ಪಿರಿಯಾಪಟ್ಟಣ: ತಾಲೂಕಿನ ಇತಿಹಾಸ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶ್ರೀ ಭ್ರಮರಾಂಬಾ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ, ಬೆಳ್ಳಿ ಬಸಪ್ಪ, ವಿಘ್ನೇಶ್ವರ ಅವರ ಬ್ರಹ್ಮರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ಜರುಗಿತು.
ತ್ರಿವಳಿ ರಥಗಳಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ಬೆಳ್ಳಿ ಬಸಪ್ಪ, ವಿಘ್ನೇಶ್ವರ, ಭ್ರಮರಾಂಬಾ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ಭಕ್ತಾದಿಗಳು ಉಘೇ ಉಘೇ ಮಲ್ಲಯ್ಯ, ಉಘೇ ಉಘೇ ಗಿರಿಜಮ್ಮ, ಉಘೇ ಉಘೇ ಬೆಳ್ಳಿ ಬಸಪ್ಪ ಎಂದು ಘೋಷಣೆ ಕೂಗುತ್ತಾ ರಥವನ್ನು ಎಳೆದರು. ನವದಂಪತಿಗಳು, ವಿವಿಧ ಜಿಲ್ಲೆಗಳಿಂದ ಬಂದ ಭಕ್ತಾದಿಗಳು ಹಣ್ಣು– ಜವನ ಎಸೆದು ಹರಕೆ ಸಮರ್ಪಿಸಿದರು.
ಜಾತ್ರೆಯ ಸಂಪ್ರದಾಯದಂತೆ ಶುಕ್ರವಾರ ರಾತ್ರಿ ಅಶ್ವಾರೋಹಣ ಸೇವೆ ನಡೆಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಉತ್ಸವ ಮಾಡಲಾಯಿತು. ನಂತರ ದೇವಾಲಯದ ಆವರಣದಲ್ಲಿ ಸತೀಶ್ ಕಶ್ಯಪ ನೇತೃತ್ವದಲ್ಲಿ ಭ್ರಮರಾಂಬಾ ಹಾಗೂ ಮಲ್ಲಿಕಾರ್ಜುನ ಸ್ವಾಮಿ ದೇವರಿಗೆ ಶಾಸ್ತ್ರೋಕ್ತವಾಗಿ ವಿವಾಹ ಮಾಡಿಸಿ, ಗಿರಿಜಾ ಕಲ್ಯಾಣ ನೆರವೇರಿಸಿದರು.
ಮಧ್ಯರಾತ್ರಿಯವರೆಗೂ ನಡೆದ ಕಲ್ಯಾಣೋತ್ಸವದಲ್ಲಿ ತಹಸೀಲ್ದಾರ್ ಕುಂಞಿ ಅಹಮದ್ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು.
ಶನಿವಾರ ಬೆಳಗ್ಗೆ ದೇವಾಲಯದಿಂದ ಉತ್ಸವ ಮಾಡುವ ಮೂಲಕ ರಥದ ಬೀದಿಗೆ ಉತ್ಸವ ಮೂರ್ತಿಗಳನ್ನು ಕರೆತರಲಾಯಿತು. ಆಕರ್ಷಕ ಪುಷ್ಪಗಳಿಂದ ಅಲಂಕೃತಗೊಂಡಿದ್ದ ರಥಗಳಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ನಂತರ ತಹಶೀಲ್ದಾರ್ ಕುಂಞಿ ಅಹಮದ್ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಬಳಿಕ ಗ್ರಾಮದ ಮಧ್ಯಭಾಗದಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಗ್ರಾಮದ ಪ್ರಮುಖ ರಸ್ತೆಗಳನ್ನು ವಿದ್ಯುತ್ ದೀಪಗಳು ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಸಂಜೆ ರಥಗಳನ್ನು ಮರಳಿ ಸ್ವಸ್ಥಾನಕ್ಕೆ ನಿಲ್ಲಿಸಿದ ನಂತರ ಹಂಸ ವಾಹನದ ಮೂಲಕ ಶಾಂತೋತ್ಸವ ನಡೆಸಿ ಉತ್ಸವ ಮೂರ್ತಿಯನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು.
ಬೆಟ್ಟವೇರಿದ ಭಕ್ತರು: ಜಾತ್ರಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ರಾತ್ರಿಯಿಂದ ಶನಿವಾರ ಸಂಜೆಯವರೆಗೂ ಸಾವಿರಾರು ಭಕ್ತರು 3,600 ಮೆಟ್ಟಿಲುಗಳನ್ನು ಏರಿ ಸಿಡಿಲು ಮಲ್ಲಿಕಾರ್ಜುನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ರಥದ ಬೀದಿಯಲ್ಲಿ ಸಾರ್ವಜನಿಕರು, ದೇವಾಲಯದ ಸಮಿತಿ ಹಾಗೂ ಸಂಘ ಸಂಸ್ಥೆಗಳು ಮಜ್ಜಿಗೆ, ಪಾನಕ ಹಾಗೂ ಪ್ರಸಾದ ವಿನಿಯೋಗ ನೆರವೇರಿಸಿದರು.