NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಎಂಡಿ ಭೇಟಿ ಮಾಡಿದ ಒಕ್ಕೂಟದ ಪದಾಧಿಕಾರಿಗಳು: ನೌಕರರ ಬೇಡಿಕೆ ಈಡೇರಿಕೆ, ಸಮಸ್ಯೆ ನಿವಾರಣೆ ಬಗ್ಗೆ ಸುದೀರ್ಘ ಚರ್ಚೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ ಪಾಷ ಅವರನ್ನು ಭೇಟಿ ಮಾಡಿದ ನೌಕರರ ಒಕ್ಕೂಟದ ಪದಾಧಿಕಾರಿಗಳು ಇಂದು ಅವರ ಕಚೇರಿಯಲ್ಲಿ ಭೇಟಿಯಾಗಿ ನೌಕರರ ಕುಂದುಕೊರತೆ ಬಗ್ಗೆ ವಿವರವಾಗಿ ಚರ್ಚಿಸಿದರು.

ಮಂಗಳವಾರ ಭೇಟಿಯಾದ ನೌಕರರ ಕೂಟದವರ ಜತೆ ನಡೆಸಿದ ಕುಂದುಕೊರತೆ ಸಭೆಯಲ್ಲಿ ಎಲ್ಲ ವರ್ಗದ ಅಧಿಕಾರಿಗಳು/ ನೌಕರರ ಸಮಸ್ಯೆಗಳ ಬಗ್ಗೆ ಸಂಕ್ಷಿಪ್ತವಾಗಿ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿ ಎಂಡಿ, ಡಿಪಿ ಅವರು ಆಲಿಸಿದ್ದು, ಆದಷ್ಟು ಮಟ್ಟಿಗೆ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಆಶ್ವಾಸನೆ ನೀಡಿದ ಎಂಡಿ ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗುತ್ತದೆ ಎಂಬ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮನವಿ ಪತ್ರ ಸಲ್ಲಿಕೆ: ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಮತ್ತು ಕಾರ್ಯಸ್ಥಳಗಳಲ್ಲಿ ನೌಕರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಇನ್ನು ಆ.4ರಂದು ಮುಖ್ಯ ಮಂತ್ರಿಗಳ ಸಭೆಯಲ್ಲಿ ನಾವು ಅವರ ಬಳಿ ಹಲವು ಬೇಡಿಕೆಗಳನ್ನು ಮಂಡಿಸಿದ್ದು, ಅದಕ್ಕೆ ಅವರೂ ಸಹ ನಮ್ಮ ಬೇಡಿಕೆಗಳ ಈಡೇರಿಕೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದರೆ ಈವರೆಗೂ ಯಾವುದೇ ಬೇಡಿಕೆ ಈಡೇರದೆ ಇರುವುದು ನೌಕರರಿಗೆ ಆಸಮಾಧಾನ ಮತ್ತು ಗೊಂದಲ ಉಂಟಾಗಿದೆ. ಆದ್ದರಿಂದ ಆದಷ್ಟು ಶೀಘ್ರವಾಗಿ ಮುಖ್ಯ ಮಂತ್ರಿಗಳ ಸಭೆ ಆಯೋಜಿಸಿ ಈ ಮುಖ್ಯ ಬೇಡಿಕೆಗಳ ಈಡೇರಿಕೆಗೆ ಕ್ರಮ ವಹಿಸಬೇಕು.

ಇನ್ನು ಉಳಿದ ಸಮಸ್ಯೆಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನಿವಾರಿಸಬಹುದಾಗಿರುವುದರಿಂದ ಇಂತಹ ಸಮಸ್ಯೆಗಳ ನಿವಾರಣೆಗೆ ತಾವು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಬೇಡಿಕೆಗಳು: 1) ಸರ್ಕಾರ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಂತೆ ಸರಿಸಮಾನ ವೇತನ (7 ನೇ ವೇತನ ಆಯೋಗದ ಮಾದರಿಯಲ್ಲಿ) 01/01/2024 ರಿಂದ ಜಾರಿಗೆ ಬರುವಂತೆ ಕೂಡಲೇ ಘೋಷಣೆ ಮಾಡಬೇಕು.

2) 01/01/2020 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿದ್ದು, ಈ ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿಯನ್ನು ನೀಡುವುದು. ಈಗಾಗಲೆ ಮುಖ್ಯ ಮಂತ್ರಿಗಳು ಶ್ರೀನಿವಾಸ್ ಮೂರ್ತಿ ಅವರ ಶಿಫಾರಸಿನಂತೆ 14 ತಿಂಗಳ ಹಿಂಬಾಕಿ ನೀಡುವ ಬಗ್ಗೆ ತಿಳಿಸಿದ್ದು. ಬಾಕಿ 24 ತಿಂಗಳ ಹಿಂಬಾಕಿಯನ್ನು ಸೇರಿಸಿ 38
ತಿಂಗಳ ವೇತನದ ಹಿಂಬಾಕಿಯನ್ನು ನೀಡುವುದು. (ನಿವೃತ್ತ ನೌಕರರಿಗೆ ಮೊದಲ ಅದ್ಯತೆಯಲ್ಲಿ ಅವರ ಹಿಂಬಾಕಿ ಮತ್ತು ಇತರೆ ಸೇವಾ ಆರ್ಥಿಕ ಸೌಲಭ್ಯಗಳನ್ನು ನೀಡುವುದು).

3) ಸಾರಿಗೆ ಸಂಸ್ಥೆಗಳಲ್ಲಿ ಸಂಘಗಳ ಮಾನ್ಯತೆಗಾಗಿ, ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ಈ ಕೂಡಲೆ ನಡೆಸುವುದು. 4) ಸರ್ಕಾರದ ಆದೇಶ ಸಂಖ್ಯೆ: ಟಿಡಿ 77 ಟಿಸಿಎಸ್ 2025 ರಂತೆ ಸಾರಿಗೆ ಸಂಸ್ಥೆಗಳಲ್ಲಿ ಅನುಕಂಪದ ಅಧಾರದಲ್ಲಿ ಗ್ರೂಫ್ ಡಿ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಬಾರದೆಂಬ ಆದೇಶವನ್ನು ಹಿಂಪಡೆಯುವುದು.

5) ಕೇಂದ್ರ ಕಚೇರಿಯಲ್ಲಿ ಕೆ.ಎಸ್.ಆರ್.ಟಿ.ಸಿ ನೌಕರರ ಕೂಟದ ಪದಾಧಿಕಾರಿಗಳಿಗೆ ನೌಕರರ ಕುಂದುಕೊರತೆಗಳು ಮತ್ತು ಸಮಸ್ಯೆಗಳ ನಿವಾರಣೆಗೆ ಚರ್ಚೆ ಮಾಡಲು ಸಭೆ ಮಾಡುವಂತೆ ವಿಭಾಗ ಮತ್ತು ಘಟಕವಾರು ನೌಕರರ ಕುಂದುಕೊರತೆಗಳು ಮತ್ತು ಸಮಸ್ಯೆಗಳ ನಿವಾರಣೆಗೆ ಸಭೆ ಆಯೋಜಿಸಲು ಆಧಿಕಾರಿಗಳಿಗೆ ನಿರ್ದೇಶನ ನೀಡುವುದು.

6) ಕೋವಿಡ್ ಕಾರಣದಿಂದ ಅನೇಕ ಘಟಕಗಳಲ್ಲಿ ಮಾರ್ಗಗಳ ಓಟಿ ಕಡಿತ ಮಾಡಿದ್ದು, ಪ್ರಸ್ತುತವು ಸಹ ಹಲವು ವಿಭಾಗಗಳಲ್ಲಿ ಓಟಿ ನೀಡದೆ ಯಥಾಸ್ಥಿತಿ ಮುಂದುವರಿಸುತ್ತಿರುವುದನ್ನು ರದ್ದು ಮಾಡಿ. ಯಾವುದೇ ತಾರತಮ್ಯವಿಲ್ಲದೆ ಮೊದಲಿನ ರೀತಿಯಲ್ಲಿ ಓಟಿ ನೀಡುವುದು.

7) ಈ ಹಿಂದೆ ಕಿಯೋಸ್ಕೋ ಯಂತ್ರದಲ್ಲಿ ಇದ್ದಂತೆ ಆಲ್ಪಾವಧಿ, ಧೀರ್ಘಾವಧಿ ತುರ್ತು ಹಾಗೂ ನಿವೃತ್ತಿ ರಜೆ ಪಡೆಯುವ ವ್ಯವಸ್ಥೆಯನ್ನು ಎಚ್.ಆರ್.ಎಂ.ಎಸ್ ನಲ್ಲಿ ಆಳವಡಿಸುವುದು ಹಾಗೂ ಒ.ಎಂ.ಎಸ್ ಪದ್ಧತಿಯಲ್ಲಿ ಇದ್ದಂತೆ ನೌಕರರು ದೂರು ಸಲ್ಲಿಸುವ ಅವಕಾಶ ಕಲ್ಪಿಸುವುದು. ಮತ್ತು ಎಚ್.ಆರ್.ಎಂ.ಎಸ್ ನಲ್ಲಿ ಘಟಕಗಳಲ್ಲಿ ಯಾವುದೇ ನೌಕರರು ರಜೆ ಪಡೆಯಲು ಸಾಧ್ಯವಾಗದ ರೀತಿಯಲ್ಲಿ ಬ್ಲಾಕ್ ಮಾಡುತ್ತಿದ್ದು. ಈ ಬಗ್ಗೆ ಘಟಕಗಳ ಆಧಿಕಾರಿಗಳನ್ನು ವಿಚಾರಿಸಿದಾಗ ಕೇಂದ್ರ ಕಚೇರಿಯಿಂದ ಮಾಡಿದ್ದಾರೆ ಎಂಬ ಉತ್ತರ ನೀಡುತ್ತಿದ್ದಾರೆ. ಈ ಬಗ್ಗೆ ನೌಕರರಿಗೆ ಸೂಕ್ತ ರೀತಿಯಲ್ಲಿ ರಜೆ ನೀಡಲು ಕ್ರಮ ವಹಿಸುವುದು.

8) ನಿವೃತ್ತಿ ನಂತರ ನಮ್ಮ ಸಾರಿಗೆ ಸಿಬ್ಬಂದಿಗಳು 500 ರೂಪಾಯಿಗಳನ್ನು ನೀಡಿ ವಾರ್ಷಿಕ ಪಾಸುಗಳನ್ನು ಪಡೆಯುವ ಸೌಲಭ್ಯ ನೀಡಿದ್ದು, 500 ರೂಪಾಯಿಗಳನ್ನು ಪಡೆದು ಪಾಸ್ ನೀಡುವ ಪದ್ಧತಿಯನು ಕೈ ಬೀಡಬೇಕೆಂದು ಈಗಾಗಲೇ ನಾವು ಸಾರಿಗೆ ಸಚಿವರ ಗಮನಕ್ಕೆ ತಂದಿದ್ದು. ಅವರು ಸಹ ಈ ರೀತಿ ಹಣ ಪಡೆಯುವ ವ್ಯವಸ್ಥೆಯನ್ನು ರದ್ದು ಪಡಿಸುವ ಭರವಸೆ ನೀಡಿದ್ದಾರೆ. ಕೂಡಲೇ ನಿವೃತ್ತಿ ನೌಕರರಿಂದ ಹಣ ಪಡೆಯುವುದನ್ನು ಕೈ ಬೀಡುವುದು.

9) ಬಸ್ ನಿಲ್ದಾಣಗಳಲ್ಲಿ ರಾತ್ರಿ ತಂಗುವ ಸಿಬ್ಬಂದಿಗಳಿಗೆ ವಿಶ್ರಾಂತಿ ಪಡೆಯಲು ವಿಶ್ರಾಂತಿ ಕೊಠಡಿಗಳನ್ನು ನಿರ್ಮಾಣ ಮಾಡುವುದು ಹಾಗೂ ಬಸ್ಸು ನಿಲ್ದಾಣ ಹೊರತು ಪಡಿಸಿ ಬೇರೆ ಕಡೆ ರಾತ್ರಿ ತಂಗುವ ಸಿಬ್ಬಂದಿಗಳಿಗೆ ಸ್ಥಳೀಯವಾಗಿ ವಿಶ್ರಾಂತಿ ಕೊಠಡಿಗಳನ್ನು ನೀಡುವಂತೆ ಕ್ರಮ ವಹಿಸುವುದು. ( ಶಾಲಾ ಕೊಠಡಿಗಳು, ಪಂಚಾಯಿತಿ ಕಟ್ಟಡಗಳು ಇತರೆ).

10) ಹಲವು ವಿಭಾಗಗಳಲ್ಲಿ ಸಾಕಷ್ಟು ಎ.ಬಿ ಶೆಡ್ಯೂಲ್ ಇಲ್ಲದ ಕಾರಣ ನಿವೃತ್ತಿ ಅಂಚಿನಲ್ಲಿರುವ ನೌಕರರು ಸಹ ಜನರಲ್ ಅಥವಾ ಬಾರ್ ಶೆಡ್ಯೂಲ್ ಡ್ಯೂಟಿ ಮಾಡಬೇಕಾದ ಅನಿವಾರ್ಯತೆ ಇದ್ದು, ಇದರಿಂದ ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಒಂದು ಘಟಕದಲ್ಲಿ ಕನಿಷ್ಠ ಶೇಕಡ 25 ರಷ್ಟು ಎ.ಬಿ ಶೆಡ್ಯೂಲ್‌ಗಳನ್ನು ಕಾರ್ಯಾಚರಣೆ ಮಾಡುವುದು.

11) ಕೆ.ಎಸ್.ಆರ್.ಟಿ.ಸಿ ನಿಗಮದಲ್ಲಿ ಹಲವು ವಿಭಾಗಗಳಲ್ಲಿ ಸಾಕಷ್ಟು ಮೊದಲ ಹಾಗೂ ಎರಡನೇ ಪಾಳಿ ಕರ್ತವ್ಯಗಳು ಇಲ್ಲದ ಕಾರಣ ಮಹಿಳಾ ಸಿಬ್ಬಂದಿಗಳು ಅನೇಕ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದು. ಎಲ್ಲ ಘಟಕಗಳಲ್ಲಿ ಮಹಿಳಾ ಹಾಗೂ ಹಿರಿಯ ಚಾಲಕರಿಗಾಗಿ ಮೊದಲ ಹಾಗೂ ಎರಡನೇ ಪಾಳಿ ಕರ್ತವ್ಯಗಳನ್ನು ಚಾಲನೆ ಮಾಡುವುದು.

12) ಅಂತ‌ ನಿಗಮ ವರ್ಗಾವಣೆ ಅಧಿಸೂಚನೆ ಕೂಡಲೇ ಹೊರಡಿಸುವುದು. 13) ಸುತ್ತೋಲೆ ಸಂಖ್ಯೆ: 1192 ರ ಪ್ರಕಾರ ನಿಗದಿ ಪಡಿಸಿದ ಕಾಲಾವಧಿಯಲ್ಲಿ ಡ್ಯೂಟಿ ರೋಟವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಕ್ತ ಕ್ರಮ ವಹಿಸುವುದು ಹಾಗೂ ಆರ್.ಎಂ.ಸಿ ಪ್ರಕರಣ ದಾಖಲಾದರೆ ಆವರಿಗೆ ಮಾರ್ಗ ಬದಲಾವಣೆ ಮಾಡುವುದು ಮತ್ತು ಒಂದು ವರ್ಷ ಡ್ಯೂಟಿ ರೋಟದಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ. ಈ ನಿಯಮವನ್ನು ಕೈ ಬೀಡುವುದು.

14) ಸಂಸ್ಥೆಯಲ್ಲಿ ನಿವೃತ್ತಿ ಆದ ಅಧಿಕಾರಿಗಳಿಗೆ ವಿಚಾರಣಾಧಿಕಾರಿಯಾಗಿ ನೇಮಿಸಿಕೊಳ್ಳುವ ನಿಯಮವಿದ್ದು. ಅದರಂತೆ ನಿವೃತ್ತಿ ನೌಕರರಿಗೆ ಕೂಡ ವಿಚಾರಣಾ ಸಹದ್ಯೋಗಿಯಾಗಿ ನೆಮಿಸಿಕೊಳ್ಳಲು ಅನುಮತಿ ನೀಡುವುದು. 15) ಹೊಸದುರ್ಗ ಮತ್ತು ಹೊಳಲ್ಕೆರೆ ಬಸ್ ನಿಲ್ದಾಣಗಳಿಗೆ ಸಂಚಾರ ನಿಯಂತ್ರಣಾಧಿಕಾರಿಗಳನ್ನು ನೇಮಕ ಮಾಡುವುದು.

16) ಚಾಮರಾಜನಗರ ವಿಭಾಗವು ವರ್ಷ ಪೂರ್ತಿ ಜಾತ್ರೆ ವಿಶೇಷಗಳಿಂದ ಅಲ್ಲಿನ ಸಿಬ್ಬಂದಿಗಳಿಗೆ ಅತೀ ಹೆಚ್ಚಿನ ಕರ್ತವ್ಯ ಒತ್ತಡ ಇದ್ದು. ಆ ವಿಭಾಗದ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಸೌಜನ್ಯತೆಯಿಂದ ವರ್ತಿಸುವುದು ಹಾಗೂ ಸಿಬ್ಬಂಧಿಗಳಿಗೆ ಕೆಲಸದ ಒತ್ತಡ ಕಡಿಮೆ ಮಾಡಲು ಕ್ರಮ ವಹಿಸುವುದು.

17) ಶಕ್ತಿ ಯೋಜನೆಯ ಮಹಿಳೆಯರು ಮಾಡುವ ತಪ್ಪುಗಳಿಗೆ ನಿರ್ವಾಹಕರು ಶಿಕ್ಷೆ ಅನುಭವಿಸುತ್ತಿದ್ದು, ಶಕ್ತಿ ಯೋಜನೆ ಪ್ರಕರಣಗಳನ್ನು ಮಾನವೀಯತೆ ನೆಲೆಯಲ್ಲಿ ಪರಿಗಣಿಸಿ ಶಿಕ್ಷೆಗಳನ್ನು ರದ್ದು ಮಾಡುವುದು ಮತ್ತು ಘಟಕ ಬದಲಾವಣೆ ಮಾಡಬಾರದೆಂದು ವಿನಂತಿ.

18) ಕೆ.ಎಸ್.ಆರ್.ಟಿ.ಸಿ ನಗದು ರಹಿತ ಆರೋಗ್ಯ ಯೋಜನೆ ಹಲವು ವಿಭಾಗಗಳಲ್ಲಿ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ನೌಕರರಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದು. ಇದರಿಂದ ನೌಕರರು ಮತ್ತು ಅವರ ಕುಟುಂಬ ಸದಸ್ಯರು ಚಿಕಿತ್ಸೆಗಾಗಿ ಹಲವಾರು ತೊಂದರೆಗಳನ್ನು ಅನುಭವಿಸುತ್ತಿರುವುದನ್ನು ನಿವಾರಣೆ ಮಾಡುವುದು.

19) ವೈಜ್ಞಾನಿಕ ಮಾದರಿಯಲ್ಲಿ ನಮೂನೆ-4 ನ್ನು ತಿದ್ದುಪಡಿ ಮಾಡುವುದು. 20) ಕೆ.ಸಿ.ಎಸ್.ಆರ್ ಮಾದರಿಯಲ್ಲಿ ಸಮಾನ ತಪ್ಪಿಗೆ, ಸಮಾನ ಶಿಕ್ಷೆ ಪದ್ಧತಿ ಜಾರಿಗೆ ತರುವ ಮೂಲಕ ಸಂಸ್ಥೆಯಲ್ಲಿ ಭ್ರಷ್ಟಾಚಾರ ತಡೆಯುವುದು.

21) 2021 ಮತ್ತು 2025 ರ ಸಾರಿಗೆ ಮುಷ್ಕರದ ಸಮಯದಲ್ಲಿ ಆಗಿರುವ ಶಿಕ್ಷಾದೇಶಗಳನ್ನು ರದ್ದು ಪಡಿಸಿ ಸೌಹಾರ್ಧ ರೀತಿಯಲ್ಲಿ ಇತ್ಯರ್ಥ ಪಡಿಸುವುದು. 22) ಸಂಸ್ಥೆಯಲ್ಲಿ ತಾಂತ್ರಿಕ ಸಿಬ್ಬಂದಿಗಳ ಕೊರತೆಯಿಂದ, ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ತಾಂತ್ರಿಕ ಸಿಬ್ಬಂದಿಗಳಿಗೆ ಹೆಚ್ಚಿನ ಕೆಲಸದ ಒತ್ತಡ ಆಗುವುದರಿಂದ
ಕೂಡಲೇ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಮಾಡಲು ಕ್ರಮವಹಿಸುವುದು.

23) ತಾಂತ್ರಿಕ ಸಿಬ್ಬಂದಿಗಳು ಹಳೆಯ ಮಾದರಿ ಉಪಕರಣಗಳನ್ನು ಬಳಸಿ ಕರ್ತವ್ಯ ನಿರ್ವಹಿಸುವುದರಿಂದ ಸಮಯ ಹಾಗೂ ದೈಹಿಕ ಶ್ರಮ ವ್ಯರ್ಥ ಆಗುವುದರಿಂದ ಅವರಿಗೆ ಆಧುನಿಕ ಮಾದರಿಯ ಉಪಕರಣಗಳನ್ನು ನೀಡಲು ಕ್ರಮ ವಹಿಸುವುದು.

24) ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿಗಳ ಕೊರತೆಯಿಂದ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಭದ್ರತಾ ಸಿಬ್ಬಂದಿಗಳಿಗೆ ಹೆಚ್ಚಿನ ಕೆಲಸದ ಒತ್ತಡ ಆಗುವುದರಿಂದ ಕೂಡಲೇ ಭದ್ರತಾ ಸಿಬ್ಬಂದಿಗಳ ನೇಮಕಾತಿ ಮಾಡಲು ಕ್ರಮವಹಿಸುವುದು.

25) ಸಂಸ್ಥೆಯಲ್ಲಿ ಇರುವ ಎಲ್ಲ ವರ್ಗದ ಸಿಬ್ಬಂದಿಗಳಿಗೆ ಜೇಷ್ಠತೆ ಅನುಸಾರ ನೀಡಬೇಕಾದ ಬಡ್ತಿ ಪ್ರಕ್ರಿಯನ್ನು ಸೂಕ್ತ ಸಮಯದಲ್ಲಿ ನೀಡುವುದು. 26) ಸಂಸ್ಥೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಎಲ್ಲ ಮಾದರಿಯ ಬಸ್ಸುಗಳಿಗೆ ಸ್ವಯಂ ಚಾಲಿತ ಬಾಗಿಲುಗಳನ್ನು ಆಳವಡಿಸುವುದು.

27) ಸಂಸ್ಥೆಯಲ್ಲಿ ಒಂದು ಕಾರ್ಮಿಕ ಸಂಘಟನೆಗೆ ಮಾತ್ರ ಸಿಮೀತ ಪಡಿಸಿ ನೀಡುತ್ತಿರುವ ಸೌಲಭ್ಯಗಳನ್ನು, ಸಂಸ್ಥೆಯಲ್ಲಿ ಕಾರ್ಮಿಕ ಕಾಯ್ದೆ ಆಡಿಯಲ್ಲಿ ನೋಂದಣಿಯಾಗಿರುವ ಎಲ್ಲ ಕಾರ್ಮಿಕ ಸಂಘಟನೆಗಳಿಗೆ ಸೌಲಭ್ಯಗಳನ್ನು ಒದಗಿಸುವುದು.

28) ಸರ್ಕಾರದ ಸಚಿವ ಸಂಪುಟದಲ್ಲಿ ಸರ್ಕಾರಿ ಮಹಿಳಾ ಸಿಬ್ಬಂದಿಗಳಿಗೆ ವೇತನ
ಸಹಿತ ವಿಶೇಷ ಋತುಚಕ್ರ ರಜೆ ನೀಡಲು ಆನುಮೋದಿಸಿರುವಂತೆ, ನಮ್ಮ ನಿಗಮದ ಮಹಿಳಾ ಸಿಬ್ಬಂದಿಗಳಿಗೆ ಸದರಿ ವೇತನ ಸಹಿತ ವಿಶೇಷ ಋತುಚಕ್ರ ರಜೆ ನೀಡಲು ಕ್ರಮ ವಹಿಸಬೇಕು ಎಂಬುವುದು ಸೇರಿದಂತೆ ಒಟ್ಟು 28 ಬೇಡಿಕೆಗಳ ಈಡೇರಿಸಬೇಕು ಎಂದು ಮನವಿ ಮಾಡಿದರು.

Megha
the authorMegha

Leave a Reply

error: Content is protected !!