ಮಂಡ್ಯ: ಹಣಕಾಸಿನ ವಿಚಾರವಾಗಿ ಕಟ್ಟಡ ಕಾರ್ಮಿಕನ ಎದೆಗೆ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಳವಳ್ಳಿ ಪಟ್ಟಣದ ಹೊರವಲಯದ ಮಂಡ್ಯ ರಸ್ತೆಯ ಜಮೀನೊಂದರ ಬಳಿ ನಡೆದಿದೆ.
ಮೆಳ್ಳಹಳ್ಳಿ ಗ್ರಾಮದಲ್ಲಿ ವಾಸವಿದ್ದ ಯಾಲದಹಳ್ಳಿಯ ಮಂಟೇಸ್ವಾಮಿ (36) ದುಷ್ಕರ್ಮಿಗಳಿಂದ ಹತ್ಯೆಯಾದ ವ್ಯಕ್ತಿಯಾಗಿದ್ದು, ಈತನ ಶವವು ರಕ್ತಸಿಕ್ತ ಸ್ಥಿತಿಯಲ್ಲಿ ಮಂಡ್ಯ ರಸ್ತೆಯ ಜಮೀನೊಂದರ ಬಳಿ ಪತ್ತೆಯಾಗಿದೆ.
ಬಾರ್ ಬೆಂಡಿಂಗ್ ಕೆಲಸ ಮಾಡುತಿದ್ದ ಮಂಟೇಸ್ವಾಮಿಗೆ ಆತನ ಸ್ನೇಹಿತನಾದ ಮಂಡ್ಯ ಮೂಲದ ರವಿ ಎಂಬಾತ 20 ಸಾವಿರ ಹಣವನ್ನು ಸಾಲವಾಗಿ ನೀಡಿದ್ದ ಎನ್ನಲಾಗಿದೆ. ಎಂದಿನಂತೆ ಸೋಮವಾರ ಬೆಳಗ್ಗೆ ರವಿಗೆ ಹಣವನ್ನು ಮಂಟೇಸ್ವಾಮಿಗೆ ಹಿಂತಿರುಗಿಸಿದ್ದಾನೆ. ಬಳಿಕ ತನ್ನ ಪತ್ನಿ ಮಗುವಿನ ಜತೆ ಮಂಟೇಸ್ವಾಮಿ ದೇವಾಲಯಕ್ಕೆ ತೆರಳಿ ವಾಪಸ್ಸು ಮನೆಗೆ ಬಂದಿದ್ದಾನೆ.
ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ರವಿ ಮಂಟೇಸ್ವಾಮಿಗೆ ಮೋಬೈಲ್ ಕರೆ ಮಾಡಿ ನಿನ್ನ ಬಳಿ ಸ್ವಲ್ಪ ಮಾತನಾಡಬೇಕು ಮಂಡ್ಯ ಸರ್ಕಲ್‌ಗೆ ಬಾ ಎಂದು ಕರೆದಿದ್ದು ಅದರಂತೆ ರವಿ ಬಳಿ ಮಂಟೇಸ್ವಾಮಿ ಅಲ್ಲಿಗೆ ತೆರಳಿದ್ದ ಎನ್ನಲಾಗಿದೆ. ಆದರೆ ಹೋದವನು ಮರಳಿ ಬಾರದೆ ಇದ್ದಾಗ ಪತ್ನಿ ಗಂಡ ಮಂಟೇಸ್ವಾಮಿಗೆ ಕರೆ ಮಾಡಿದ್ದು ವೇಳೆ ಮೊಬೈಲ್ ಸ್ವೀಚ್ ಆಫ್ ಆಗಿತ್ತು.
ಇದರಿಂದ ಗಾಬರಿಗೊಂಡು ಎಲ್ಲ ಕಡೆ ಹುಡುಕಾಟ ನಡೆಸಿದ್ದು, ಎಲ್ಲಿಯೂ ಕಾಣದೆ ಇದ್ದಾಗ ದಾರಿ ಕಾಯುತ್ತಾ ಕೂತಿದ್ದಾರೆ. ಆದರೆ ರಾತ್ರಿಯಾದರೂ ಮಂಟೇಸ್ವಾಮಿ ಮಾತ್ರ ಮನೆಗೆ ಬರಲೇ ಇಲ್ಲ. ಬೆಳಗ್ಗೆಯಾಗುತ್ತಿದ್ದಂತೆಯೇ ಈತನ ಶವ ಮಂಡ್ಯ ರಸ್ತೆಯಲ್ಲಿ ಪತ್ತೆಯಾಗಿದೆ. ಈ ವಿಷಯ ತಿಳಿದ ಕೆ.ಎಂ.ದೊಡ್ಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸದಿದಾಗ ಕೊಲೆಯಾಗಿರುವುದು ಪತ್ತೆಯಾಗಿದ್ದು, ಸ್ಥಳಕ್ಕೆ ಡಿವೈಎಸ್‌ಪಿ ಕೃಷ್ಣಪ್ಪ, ಮಳವಳ್ಳಿ ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್, ಸಬ್ ಇನ್ಸ್ ಪೆಕ್ಟರ್ ಭೀಮಪ್ಪ ಎಸ್. ಬಾಣಸಿ, ರಾಮಸ್ವಾಮಿ, ದೇವರಾಜು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಹಣಕಾಸಿನ ವಿಚಾರದಲ್ಲಿ ಮಂಡ್ಯ ಮೂಲದ ರವಿ ಕೊಲೆ ಮಾಡಿರುವ ಶಂಕೆ ಇದೆ ಎಂದು ಮೃತನ ಸಹೋದರ ಸಿದ್ದಪ್ಪಾಜಿ ಕೆ.ಎಂ.ದೊಡ್ಡಿ ಪೊಲೀಸರಿಗೆ ದೂರು ನೀಡಿದ್ದು, ದೂರು ದಾಖಲಿಸಿ ಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿ ಪತ್ತೆಗೆ ಶೋಧ ನಡೆಸಿದ್ದಾರೆ.
ಇನ್ನೊಂದೆಡೆ ಕಟ್ಟಡ ಕಾರ್ಮಿಕ ಮಂಟೇಸ್ವಾಮಿಯನ್ನು ಹತ್ಯೆ ಮಾಡಿರುವ ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಬೇಕು ಎಂದು ಆಗ್ರಹಿಸಿ ವಿಶ್ವಕರ್ಮ ಜನಾಂಗದವರು ಭಾರತೀನಗರದಲ್ಲಿ ಮೌನ ಪ್ರತಿಭಟನೆ ನಡೆಸಿದರು. ಮೃತ ದೇಹವನ್ನು ಗೂಡ್ಸ್ ಗಾಡಿಯಲ್ಲಿ ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಹತ್ಯೆಯಾಗಿರುವ ಮಂಟೇಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಮುಖಂಡ ಮಳವಳ್ಳಿ ಶ್ರೀನಿವಾಸ್ ಮಾತನಾಡಿ, ಸ್ನೇಹಿತನಿಂದಲೇ ಹತ್ಯೆಯಾಗಿರುವ ಮಂಟೇಸ್ವಾಮಿ ಕಟುಂಬಕ್ಕೆ ಪೊಲೀಸ್ ಇಲಾಖೆ ನ್ಯಾಯ ಕೊಡಿಸಬೇಕು ಈ ಹಿನ್ನಲೆಯಲ್ಲಿ ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ಹತ್ಯೆಯಾಗಿರುವ ಮೃತ ಮಂಟೇಸ್ವಾಮಿ ಕುಟುಂಬ ಆರ್ಥಿಕವಾಗಿ ಸಬಲವಾಗಿಲ್ಲ. ಈತನ ಆದಾಯವನ್ನೇ ನಂಬಿಕೊಂಡಿದ್ದ ಅವರ ಕುಟುಂಬ ಈಗ ಬೀದಿಗೆ ಬಿದ್ದಿದೆ ಹೀಗಾಘಿ ಮದ್ದೂರು ಕ್ಷೇತ್ರದ ಶಾಸಕ ಕದಲೂರು ಉದಯ್ ಅವರು ಮೃತ ಮಂಟೇಸ್ವಾಮಿ ಕುಟುಂಬಕ್ಕೆ ನೆರವು ನೀಡುವಂತೆ ಮನವಿ ಮಾಡಿದರು.
ವಿಶ್ವಕರ್ಮ ಮುಖಂಡರಾದ ತೈಲೂರು ಆನಂದ್, ಮೆಳ್ಳಹಳ್ಲಿ ಸುರೇಶ್, ಮಳವಳ್ಳಿ ಸೋಮಶೇಖರ್, ಮನು, ಸೋಮ ಸೇರಿದಂತೆ ಹಲವರಿದ್ದರು.