
ಬೆಂಗಳೂರು: 2025ರಲ್ಲಿ ಬಿಬಿಎಂಪಿ ಮುಕ್ತ ನಗರವನ್ನಾಗಿ ಮಾಡಲು ನಾವೆಲ್ಲರೂ ಶ್ರಮವಹಿಸಿ ಕಾರ್ಯನಿರ್ವಹಿಸಬೇಕೆಂದು ಮುಖ್ಯ ಆರೋಗ್ಯಾಧಿಕಾರಿಯಾದ ಡಾ.ಸೈಯದ್ ಸಿರಾಜುದ್ದಿನ್ ಮದನಿ ಆರೋಗ್ಯ ಸಿಬ್ಬಂದಿಗಳಲ್ಲಿ ಮನವಿ ಮಾಡಿದ್ದಾರೆ.
ವಿಶ್ವ ಕ್ಷಯ ರೋಗ ದಿನಾಚರಣೆಯ ಅಂಗವಾಗಿ ಪಾಲಿಕೆಯ ಆರೋಗ್ಯ ವಿಭಾಗದ ವತಿಯಿಂದ ಪಾಲಿಕೆ ಕೇಂದ್ರ ಕಚೇರಿಯ ಆವರಣದಲ್ಲಿರುವ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು.
ಕ್ಷಯ ರೋಗ ನಿರ್ಮೂಲನೆ ಆರೋಗ್ಯ ಸಿಬ್ಬಂದಿಯಿಂದ ಮಾತ್ರ ಸಾಧ್ಯವಿಲ್ಲ. ನಾಗರಿಕರು ಇದಕ್ಕೆ ಕೈ ಜೋಡಿಸಿದರೆ ಮಾತ್ರ ನಾವು ತ್ವರಿತಗತಿಯಲ್ಲಿ ಕ್ಷಯ ರೋಗವನ್ನು ನಿರ್ಮೂಲನೆ ಮಾಡಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಾಗರಿಕರಿಗೆ ಕ್ಷಯ ರೋಗದ ಕುರಿತು ಹೆಚ್ಚು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಕ್ಷಯರೋಗ ಬಂದವರು ಔಷಧಗಳನ್ನು ಸರಿಯಾಗಿ ತೆಗೆದುಕೊಂಡರೆ ಮಾತ್ರ ನಿರ್ಮೂಲನೆ ಆಗಲು ಸಾಧ್ಯ. ಆದ್ದರಿಂದ ಕ್ಷಯ ರೋಗ ಬಂದವರು ಆರು ತಿಂಗಳ ಕಾಲ ಔಷಧಗಳನ್ನು ತಪ್ಪದೆ ಪಡೆದುಕೊಳ್ಳಬೇಕು. ಈ ಸಂಬಂಧ ನಾಗರಿಕರಲ್ಲಿ ಹೆಚ್ಚು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು.
ವಾರ್ಡ್ ಮುಕ್ತ ಕ್ಷಯ ರೋಗ: ಬಿಬಿಎಂಪಿ ವ್ಯಾಪ್ತಿಯಲ್ಲಿ ಕ್ಷಯ ರೋಗ ನಿರ್ಮೂಲನೆಯು ನಿರೀಕ್ಷೆಗೂ ಮೀರಿ ನಿಯಂತ್ರಣಕ್ಕೆ ಬಂದಿದ್ದು, ಅದರ ಮೇಲೆ ಮತ್ತಷ್ಟು ಪರಿಣಾಮಕಾರಿಯಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಾರ್ಡ್ ಮುಕ್ತ ಹಾಗೂ ಬಿಬಿಎಂಪಿ ಮುಕ್ತ ಕ್ಷಯರೋಗ ನಗರವನ್ನಾಗಿ ಮಾಡಲಾಗುವುದೆಂದು ಹೇಳಿದರು.
ಕ್ಷಯ ರೋಗ ನಿರ್ಮೂಲನೆಗೆ ಕ್ರಮ: ಭಾರತದ ರಾಷ್ಟ್ರೀಯ ಟಿಬಿ ನಿರ್ಮೂಲನ ಕಾರ್ಯಕ್ರಮ (NTEP)ದ ಮೂಲಕ ಬಿಬಿಎಂಪಿಯ 143 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 6 ಸಮುದಾಯ ಆರೋಗ್ಯ ಕೇಂದ್ರಗಳು, 26 ಹೆರಿಗೆ ಕೇಂದ್ರಗಳು, 230 ನಮ್ಮ ಕ್ಲಿನಿಕ್ ಗಳು ಮತ್ತು 10 ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ವಲಯದಲ್ಲಿಯೂ ಸೌಲಭ್ಯಗಳಿವೆ.
ಇನ್ನು ಹೆಚ್ಚುವರಿಯಾಗಿ, ಸಾರ್ವಜನಿಕ ವಲಯವು 147 ಸೂಕ್ಷ್ಮದರ್ಶಕ ಕೇಂದ್ರಗಳು, 10 CBNAAT ಕೇಂದ್ರಗಳು ಮತ್ತು ಕ್ಷಯ ಪರೀಕ್ಷೆಗಾಗಿ 12 TRUENAAT ಕೇಂದ್ರಗಳಿವೆ. ಈ ಸೇವೆಗಳು ಖಾಸಗಿ ವಲಯದಲ್ಲಿಯೂ ಲಭ್ಯವಿದೆ. 2023 ರಿಂದ, ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ(PMTBMBA) ಯೋಜನೆಯಡಿಯಲ್ಲಿ, 3,120 ಕ್ಷಯ ರೋಗಿಗಳು ನಿಕ್ಷಯ್ ಮಿತ್ರರು(ದಾನಿಗಳು) ವಿತರಿಸಿದ 11,598 ಪೌಷ್ಠಿಕಾಂಶ ಕಿಟ್‌ಗಳನ್ನು ಪಡೆದಿದ್ದಾರೆ.
100 ದಿನಗಳ ಕ್ಷಯರೋಗ ಅಭಿಯಾನ ವರದಿ:(7ನೇ ಡಿಸೆಂಬರ್ 2024 ರಿಂದ 18ನೇ ಮಾರ್ಚ್ 2025 ರವರೆಗಿನ ವರದಿ): • ಒಟ್ಟು ಗುರಿ ದುರ್ಬಲ ಜನಸಂಖ್ಯೆ 11,30,448 • ಒಟ್ಟು ಗುರಿ ದುರ್ಬಲ ಜನಸಂಖ್ಯೆಯನ್ನು ಪರೀಕ್ಷಿಸಲಾಗಿದೆ 13,13,902 (116%) • ಸೂಕ್ಷ್ಮದರ್ಶಕದ ಅಡಿಯಲ್ಲಿ ಪರೀಕ್ಷಿಸಲಾದ ಒಟ್ಟು ಸಂಖ್ಯೆ 18,400 (31%)
• NAAT ಅಡಿಯಲ್ಲಿ ಪರೀಕ್ಷಿಸಲಾದ ಒಟ್ಟು ಸಂಖ್ಯೆ 28,600 (61%) • ಎಕ್ಸ್-ರೇ ಅಡಿಯಲ್ಲಿ ಪರೀಕ್ಷಿಸಲಾದ ಒಟ್ಟು ಸಂಖ್ಯೆ 12,500 (15%) • ಅಭಿಯಾನದ ಸಮಯದಲ್ಲಿ ಕ್ಷಯರೋಗ ಧೃಢಪಟ್ಟ ರೋಗಿಗಳು 4,010
ಬಿಬಿಎಂಪಿ ವ್ಯಾಪ್ತಿಯಲ್ಲಿ ಕ್ಷಯರೋಗ ಪ್ರಮಾಣ (2023 ರಲ್ಲಿ 15,543 ಪ್ರಕರಣಗಳಿಂದ 2024 ರಲ್ಲಿ 14,059 ಕ್ಕೆ) ಮತ್ತು ಮರಣ ಪ್ರಮಾಣ (2023 ರಲ್ಲಿ 750 ಸಾವುಗಳಿಂದ 2024 ರಲ್ಲಿ 702 ಕ್ಕೆ) ಕಡಿಮೆಯಾಗಿದೆ.
ಆರೋಗ್ಯ ತಪಾಸಣೆ: ಬಿಬಿಎಂಪಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ, ಕ್ಷಯ ರೋಗಿಗಳಿಗೆ ಪೌಷ್ಠಿಕಾಂಶ ಕಿಟ್‌ಗಳನ್ನು ವಿತರಿಸಲಾಯಿತು. ಅದರ ಜೊತೆಗೆ ಪಾಲಿಕೆ ಸಿಬ್ಬಂದಿ/ನಾಗರಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ಈ ವೇಳೆ ಟಿ.ಬಿ ಕಾರ್ಯಕ್ರಮ ಅಧಿಕಾರಿಯಾದ ಡಾ. ಸುರೇಶ್, ಆರೋಗ ಸಿಬ್ಬಂದಿಗಳು, ಎನ್.ಜಿ.ಓ. ಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.