿದೆ. ಇಬ್ಬರು ಹಿರಿಯ ಜೀವಗಳು ಬಲಿಯಾಗಿದ್ದು ಅತ್ಯಂತ ದುಃಖದ ಸಂಗತಿ. ಈ ದುರ್ಘಟನೆ ಪೂರ್ವಯೋಜಿತ ಅಥವಾ ಉದೇಶಪೂರ್ವಕವಾಗಿ ನಡೆದಿರುವುದಿಲ್ಲ.
ಆದರೂ ಪೊಲೀಸ್ ನವರು 304 ಸೆಕ್ಷನ್ ವಿಧಿಸಲು ಪ್ರಾವಿಷನ್ ಇಲ್ಲದಿದ್ದರು ಅದನ್ನು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಚಾಲಕ ಗೋವಿಂದರಾಜು, ನಿರ್ವಾಹಕ ಶಂಕರಯ್ಯ ಈ ಇಬ್ಬರನ್ನು ಬಂಧಿಸಿ ನ್ಯಾಯಾಂಗದ ಬಂಧನಕ್ಕೆ ಒಪ್ಪಿಸಿದ್ದಾರೆ.
ಈಗಾಗಲೇ 8 ದಿವಸಗಳು ಕಳೆದರೂ ಸಹ ನ್ಯಾಯಾಲಯ ಬೇಲ್ ನೀಡಿರುವುದಿಲ್ಲ. ಈ ವಿಳಂಬ ಸಾರಿಗೆ ಕಾರ್ಮಿಕರಲ್ಲಿ ಅಸಮಾಧಾನ ಉಂಟುಮಾಡಿದೆ. ಪೊಲೀಸ್ ನವರು ಪ್ರಾವಿಷನ್ ಮೀರಿ 304 ಸೆಕ್ಷನ್ ವಿಧಿಸಿರುವುದನ್ನು CITU ಫೆಡರೇಷನ್ ತೀವ್ರವಾಗಿ ವಿರೋಧಿಸುತ್ತದೆ.
ಇದನ್ನೂ ಓದಿ: KSRTC: ಆಕಸ್ಮಿಕ ಅಪಘಾತವಾದಾಗ ಚಾಲಕರ ಪರ ಕಾನೂನು ಹೋರಾಟ ಮಾಡದ ನಿಗಮಗಳು- ಕೈಕಟ್ಟಿ ಕುಳಿತ ಸಂಘಟನೆಗಳು..!
ತಾವುಗಳು ಈ ಪ್ರಕರಣದಲ್ಲಿ ಕೂಡಲೇ ಬೇಲ್ ಮಾಡಿಸಲು ಹಾಗೂ ಪೊಲೀಸ್ ನವರು ದಾಖಲಿಸಿರುವ 304 ಸೆಕ್ಷನ್ ಅನ್ನು ಹೈಕೋರ್ಟ್ ನಲ್ಲಿ ರದ್ದುಪಡಿಸಿ 304 A ಯಾಗಿ ಪರಿವರ್ತಿಸಿ ಚಾಲಕ- ನಿರ್ವಾಹಕರಿಗೆ ರಕ್ಷಣೆ ಕೊಡಿಸುವಂತೆ ಮುಖ್ಯ ಕಾನೂನು ಅಧಿಕಾರಿಯವರಿಗೆ ನಿರ್ದೇಶನ ನೀಡಬೇಕೆಂದು ವಿನಂತಿಸುತ್ತೇವೆ.
ವಂದನೆಗಳೊಂದಿಗೆ,
ಎಚ್.ಡಿ. ರೇವಪ್ಪ, ಅಧ್ಯಕ್ಷರು, ಡಾ. ಕೆ. ಪ್ರಕಾಶ್, ಉಪಾಧ್ಯಕ್ಷರು, ಎಚ್.ಎಸ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ,ಕರಾರಸಾ ನಿಗಮಗಳ ನೌಕರರ ಫೆಡರೇಷನ್ (CITU)
ವಿಜಯಪಥ ಕಳಕಳಿ: ಈ ಸಂಘಟನೆಯ ಪ್ರಮುಖರು ಚಾಲನಾ ಸಿಬ್ಬಂದಿಯ ಪರ ನಿಂತಿರುವಂತೆ ಉಳಿಸಿದ ಸಂಘಟನೆಗಳು ತಮ್ಮ ತಮ್ಮ ಸಂಘಟನೆಯ ನೆಲೆಗಟ್ಟಿನಲ್ಲೇ ನಿಂತುಕೊಂಡರೆ ಚಾಲನಾ ಸಿಬ್ಬಂದಿಗೆ ಆಗುತ್ತಿರುವ ಇಂಥ ಅನ್ಯಾಯವನ್ನು ಸರಿಪಡಿಸುವುದಕ್ಕೆ ತಿಂಗಳುಗಳು ಬೇಕಾಗುವುದಿಲ್ಲ ಕೇವಲ ಒಂದೇ ಒಂದು ವಾರದಲ್ಲಿ ಬಗೆಹರಿಸಬಹುದಾಗಿದೆ.
ಹೀಗಾಗಿ ಇನ್ನಾದರೂ ಒಟ್ಟಿಗೆ ಸೇರದಿದ್ದರೂ ವೈಯಕ್ತಿಕವಾಗಿ ಹೀಗೆ ಸಂಸ್ಥೆಯ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂಬುವುದು ವಿಜಯಪಥ ಕಳಕಳಿ ವ್ಯಕ್ತಪಡಿಸುತ್ತಿದೆ.