ಬೆಂಗಳೂರು: ಸರ್ಕಾರ ಮತ್ತು ಸಾರಿಗೆಯ ನಾಲ್ಕೂ ನಿಗಮಗಳ ಆಡಳಿತ ಮಂಡಳಿ ವಿರುದ್ಧ ಸಾರಿಗೆ ನೌಕರರು ಸದ್ದಿಲ್ಲದೆ ಮುಷ್ಕರ ನಡೆಸಲು ಸಿದ್ಧತೆ ಮಾಡುತ್ತಿದ್ದಾರೆಯೇ. ಹೌದು! ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸಲು ತೀರ್ಮಾನಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಸಾಥ್ ನೀಡದೆ ನಾವು ಯಾವುದೇ ಹೋರಾಟ ಮಾಡುವುದಿಲ್ಲ ಎಂದು ಪಟ್ಟುಹಿಡಿದು ಕುಳಿತಿದ್ದಾರೆ!
ಹೀಗಾಗಿ ಕೆಲ ಅಧಿಕಾರಿಗಳು ಹೋರಾಟಕ್ಕೆ ಕೂಡ ಸಾಥ್ ನೀಡುವುದಕ್ಕೆ ನಾವು ಸಿದ್ಧ ಎಂದು ಹೇಳುವುದಕ್ಕಾಗಿ ಪೂರ್ವಸಿದ್ಧತೆಯಲ್ಲಿ ತೊಡಗಿದ್ದು, ಡಿಪೋ ಮಟ್ಟದ ಅಧಿಕಾರಿಗಳ ಸಲಹೆಯನ್ನು ಡಿಸಿ ಮಟ್ಟದ ಅಧಿಕಾರಿಗಳು ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಡಿಪೋ ಮತ್ತು ವಿಭಾಗೀಯ ಹಾಗೂ ಕೇಂದ್ರ ಸ್ಥಾನದಲ್ಲಿರುವ ಕೆಲ ಅಧಿಕಾರಿಗಳು ತಮಗೆ ತುಂಬ ಹತ್ತಿರವಾಗಿರುವ ಅಧೀನ ಅಧಿಕಾರಿಗಳಿಂದ ಸಲಹೆ ಪಡೆಯುತ್ತಿದ್ದು, ಸಾರಿಗೆ ನೌಕರರು ವೇತನಕ್ಕಾಗಿ ಮುಷ್ಕರಕ್ಕೆ ಇಳಿದರೆ ಅವರಿಗೆ ನಾವು ಸಾಥ್ ನೀಡಬೇಕೆ ಇಲ್ಲ ಈ ಹಿಂದೆ ಇದ್ದಂತೆ ಸುಮ್ಮನಿದ್ದರೆ ಸಾಕೆ ಎಂಬ ಬಗ್ಗೆ ಚರ್ಚಿಸುತ್ತಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಸಿಕ್ಕಿದೆ.
ಕಾರಣವಿಷ್ಟೆ ನಾವು ಕಳೆದ 3-4 ದಶಕಗಳಿಂದ ಹೊರಗಿನಿಂದ ಬಂದ ಸಾರಿಗೆ ನೌಕರರಿಗೆ ಸಂಬಂಧವೇ ಇಲ್ಲದ ಸಂಘಟನೆಗಳ ಮುಖಂಡರನ್ನು ನಂಬಿಕೊಂಡು ಹೋರಾಟಕ್ಕೆ ಇಳಿಯದೆ ನಮ್ಮ ಕಾಲಮೇಲೆ ನಾವೇ ಕಲ್ಲಾಕಿಕೊಂಡು ನರುಳುವ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಹೀಗಾಗಿ ನಾವು ಈಗ ಈ ಸಂಘಟನೆಗಳನ್ನು ನಂಬಿ ಕುಳಿತುಕೊಂಡರೆ ಮುಂದೆ ನಮಗೆ ಉಳಿಗಾಲವಿಲ್ಲ.
ಇನ್ನು ಒಂದು ವೇಳೆ ಈ ಸಂಘಟನೆಗಳನ್ನು ನಂಬಿದರೆ ಪ್ರಸ್ತುತ ಸರ್ಕಾರಿ ನೌಕರರಿಗೂ ನಮಗೂ ಇರುವ ವೇತನ ವ್ಯತ್ಯಾಸವನ್ನು ಸರಿಪಡಿಸುವ ನಿಟ್ಟಿನಲ್ಲಿ ವೇತನ ಪರಿಷ್ಕರಣೆ ಮಾಡಿಸುತ್ತಾರೆ ಎಂಬ ನಂಬಿಕೆ ಈಗ ನಮ್ಮಲ್ಲಿ ಉಳಿದಿಲ್ಲ. ಹೀಗಾಗಿ ನಾವು ಕಚೇರಿಯಲ್ಲೇ ಕುಳಿತು ಮೌನವಾಗಿದ್ದರೆ 2028ರ ವೇಳೆಗೆ ನಮ್ಮ ಹುದ್ದೆಗಳೇ ಇರುವುದಿಲ್ಲ.
ಹುದ್ದೆಗಳೆ ಇಲ್ಲದ ಮೇಲೆ ನಾವು ನಿಗಮದಲ್ಲಿ ಇರುತ್ತೇವೆ ಎಂಬುವುದಕ್ಕೆ ಗ್ಯಾರಂಟಿ ಏನು? ಹೀಗಾಗಿ ನಾವು ಸಾರಿಗೆ ನೌಕರರ ಪರ ಸಂಘಟನೆಗಳು ಎಂದು ಹೇಳಿಕೊಂಡು ಹೋರಾಟ ಮಾಡುತ್ತಿರುವ ಸಂಘಟನೆಗಳನ್ನು ನೆಚ್ಚಿಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಸೂಕ್ತವಲ್ಲ. ಆದ್ದರಿಂದ ನಾವು ಹೋರಾಟಕ್ಕೆ ಇಳಿಯಲೇ ಬೇಕು ಎಂಬ ಅಭಿಪ್ರಾಯವನ್ನು ಕೆಳಹಂತದ ಅಧಿಕಾರಿಗಳು ವ್ಯಕ್ತಪಡಿಸಿದ್ದಾರಂತೆ.
ಅಲ್ಲದೆ, ನಾವು ಈಗಾಗಲೇ ವೇತನ ಪರಿಷ್ಕರಣೆಗಾಗಿ ಬೀದಿಗಿಳಿಯುತ್ತಿದ್ದ ನೌಕರರನ್ನು ತುಂಬ ನೋಯಿಸಿದ್ದೇವೆ ಮತ್ತೆ ಆ ನೋವನ್ನು ಕೊಡುವುದು ಬೇಡ. ಹೀಗಾಗಿ ನಾವು ಯಾವ ರೀತಿಯಲ್ಲಿ ಹೋರಾಟ ಮಾಡಿದರೆ ಸರ್ಕಾರ ಮತ್ತು ಆಡಳಿತ ಮಂಡಳಿಯನ್ನು ಬಗ್ಗು ಬಡಿಯಲು ಸಾಧ್ಯ ಎಂಬ ನಿಟ್ಟಿನಲ್ಲೂ ಸಲಹೆಗಳನ್ನು ಪಡೆಯುತ್ತಿದ್ದಾರಂತೆ ಮೇಲಧಿಕಾರಿಗಳು.
ಇನ್ನು ಸಾರಿಗೆ ಅಧಿಕಾರಿಗಳು ವೇತನ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಇತರ ನಿಗಮಗಳ ಅಧಿಕಾರಿಗಳಿಗಳಂತೆ ನೌಕರರನ್ನು ಜೊತೆಯಲ್ಲಿ ಕರೆದುಕೊಂಡು ಮುನ್ನುಗಿದ್ದೆ ಆದರೆ ಕೆಲ ಸಂಘನಟನೆಗಳ ಮುಖಂಡರು ಅವರ ಬೆನ್ನಿಗೆ ನಿಂತು ಹೋರಾಟ ಮಾಡಲು ಸಿದ್ಧ ಎಂದು ಹೇಳುತ್ತಿದ್ದಾರೆ.
ಈ ನಿಟ್ಟಿನಲ್ಲಿ ಈ ಬಾರಿ ಅಧಿಕಾರಿಗಳು ವೇತನ ಪರಿಷ್ಕರಣೆ ಸಂಬಂಧ ಹೋರಾಟಕ್ಕೆ ಇಳಿಯಲೇ ಬೇಕು ಒಂದು ವೇಳೆ ಇಳಿಯದಿದ್ದರೆ ನಾವು ಕೂಡ ಯಾವುದೇ ಕಾರಣಕ್ಕೂ ಸಂಘಟನೆಗಳು ಕರೆ ನೀಡುವ ಮುಷ್ಕರ, ಪ್ರತಿಭಟನಾ ಧರಣಿಗಳಲ್ಲಿ ಭಾಗವಹಿಸುವುದಿಲ್ಲ. ನಾವು ಅವರಂತೆ ಡ್ಯೂಟಿ ಮಾಡುತ್ತೇವೆ. ಅವರಿಗೆ ಆದಂತೆ ನಮಗೂ ಆಗಲಿ ಬಿಡಿ ಎಂಬ ನಿರ್ಧಾಕ್ಕೆ ಈಗಾಗಲೇ ಬಹುತೇಕ ನೌಕರರು ಬಂದು ನಿಂತಿದ್ದಾರೆ.
ಹೀಗಾಗಿ 2021 ಏಪ್ರಿಲ್‌ನಲ್ಲಿ 15 ದಿನಗಳ ಕಾಲ ವೇತನಕ್ಕಾಗಿ ನಡೆದ ಮುಷ್ಕರದಂತೆ ಈ ಬಾರಿ ನೌಕರರೇ ಅಧಿಕಾರಿಗಳಿಲ್ಲದೆ ಬೀದಿಗಳಿಯುವುದಿಲ್ಲ. ಜತೆಗೆ ಜನವರಿ 1 ರಿಂದ ಜಾರಿಗೆ ಬರಬೇಕಿರುವ ವೇತನ ಪರಿಷ್ಕರಣೆ ಜತೆಗೆ 2020 ಜ.1ರಿಂದ ಜಾರಿಯಾಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ವೇತನ ಹಿಂಬಾಕಿ, ನಿವೃತ್ತಿ ನೌಕರರ ವೇತನ ಪರಿಷ್ಕರಣೆ ಬಗ್ಗೆ ಪ್ರಸ್ತಾಪ ಮಾಡದ ನಿಗಮಗಳ ಆಡಳಿತ ಮಂಡಳಿ ಬಗ್ಗೆ ಅಧಿಕಾರಿಗಳ ರೀತಿಯಲ್ಲೇ ನಾವು ನಡೆದುಕೊಳ್ಳುತ್ತೇವೆ ಎಂದು ನೌಕರರು ಹೇಳುತ್ತಿದ್ದಾರೆ.
ಬಹುತೇಕ ನೌಕರರ ಈ ನಿರ್ಧಾರದಿಂದ ಅಧಿಕಾರಿಗಳು ಬೆಚ್ಚಿದ್ದು, ಈ ಹಿಂದೆ ನಾವು ಅವರನ್ನು ಬಲಿಪಶುಮಾಡಿ ಆಟವಾಡುತ್ತಿದ್ದೆವು. ಆದರೆ ಇಂದು ಅವರು ನಮ್ಮಂತೆಯೇ ಹೋರಾಟ ಮಾಡದಿರಲು ನಿರ್ಧರಿಸುತ್ತಿದ್ದಾರೆ. ಹೀಗಾದರೆ ಮುಂದೆ ನಮ್ಮ ಪಾಡೇನು ಎಂಬ ಗೊಂದಲಕ್ಕೆ ಅಧಿಕಾರಿಗಳು ಸಿಲುಕಿ ಒದ್ದಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿ ಹೇಳುವುದಾದರೆ ಅಧಿಕಾರಿಗಳು ಈ ಬಾರಿ ವೇತನ ಪರಿಷ್ಕರಣೆ ಸಂಬಂಧ ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಯಾವೊಬ್ಬ ನೌಕರನು ಹೋರಾಟದ ಹಾದಿ ತುಳಿಯುವುದಿಲ್ಲ. ಹೀಗಾದರೆ ವೇತನ ಪರಿಷ್ಕರಣೆಯೂ ಸಮಯಕ್ಕೆ ಸರಿಯಾಗಿ ಆಗದೆ 2020ರ ವೇತನ ಪರಿಷ್ಕರಣೆಯಂತೆಯೇ 2024ರ ವೇತನ ಪರಿಷ್ಕರಣೆಯೂ ಡೋಲಾಯಮಯವಾಗಲಿದೆ.
ನೌಕರರು ಏನಾದರೂ ಸರಿಯೇ ಎಂದು ವೇತನ ಪರಿಷ್ಕರಣೆ ಸಂಬಂಧ ಬೀದಿಗಿಳಿದು ಹೋರಾಟ ಮಾಡಿ ಸರ್ಕಾರ ಮತ್ತು ಆಡಳಿತ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿ ವೇತನ ಪರಿಷ್ಕರಣೆ ಮಾಡಿಸಿಕೊಂಡು ಬರುತ್ತಿದ್ದರು. ಆ ಬಳಿಕ ಹಲವಾರು ನೌಕರರು ಪೊಲೀಸ್ ಪ್ರಕರಣ, ವಜಾ, ಅಮಾನತು ಮತ್ತು ವರ್ಗಾವಣೆಯಂತಹ ಶಿಕ್ಷೆ ಅನುಭವಿಸುತ್ತಿದ್ದರು. ಅದೆಲ್ಲ ನಡೆದರೂ ಈ ಅಧಿಕಾರಿಗಳು ಯಾವೊಂದು ಹೋರಾಟ ಮಾಡದೆ ಪರಿಷ್ಕರಣೆಗೊಂಡ ವೇತನ ಸೌಲಭ್ಯ ಪಡೆಯುತ್ತಿದ್ದರು.
ಈಗ ಇದೆಲ್ಲವನ್ನು ಅರಿತ ನೌಕರರು ನಾವೇಕೆ ಅಧಿಕಾರಿಗಳಿಗೆ ವೇತನ ಹೆಚ್ಚಿಸಿ ನಮ್ಮ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸಬೇಕು. ಜತೆಗೆ ಶಿಕ್ಷೆಯನ್ನು ಅನುಭವಿಸಬೇಕು. ಬರಿ ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಷ್ಟೇ ವೇತನ ಪರಿಷ್ಕರಣೆ ಆಗುತ್ತಿತ್ತೆ. ಇಲ್ಲ ಎಲ್ಲರಿಗೂ ಆಗುತ್ತಿತ್ತು. ಅದು ಗೊತ್ತಿದ್ದರೂ ನಮ್ಮನ್ನೇ ಬಲಿಹಾಕಿ ಜತೆಗೆ ನಮ್ಮ ಹೋರಾಟದಿಂದ ವೇತನ ಹೆಚ್ಚಿಸಿಕೊಂಡು ಸರ್ಕಾರ ಮತ್ತು ಆಡಳಿ ಮಂಡಳಿ ಪರವಾಗಿ ನಿಲ್ಲುವ ಅಧಿಕಾರಿಗಳಿಗಾಗಿ ನಾವು ಏಕೆ ಶಿಕ್ಷೆ ಅನುಭವಿಸಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಬಹುತೇಕ ನೌಕರರು.
ಹೀಗಾಗಿ ಯಾವ ಸಂಘಟನೆಗಳು ಎಷ್ಟೇ ಸಮಾವೇಶ ಮಾಡಿದರೂ ಕೂಡ ಈ ಬಾರಿ ಬಹುತೇಕ ನೌಕರರು ಯಾವುದೇ ಹೋರಾಟಕ್ಕೂ ಇಳಿಯದಿರಲು ತೀರ್ಮಾನಿಸಿದ್ದಾರೆ. ಅಲ್ಲದೆ ನಾವು ಇಳಿಯ ಬೇಕಾದರೆ ಮೊದಲು ಡಿಪೋ ಮತ್ತು ವಿಭಾಗೀಯ ಮಟ್ಟದ ಅಧಿಕಾರಿಗಳು ಮುಂದೆ ಬರಲಿ, ವಜಾ, ವರ್ಗಾವಣೆ, ಅಮಾನತು ಮತ್ತು ಪೊಲೀಸ್ ಪ್ರಕರಣವನ್ನು ನಿಮ್ಮ ವಿರುದ್ಧ ದಾಖಲಿಸುವುದಿಲ್ಲ ಬದಲಿಗೆ ನಾವು ನಿಮಗೆ ಸಾಥ್ ನೀಡುತ್ತೇವೆ ಎಂಬ ನಿರ್ಧಾರ ತೆಗೆದುಕೊಳ್ಳಲು ಆಯಾಯ ವಿಭಾಗೀಯ ಮಟ್ಟದಲ್ಲೇ ಅಧಿಕಾರಿಗಳು ನೌಕರರ ಸಭೆ ನಡೆಸಿ ತಿಳಿಸಲಿ. ಆಗ ನಾವು ಡಿಪೋಗಳ ಮುಂದೆಯೇ ಹೋರಾಟಕ್ಕೆ ಚಾಲನೆ ನೀಡುತ್ತೇವೆ. ಇದಕ್ಕೆ ಯಾವುದೇ ಸಂಘಟನೆಗಳ ಬೆಂಬಲವು ಬೇಡ ಅಧಿಕಾರಿಗಳು ನಮ್ಮ ಬೆನ್ನಹಿಂದೆ ನಿಂತರೆ ಸಾಕು ಎನ್ನುತ್ತಿದ್ದಾರೆ ನೌಕರರು.