ಮಂಡ್ಯ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ವಕೀಲ ದೇವರಾಜೇಗೌಡ ಅವರ ಜೀವಕ್ಕೆ ಪೊಲೀಸರ ಕಸ್ಟಡಿಯಲ್ಲಿರುವಾಗಲೇ ಅಪಾಯವಿದೆ ಎಂದು ಮಾಜಿ ಶಾಸಕ ಸುರೇಶಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಇಂದು ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ತಿಂಗಳುಗಳ ಕಾಲ ದೇವರಾಜೇಗೌಡ ಅವರನ್ನು ಪೊಲೀಸ್ ಕಸ್ಟಡಿಯಲ್ಲೇ ಇಡಲು ಸಂಚು ನಡೆದಿದೆ. ಈ ವೇಳೆ ಅವರ ಜೀವಕ್ಕೆ ದೊಡ್ಡ ಅಪಾಯವಿದೆ. ಇದು ನೂರಕ್ಕೆ ನೂರರಷ್ಟು ಸತ್ಯ ಎಂದು ಹೇಳಿದರು.
ಇನ್ನು ಪ್ರಕರಣದ ಖಳನಾಯಕರು, ಸಚಿವರು ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಪೆನ್ ಡ್ರೈವ್ ಪ್ರಕರಣದ ಮೂಲ ರೂವಾರಿಗಳಿಗೆ ಸರ್ಕಾರದಿಂದ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಕಿಡಿಕಾರಿದರು.
ಇನ್ನು ಪೆನ್‌ಡ್ರೈ ಬಿಟ್ಟವರಿಗೆ ಇದುವರೆಗೂ ನೋಟಿಸ್ ನೀಡದೆ, ನಿಜವಾದ ಆರೋಪಪಿಗಳನ್ನು ಬಂಧಿಸದೆ ಆಟ ಆಡುತ್ತಿದ್ದಾರೆ. ಇತ್ತ ದೇವರಾಜೇಗೌಡ ಅವರನ್ನು ಷಡ್ಯಂತ್ರ ಮಾಡಿ ಬಂಧನ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಸತ್ಯಾಸತ್ಯತೆ ಬೇಕಿಲ್ಲ. ಸಚಿವರ ಹೆಸರು ಹೇಳಿದ್ರೆ ಪರಿಗಣನೆ ಮಾಡಲ್ಲ. ಮೂಲ ಹುಡುಕಿ ತನಿಖೆಯನ್ನೂ ಮಾಡಲ್ಲ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯ ಸರ್ಕಾರಕ್ಕೆ ದೌರ್ಜನ್ಯಕ್ಕೆ ಒಳಗಾದವರ ಬಗ್ಗೆ ಕಿಂಚಿತ್ತು ಚಿಂತೆ ಇಲ್ಲ ಬದಲಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾತ್ರ ಇರಬೇಕು. ನಾವು ಅಧಿಕಾರದಲ್ಲಿ ಇರಬೇಕು ಎಂಬುದಷ್ಟೆ ಇಂದಿನ ರಾಜಕೀಯವಾಗಿರುವುದು ನಾಡಿನ ಜನತೆಗೆ ದುರಂತವಾಗಿದೆ. ಇದು ಹೀಗೆ ಮುಂದುವರಿದರೆ ಜನ ಸಾಮಾನ್ಯರ ಬದುಕು ಏನಾಗುವುದೋ? ಆ ದೇವರೇ ಕಾಪಾಡಬೇಕು ಎಂದು ಆತಂಕ ವ್ಯಕ್ತಿಪಡಿಸಿದ್ದಾರೆ.