ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲನಾ ಸಿಬ್ಬಂದಿಗಳನ್ನು ಏಕವಚನದಲ್ಲಿ ಕರೆಯದಂತೆ ಮಾರ್ಗ ತನಿಖಾ ಸಿಬ್ಬಂದಿಗೆ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಎಲ್.ಜಯಪ್ರಕಾಶ್ ಆದೇಶ ಹೊರಡಿಸಿದ್ದಾರೆ.
ಸಾರಿಗೆ ನಿಗಮಗಳ ಚಾಲನಾ ಸಿಬ್ಬಂದಿಗಳೇ ಸಂಸ್ಥೆಯ ಪ್ರಮುಖ ಆದಾಯದ ಮೂಲ. ಅವರು ಬಸ್‌ಗಳನ್ನು ಮಾರ್ಗಗಳಲ್ಲಿ ಓಡಿಸದಿದ್ದರೆ ಸಂಸ್ಥೆ ಉನ್ನತ ಅಧಿಕಾರಿಯಾದರು ಅವರಿಂದ ಒಂದು ರೂ. ಆದಾಯ ತರುವುದಕ್ಕೆ ಸಾಧ್ಯವಿಲ್ಲ.
ಇಂಥ ನೌಕರರನ್ನು ಮಾರ್ಗ ಮಧ್ಯೆ ತನಿಖೆ ನಡೆಸುವ ಸಂಬಂಧ ಬಸ್ ಹತ್ತುವ ತನಿಖಾ ಸಿಬ್ಬಂದಿ ಚಾಲನಾ ಸಿಬ್ಬಂದಿಗಳನ್ನು ಏಕವಚನದಲ್ಲಿ ಕರೆಯುವುದು, ಅವಾಚ್ಯ ಶಬ್ದ ಪ್ರಯೋಗ ಮಾಡುವುದು ಮಾಡುತ್ತಿರುತ್ತಾರೆ.
ಹೀಗಾಗಿ ನಾವು ಕೂಡ ಸಂಸ್ಥೆಯ ನೌಕರರೆ ನಮ್ಮನ್ನು ಸಾರ್ವಜನಿಕರ ಎದುರು ಗೌರವದಿಂದ ತನಿಖಾ ಸಿಬ್ಬಂದಿಗಳು ನಡೆಸಿಕೊಳ್ಳಬೇಕು. ನಾವು ಅವರು ಎಷ್ಟೆ ಏಕವಚನ ಪ್ರಯೋಗ ಮಾಡಿದರೂ ಬಹುವಚನದಿಂದಲೇ ಸಂಭೋಗ ಮಾಡುತ್ತೇವೆ. ಆದರೆ, ಅದನ್ನು ಅವರು ಗಣನೆಗೆ ತೆಗೆದುಕೊಳ್ಳದೆ ನಮ್ಮನ್ನು ಕೀಳಾಗಿ ಕಾಣುತ್ತಾರೆ ಎಂಬ ಆರೋಪ ಕೇಳಿಬರುತ್ತಲೇ ಇದೆ.
ಇದನ್ನು ಖಂಡಿಸಿ ನೌಕರರು ಮತ್ತು ನೌಕರರ ಪರ ಸಂಘಟನೆಗಳ ಮುಖಂಡರು ಚಾಲನಾ ಸಿಬ್ಬಂದಿಯನ್ನು ಏಕವಚನದಲ್ಲಿ ಕರೆಯ ಬಾರದು ಎಂದು ಒತ್ತಾಯ ಮಾಡುತ್ತಿದ್ದರು.
ಈ ಎಲ್ಲವನ್ನು ಗಮನಿಸಿದ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಎಲ್.ಜಯಪ್ರಕಾಶ್ ಅವರು ಈ ಆದೇಶ ಹೊರಡಿಸಿದ್ದು, ಮಾರ್ಗ ತನಿಖಾ ಸಿಬ್ಬಂದಿಗಳು ಕರ್ತವ್ಯದ ಸಮಯದಲ್ಲಿ ಬಸ್‌ಗಳನ್ನು ತನಿಖೆ ಮಾಡುವಾಗ ಚಾಲಕ, ನಿರ್ವಾಹಕರನ್ನು ಏಕವಚನದಲ್ಲಿ ಮಾತನಾಡಿಸುತ್ತಿರುವುದಾಗಿ ಘಟಕದಲ್ಲಿ ಚಾಲನಾ ಸಿಬ್ಬಂದಿಗಳು ಹಾಗೂ ಯೂನಿಯನ್ ನಾಯಕರು ಆರೋಪ ಮಾಡುತ್ತಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿದೆ.
ಆದುದರಿಂದ ಮಾರ್ಗ ತನಿಖಾ ಸಿಬ್ಬಂದಿಗಳು ಇನ್ನು ಮುಂದೆ ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ, ಬಸ್‌ಗಳನ್ನು ತನಿಖೆ ಮಾಡುವಾಗ ಚಾಲಕ, ನಿರ್ವಾಹಕರಿಗೆ ಏಕವಚನದಲ್ಲಿ ಮಾತನಾಡದೆ, ಸಹನೆ, ತಾಳ್ಮೆಯಿಂದ, ಸೌಜನ್ಯದಿಂದ ಬಹುವಚನದಲ್ಲಿ ಮಾತನಾಡಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ.