
ಮೈಸೂರು: 11.50 ಲಕ್ಷ ರೂಪಾಯಿ ನಗದಾಗಿ ಸಾಲಕೊಟ್ಟು 13.80 ಲಕ್ಷ ರೂಪಾಯಿ ಕೊಟ್ಟಿದ್ದೇವೆ ಎಂದು ರೈತನ ಸಾಲದ ಖಾತೆಯಲ್ಲಿ ತೋರಿಸಿದ್ದು ಅಲ್ಲದೆ ಬಳಿಕ ವಿವಿಧ ರೀತಿಯಲ್ಲಿ ರೈತನ ವಂಚಿಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಇಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಸಂಘದ ಮೈಸೂರು – ಚಾಮರಾಜ ನಗರ ಜಿಲ್ಲಾ ಘಟಕದಿಂದ ಮೈಸೂರಿನ ವಿ.ವಿ.ಮೊಹಲ್ಲಾದ ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಕಚೇರಿಗೆ ಮುತ್ತಿಗೆ ಹಾಕಿದ ರೈತರು ತಿ.ನರಸೀಪುರ ತಾಲೂಕಿನ ದೊಡ್ಡನಹುಂಡಿ ಗ್ರಾಮದ ಮಂಟೇಸ್ವಾಮಿ ಎಂಬ ರೈತ 2018ರಲ್ಲಿ 13,80,000 ಮನೆ ನಿರ್ಮಾಣಕ್ಕಾಗಿ ಸಾಲ ತೆಗೆದುಕೊಂಡಿದ್ದಾರೆ.
ಆದರೆ, ಅವರಿಗೆ 11.50 ಲಕ್ಷ ರೂ. ಹಣ ಕೊಟ್ಟು ಇನ್ನುಳಿದ 2, 30,000 ರೂ.ಗಳನ್ನು ಇನ್ಶೂರೆನ್ಸ್ ಹಾಗೂ ಇನ್ನಿತರ ಸರ್ವಿಸ್ ಚಾರ್ಜ್ ಎಂದು ಹಿಡಿದುಕೊಂಡು 20 ವರ್ಷ ಕಟ್ಟುವಂತೆ ನಿಗದಿ ಮಾಡಿದ್ದಾರೆ. ಅದರಂತೆ ತಿಂಗಳಿಗೆ 19,600 ರೂ.ಗಳನ್ನು ಮೂರು ವರ್ಷಗಳ ಕಾಲ ಕಟ್ಟಿಸಿಕೊಂಡು ನಂತರ 21,600 ರೂ.ಗಳಂತೆ ಮೂರು ವರ್ಷಗಳ ಕಾಲ ಒಟ್ಟು ಆರು ವರ್ಷಕ್ಕೆ 14,83,200 ರೂ.ಗಳನ್ನು ಕಟ್ಟಿಸಿಕೊಂಡಿದ್ದಾರೆ.
ಈ ನಡುವೆ 2024ರಲ್ಲಿ ಮತ್ತೊಮ್ಮೆ ರೈತನಿಗೆ ನೀವು ಬ್ಯಾಂಕಿಗೆ ಬರಬೇಕೆಂದು ಕರೆ ಮಾಡಿ ಕರೆಯಿಸಿ ನೀವು ಕೋವಿಡ್ ಸಮಯದಲ್ಲಿ 5 ತಿಂಗಳು ಕಂತು ಕಟ್ಟದಿರುವ ಕಾರಣ 20 ವರ್ಷ ಅಲ್ಲಾ ಬದಲಿಗೆ 28 ವರ್ಷ ಇಎಂಐ ಕಟ್ಟಬೇಕು ಎಂದು ಹೇಳಿದ್ದಾರೆ. ಆಗ ರೈತ ಆಘಾತಗೊಂಡಿದ್ದಾರೆ.
ಅಲ್ಲದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಈ ವೇಳೆ ನೆರೆಹೊರೆಯವರು ರಾಜ್ಯ ಕಬ್ಬು ಬೆಳೆಗಾರರ ಸಂಘದ ಗಮನಕ್ಕೆ ತಂದಿದ್ದಾರೆ. ರಾಜಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರನ್ನು ರೈತ ಭೇಟಿ ಮಾಡಿ ತನ್ನ ಅಳಲನ್ನು ತೋಡಿಕೊಂಡಿದ್ದು ಆಗ ಶಾಂತಕುಮಾರ್ ಅವರು ಜಿಲ್ಲಾ ಸಮಿತಿಗೆ ಸಮಸ್ಯೆ ಏನು ಎಂದು ತಿಳಿದುಕೊಂಡು ರೈತನಿಗೆ ನ್ಯಾಯ ಕೊಡಿಸಿ ಎಂದು ಹೇಳಿದ್ದಾರೆ.
ಆಗ ಜಿಲ್ಲಾ ಸಮಿತಿಯವರು ಕಳೆದ ವರ್ಷ ನವೆಂಬರ್‌ನಲ್ಲಿ ಮೈಸೂರಿನ ವಿ.ವಿ.ಮೊಹಲ್ಲಾದ ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಭೇಟಿ ಮಾಡಿದ್ದಾರೆ. ಶಾಖೆಯ ವ್ಯವಸ್ಥಾಪಕ ಮಹೇಶ್ ಆರ್‌ಬಿಐ ಆದೇಶದ ಪ್ರಕಾರ ಮಾಡಲಾಗಿದೆ ಎಂದು ಬೇಜವಾಬ್ದಾರಿಯ ಉತ್ತರ ನೀಡಿದರು. ಇದರಿಂದ ಕೋಪಗೊಂಡ ರೈತರು ಮಾತಿನ ಚಕಮಕಿ ನಡೆಸಿದಾಗ ಮಧ್ಯಪ್ರವೇಶ ಮಾಡಿದ ವಿವಿ ಮೊಹಲ್ಲಾ ಪೊಲೀಸ್ ಠಾಣೆಯ ಸಿಬ್ಬಂದಿಯವರು ಮಾತುಕತೆಯಿಂದ ಬಗೆಹರಿಸಿಕೊಳ್ಳಿ ಎಂದು ಹೇಳಿದರು.
ಅದರಂತೆ ರೈತ ಮುಖಂಡರು ರೈತ ಈಗಾಗಲೇ ತೆಗೆದುಕೊಂಡಿರುವ ಸಾಲಕ್ಕಿಂತ ಹೆಚ್ಚಿನ ಹಣವನ್ನು ಕಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಅಲ್ಲದೆ 20 ವರ್ಷಕ್ಕೆ ನಿಗದಿ ಮಾಡಿದ್ದನ್ನು 28 ವರ್ಷಕ್ಕೆ ಮಾಡಿದ್ದರೆ ಎಲ್ಲ ಒಟ್ಟಾರೆಯಾಗಿ 72 ಲಕ್ಷ ಆಗುತ್ತದೆ. ನನ್ನ ಮನೆಯನ್ನು ಈಗ ಮಾರಾಟ ಮಾಡಿದರು ಅಷ್ಟಕ್ಕೆ ಹೋಗುವುದಿಲ್ಲ ನಾನು ಸಾಯುವುದೊಂದೇ ಬಾಕಿ ಎಂದು ರೈತ ಅಳಲು ತೋಡಿಕೊಂಡು ನನ್ನ ಬಳಿ ಅಷ್ಟು ಹಣ ಇಲ್ಲ ನಾನು ಈಗ ಬೇರೆಯವರ ಹತ್ತಿರ ಕೈ ಸಾಲ ಮಾಡಿ ಹಾಗೂ ನನ್ನ ಮಗ ಕಾರ್ ಓಡಿಸಿಕೊಂಡು ಇದ್ದಾನೆ ಅವನು ಬೇರೆಯವರ ಕಡೆಯಿಂದ ಕೈ ಸಾಲ ಮಾಡಿ ಕೊಡುತ್ತಾನೆ ಒಟ್ಟಾರೆಯಾಗಿ 3 ಲಕ್ಷ ರೂ. ಮಾತ್ರ ನನ್ನ ಬಳಿ ಕಟ್ಟಲು ಸಾಧ್ಯ ಎಂದು ತಿಳಿಸಿದ್ದಾನೆ.
ರೈತ ಮುಖಂಡರು ಅದರಂತೆ ಒನ್ ಟೈಮ್ ಸೆಟಲ್ಮೆಂಟ್ (OTS) ಮೂಲಕ ಮಾಡಿಕೊಂಡು ಋಣಮುಕ್ತನಾಗಿ ಮಾಡಿಕೊಡಬೇಕೆಂದು ಮನವಿ ಪತ್ರವನ್ನು ಬರೆದುಕೊಡುತ್ತಾರೆ. ಆದರೆ ಸಿಬ್ಬಂದಿ ವರ್ಗದವರು ಈ ಪತ್ರದ ಬಗ್ಗೆ ಸರಿಯಾಗಿ ಗಮನವಹಿಸದೆ ನಿರ್ಲಕ್ಷ್ಯ ಮಾಡಿ 29.01.2025ರಂದು ಕಾಟಾಚಾರಕ್ಕೆ ಒಂದು ಉತ್ತರ ಪತ್ರ ನೀಡುತ್ತಾರೆ. ಇದರ ಮಧ್ಯೆ ಮೊದಲೇ ನ್ಯಾಯಾಲಯದಲ್ಲಿ ರೈತನ ಗಮನಕ್ಕೆ ತರದಂತೆ 08.01.2025 ರಂದು ನ್ಯಾಯದಲ್ಲಿ ದಾವೆ ಹೂಡಿಕೊಂಡು ವಂಚನೆ ಆಗಿರುವುದು ಕಂಡು ಬಂದಿದೆ.
ನ್ಯಾಯಾಲಯದಿಂದ ಸ್ಥಳೀಯ ಪೊಲೀಸರ ಮೂಲಕ ರೈತನಿಗೆ ನೋಟಿಸ್ ನೀಡಿ ಭಯ ಹುಟ್ಟಿಸಿದ್ದಾರೆ ಇದರಿಂದ ದಿಕ್ಕು ಕಾಣದೆ ರೈತ ಮತ್ತೆ ಸಂಘಟನೆಯ ಗಮನಕ್ಕೆ ತಂದಾಗ ಮೈಸೂರು ಚಾಮರಾಜನಗರ ಜಿಲ್ಲಾ ಸಮಿತಿಯವರು ಮೈಸೂರಿನ ಗನ್ ಹೌಸ್ ಬಳಿ ಇರುವ ಕುವೆಂಪು ಉದ್ಯಾನವನದಲ್ಲಿ ಜಮಾವಣೆಗೊಂಡು ರೈತನಿಗೆ ಧೈರ್ಯ ತುಂಬಿ ಆದಾರ್ ಹೌಸಿಂಗ್ ಫೈನಾನ್ಸ್ ಕಚೇರಿಗೆ ಮುತ್ತಿಗೆ ಹಾಕಿ ಇಂದು ತರಾಟೆಗೆ ತೆಗೆದುಕೊಂಡರು.
ಈ ವೇಳೆ ರೈತರು ಆಧಾರ್ ಹೌಸಿಂಗ್ ಫೈನಾನ್ಸ್ ಮ್ಯಾನೇಜರ್ ಮಾತಿನ ಚಕಮಕಿ ನಡೆಯಿತು. ಈ ನಡುವೆ ವಿ.ವಿ.ಪುರಂ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿವೇಕಾನಂದ ಅವರು ಮಧ್ಯವಸ್ಥಿಕೆ ವಹಿಸಿದಾಗ ರೈತರು ಮ್ಯಾನೇಜರ್ ಬಳಿ ಕೆಲವು ಪ್ರಶ್ನೆ ಇಟ್ಟರು. 20 ವರ್ಷಕ್ಕೆ ಇದ್ದ ಲೋನ್ ಅನ್ನು 28 ವರ್ಷಕ್ಕೆ ಏಕೆ ಏರಿಕೆ ಮಾಡಲಾಯಿತು ಇದಕ್ಕೆ ಉತ್ತರ ಬೇಕು ಎಂದು ಪಟ್ಟು ಹಿಡಿದರು.
ಇದಕ್ಕೆ ಮ್ಯಾನೇಜರ್ ಮಂಟೇಸ್ವಾಮಿ 2018 ಅಲ್ಲಿ 13,80,000 ಲೋನ್ ತೆಗೆದುಕೊಂಡಿದ್ದಾರೆ. ಇನ್ಶೂರೆನ್ಸ್ ಮತ್ತು ಪ್ರೊಸೆಸಿಂಗ್ ಚಾರ್ಜ್, ಲಾಗ್ ಇನ್ ಫೀಸ್ ಅಂಥ ಸುಮಾರು 92,000 ಕಟ್ ಆಗಿದ ಇನ್ನೂ ಉಳಿದ ಹಣವನ್ನು ರೈತರ ಖಾತೆಗೆ ಹಾಕಿದ್ದೇವೆ. ಕೊರೊನಾ ಸಮಯದಲ್ಲಿ 5 ತಿಂಗಳ ಕಂತು ಕಟ್ಟಿಲ್ಲ ಅದಕ್ಕೆ ಇಂಟ್ರೆಸ್ಟ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಬಡ್ಡಿ ದರ ಜಾಸ್ತಿ ಆಗಿದೆ ಹಾಗೂ RBI ಬ್ಯಾಂಕ್ ರೂಲ್ಸ್ ಇದೆ ರೀತಿ ಎಂದು ಪೊಲೀಸರಿಗೆ ಮತ್ತು ರೈತರಿಗೆ ಬೇಜವಾಬ್ದಾರಿ ಉತ್ತರ ನೀಡಿದ್ದಾನೆ.
ಅದಕ್ಕೆ ಪ್ರತ್ಯುತ್ತರವಾಗಿ ರೈತರು RBI ರೂಲ್ಸ್ ಇದ್ದರೆ ಅದರ ಲಿಖಿತ (ಪೇಪರ್) ಇದ್ದರೆ ಕೊಡಿ ಎಂದು ಕೇಳಿದ್ದಾರೆ. ಮ್ಯಾನೇಜರ್ ತಬ್ಬಿಬ್ಬು ಆಗಿ ಲೆಟರ್ ತೆಗೆದುಕೊಂಡು ಬರುತ್ತೇನೆ ಎಂದು ಕಚೇರಿಯ ಒಳಗಡೆ ಹೋಗಿ. ಸುಮಾರು 2 ಗಂಟೆಗಳ ನಂತರ ಹೊರಗಡೆ ಬಂದು ರೈತರು ಮತ್ತು ಪೊಲೀಸರ ಕೇಳಿದ್ದ ಪ್ರಶ್ನೆಗೆ ಉತ್ತರ ನೀಡದೆ ಇತ್ತೀಚಿನ rate of interest ಜಾಸ್ತಿ ಆಗಿದೆ ಎಂದು ಹೇಳಿದ್ದಾನೆ. ಆದರೆ ರೈತರು ಮಾತ್ರ 20ಕ್ಕೆ ಹೇಳಿದ್ದ ಲೋನ್ ಅನ್ನು 28 ವರ್ಷಕ್ಕೆ ಮಾಡಿದ್ದು ಯಾಕೆ ಮತ್ತು RBI ರೂಲ್ಸ್ ಇದೆ ಎಂದು ಹೇಳಿ ಅದರ ಆದೇಶ ಪ್ರತಿ ತರುತ್ತೇನೆ ಎಂದು ಹೇಳಿ ಹೋಗಿದ್ದು ಅದರ ಪ್ರತಿ ಎಲ್ಲಿ ಎಂದು ಪ್ರಶ್ನಿಸಿದಾಗ ಉತ್ತರಿಸಲಾಗದೆ ಸುಮ್ಮನೆ ನಿಂತನು ಮ್ಯಾನೇಜರ್.
ಇನ್ನೂ ಮಧ್ಯವಸ್ತಿಕೆ ವಹಿಸಿದ ಪೊಲೀಸರು ರೈತರನ್ನು ಸಮಾಧಾನ ಪಡಿಸಲು ಯತ್ತಿಸಿದಾಗ ಅದಕ್ಕೆ ಒಪ್ಪದ ರೈತರು 4 ತಿಂಗಳ ಹಿಂದೆ ನಾವು ಈ ಫೈನಾನ್ಸ್ ಅವರಿಗೆ ಮನವಿ ನೀಡಿದ್ದೆವು. ಅದರಂತೆ 3 ಲಕ್ಷ ರೂ. ಕಟ್ಟಿಸಿಕೊಂಡು ಈ ರೈತನನ್ನು ಸಾಲ ಮುಕ್ತನನ್ನಾಗಿ ಮಾಡಿಕೊಡಿ ಇದಕ್ಕೆ ತಪ್ಪಿದರೆ ನಾವು ಈ ಕಚೇರಿಯ ಮುಂಭಾಗವೇ ನಿರಂತರ ಪ್ರತಿಭಟನೆ ಮಾಡುತ್ತೇವೆ ಎಂದು ಪೊಲೀಸರಿಗೆ ತಿಳಿಸಿ ಅರಬೆತ್ತಲೆ ಚಳವಳಿ ಹಾಗೂ ತಲೆ ಮೇಲೆ ಕಲ್ಲು ಇಟ್ಟುಕೊಂಡು ಪ್ರತಿಭಟನೆ ಮಾಡಿದರು.
ಇನ್ನು ರೈತರನ್ನು ಅರಬೆತ್ತಲೆ ಮಾಡಿದ ಆಧಾರ್ ಫೈನಾನ್ಸ್ ಗೆ ಧಿಕ್ಕಾರ ಇವರ ವಿರುದ್ಧ ಕ್ರಮ ಕೈಗೊಳ್ಳದ ಜಿಲ್ಲಾಡಳಿತಕ್ಕೆ ಧಿಕ್ಕಾರ, ರೈತರ ತಲೆ ಮೇಲೆ ಕಲ್ಲು ಹಾಕಿದ ಆಧಾರ್ ಫೈನಾನ್ಸ್ ಗೆ ಧಿಕ್ಕಾರ ಎಂದು ವಿಭಿನ್ನ ರೀತಿಯಲ್ಲಿ ಚಳವಳಿ ನಡೆಸಿ ಮಧ್ಯಾಹ್ನದ ಊಟವನ್ನು ಅಲ್ಲೇ ಮಾಡಿ ಪ್ರತಿಭಟನೆಯನ್ನು ಮುಂದುವರಿಸಿದರು. ಸ್ಥಳದಲ್ಲಿದ್ದ ಮ್ಯಾನೇಜರ್ ಕಾಲ್ಕಿತ್ತಿದ್ದಾನೆ ಆದರೂ ಸಹ ರೈತರು ಹಠ ಬಿಡದೆ ರೈತನ ಸಮಸ್ಯೆ ಬಗೆಹರಿಸುವವರೆಗೂ ಚಳವಳಿಯನ್ನು ಕೈ ಬಿಡುವುದಿಲ್ಲ ಎಂದು ಮುಂದುವರಿಸಿದ್ದಾರೆ.
ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಸೋಮಶೇಖರ್, ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕುರುಬೂರು ಸಿದ್ದೇಶ್, ಮಾರ್ಬಳ್ಳಿ ನೀಲಕಂಠಪ್ಪ, ದೇವನೂರು ವಿಜಯೇಂದ್ರ, ಉಡಿಗಾಲ ರೇವಣ್ಣ, ಸುಂದರಪ್ಪ, ಗೌರಿಶಂಕರ, ಕಿರಗಸೂರು ಪ್ರಸಾದ ನಾಯಕ, ಕೋಟೆ ಸುನಿಲ್, ಗೌರಿ ಶಂಕರ, ಕುರುಬೂರು ಪ್ರದೀಪ್, ಗುರುಸ್ವಾಮಿ, ಪರಶಿವಮೂರ್ತಿ, ಬನ್ನೂರು ಸೂರಿ, ಅಂಬಳೆ ಮಂಜುನಾಥ್, ರಾಜೇಶ್, ನಂಜುಂಡ, ರಂಗರಾಜು, ಸತೀಶ್, ಚುಂಚರಾಯಣಹುಡಿ ಗಿರೀಶ್, ಉಮೇಶ್ ಬಸವನಹಳ್ಳಿ, ವಾಜಮಂಗಳ ನಾಗೇಂದ್ರ.ಪಿ, ವಾಜಮಂಗಳ ನಾಗೇಂದ್ರ. ಎನ್, ಬಸವಣ್ಣ , ಶಿವಪ್ರಸಾದ್ ಕುರುಬೂರು, ಶಂಭು, ಸಾತಗಳ್ಳಿ ಮಹೇಶ್, ರಾಮಮೂರ್ತಿ, ರವಿ, ಕುಮಾರ್, ಸಂದೀಪ್, ರಾಜಪ್ಪ, ಮಲ್ಲೇಶ್, ಶೇಖರಪ್ಪ, ನಾಗರಾಜಮೂರ್ತಿ, ರಾಜು, ಶಾಂತರಾಜು, ಪಾರ್ವತಮ್ಮ, ಜಯಲಕ್ಷ್ಮಿ, ಮುನಿಯಮ್ಮ, ಚಿಕ್ಕತಾಯಮ, ನಾಗಮ್ಮ, ಮಲಜಮ್ಮ, ಪುಟಮ್ಮ, ಮಹಿಳೆ ರೈತರು ಸೇರಿ ಇನ್ನೂ ಸುಮಾರು 100ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
