NEWSನಮ್ಮಜಿಲ್ಲೆನಮ್ಮರಾಜ್ಯ

ಮಾಡಾಳ್ ವಿರೂಪಾಕ್ಷಪ್ಪ, ದೇವೇಂದ್ರಪ್ಪ ಪ್ರಕರಣಗಳ ಮರುತನಿಖೆಗೆ ಆಗ್ರಹಿಸಿ ಎಎಪಿ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಪ್ರಾಸಿಕ್ಯೂಷನ್ ಅನುಮತಿ ನೀಡುವ ವಿಚಾರದಲ್ಲಿನ ಲೋಪದಿಂದಾಗಿ ಮಾಡಾಳ್ ವಿರೂಪಾಕ್ಷಪ್ಪ ಮತ್ತು ದೇವೇಂದ್ರಪ್ಪ ಸೇರಿದಂತೆ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟಾಚಾರ ಪ್ರಕರಣಗಳು ನ್ಯಾಯಾಲಯಗಳಲ್ಲಿ ವಜಾ ಆಗುತ್ತಿರುವುದು ಬೇಸರದ ಸಂಗತಿ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಹೇಳಿದರು.

ಪ್ರಾಸಿಕ್ಯೂಷನ್ ಅನುಮತಿ ನೀಡುವಲ್ಲಿ ಆಗುತ್ತಿರುವ ಲೋಪದಿಂದಾಗಿ ಭ್ರಷ್ಟಾಚಾರಿಗಳ ವಿರುದ್ಧದ ಪ್ರಕರಣಗಳು ನ್ಯಾಯಾಲಯದಲ್ಲಿ ವಜಾ ಆಗುತ್ತಿದ್ದು, ಲೋಕಾಯುಕ್ತ ಹಾಗೂ ರಾಜ್ಯ ಸರ್ಕಾರ ಭ್ರಷ್ಟರಿಗೆ ಕಠಿಣ ಶಿಕ್ಷೆ ಕೊಡಿಸುವಲ್ಲಿ ವಿಫಲವಾಗುತ್ತಿರುವುದನ್ನು ಖಂಡಿಸಿ ಆಮ್ ಆದ್ಮಿ ಪಕ್ಷವು ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿತು.

ಈ ವೇಳೆ ಮಾತನಾಡಿದ ಮೋಹನ್ ದಾಸರಿ ಅವರು, ನೂರಾರು ಕೋಟಿ ಲೂಟಿ ಮಾಡಿರುವ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಪ್ರಕರಣವನ್ನು ಪ್ರಾಸಿಕ್ಯೂಷನ್ ಅನುಮತಿ ಪಡೆದಿಲ್ಲ ಎಂದು ರದ್ದು ಮಾಡಲಾಗುತ್ತದೆ. ದೇವೇಂದ್ರಪ್ಪ ಮೇಲೆ ದಾಳಿಯಾದಾಗ ಕರ್ನಾಟಕದಾದ್ಯಂತ ದೊಡ್ಡ ಮಟ್ಟದ ಸುದ್ದಿಯಾಗಿತ್ತು.

ದೇವೇಂದ್ರಪ್ಪ ಅವರು 20 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಆದರೂ, ರಾಜಾರೋಷವಾಗಿ ಅವರೀಗ ಹೊರಗಿದ್ದಾರೆ. ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರುವಂತೆ ಮಾಡಿದ್ದು ಸಂತೋಷ್ ಹೆಗಡೆ ಅವರಿದ್ದ ಲೋಕಾಯುಕ್ತ ಸಂಸ್ಥೆ.

ಆಗ ಲೋಕಾಯುಕ್ತ ಎಂದರೆ ಎಲ್ಲರಿಗೂ ಭಯವಿತ್ತು. ಆದರೆ, ಸಿದ್ದರಾಮಯ್ಯ ಅವರು ಎಸಿಬಿ ರಚಿಸಿ, ಲೋಕಾಯುಕ್ತ ಸಂಸ್ಥೆಯನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿದರು. ಎಸಿಬಿ ರದ್ದು ಬಳಿಕವೂ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಿಲ್ಲ ಎಂದು ದೂರಿದರು.

ನಂತರ ಬಂದ ಬಿಜೆಪಿ ಸರ್ಕಾರ ಕೋವಿಡ್ ಅವಧಿಯಲ್ಲಿ ಹಗರಣಗಳನ್ನು ಮಾಡಿತು. 45 ರೂ. ಬೆಲೆ ಬಾಳುವ ಮಾಸ್ಕ್‌ಗೆ 450 ರೂ. ಬಿಲ್ ಮಾಡಲಾಗಿತ್ತು ಎಂದು ಅದೇ ಪಕ್ಷದ ನಾಯಕರೇ ಹೇಳಿದ್ದಾರೆ. ಹಗರಣಳಾಗಿವೆ ಎಂದು ಬಿಜೆಪಿ ನಾಯಕರೇ ಹೇಳಿದ್ದರೂ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ತಲೆಕೆಡಿಸಿಕೊಳ್ಳುತ್ತಿಲ್ಲ. ಬಿಜೆಪಿಯವರನ್ನೂ ಸೇರಿ ನಮ್ಮನ್ನು ನಾವು ಕಾಪಾಡಿಕೊಳ್ಳುತ್ತೇವೆ ಎಂದು ಸುಮ್ಮನಿದ್ದಾರೆ ಎಂದು ಮೋಹನ್ ದಾಸರಿ ಹೇಳಿದರು.

ರಾಜಕೀಯ ಲಾಭಕ್ಕಾಗಿ, ವಿಪಕ್ಷ ನಾಯಕರನ್ನು ಗುರಿಯಾಗಿಸಲು ಬಿಜೆಪಿಯವರು ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ಆಗಿರುವ ಹಗರಣಗಳನ್ನೂ ಈಗ ಮುಚ್ಚಿಹಾಕಲಾಗುತ್ತಿದೆ. ಅಡಕೆ ಮಾರಿ ಆರೂವರೆ ಕೋಟಿ ರೂ. ಹಣವನ್ನು ಮನೆಯಲ್ಲಿಟ್ಟುಕೊಂಡಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರು ಯಾವ ಸೀಮೆಯ ರೈತ. ಸಿದ್ದರಾಮಯ್ಯ ಅವರಿಗೆ ರಾಜ್ಯದ ಜನರ ಬಗ್ಗೆ ಯಾವುದೇ ಕಾಳಜಿ ಕಾಣಿಸುತ್ತಿಲ್ಲ. ಈಗಲಾದರೂ ಬಿಜೆಪಿ ನಾಯಕರ ಭ್ರಷ್ಟಾಚಾರದ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಲೋಕಾಯುಕ್ತ ನ್ಯಾಯಾಲಯದಲ್ಲಿ ಹಲವಾರು ಪ್ರಕರಣಗಳು ಬಾಕಿ ಇವೆ. ರಾಜ್ಯದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ, ಸಿದ್ದರಾಮಯ್ಯ ಅವರು ಲೋಕಾಯುಕ್ತದಲ್ಲಿ ಉಳಿದಿರುವ ಎಲ್ಲಾ ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲು ಒಪ್ಪಿಗೆ ನೀಡಲಿ. ಭ್ರಷ್ಟರನ್ನು ಬೆಂಬಲಿಸುವ ರಾಜ್ಯ ಕಂಡ ಭ್ರಷ್ಟ ಸಿಎಂ ಎಂದು ಸಿದ್ದರಾಮಯ್ಯ ಅವರು ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ನಕಲಿ ಗ್ಯಾರಂಟಿಗಳ ಮೂಲಕ ರಾಜ್ಯವನ್ನು ಉದ್ಧಾರ ಮಾಡಲು ಸಾಧ್ಯವಿಲ್ಲ. ಈಗಲೂ ಕಾಲ ಮಿಂಚಿಲ್ಲ. ಇಡೀ ರಾಜ್ಯದ ಮುಂದೆ ಬೆತ್ತಲಾಗಿದ್ದ ಭ್ರಷ್ಟಾಚಾರ ಪ್ರಕರಣಗಳನ್ನು ಮರುತನಿಖೆಗೆ ಒಳಪಡಿಸಿ. ಭ್ರಷ್ಟಾಚಾರದ ವಿರುದ್ಧ ಒಂದಾದರೂ ಒಳ್ಳೆ ಕೆಲಸ ಮಾಡಿ ರಾಜಕೀಯ ನಿವೃತ್ತಿ ಪಡೆಯಿರಿ. ಮಾಡಾಳ್ ವಿರೂಪಾಕ್ಷಪ್ಪ ಮತ್ತು ದೇವೇಂದ್ರಪ್ಪ ಪ್ರಕರಣಗಳನ್ನು ಮರುತನಿಖೆಗೆ ಒಪ್ಪಿಸಿ, ಅವರನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಿ ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಉಸ್ತುವಾರಿ ಅನಿಲ್ ನಾಚಪ್ಪ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ, ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿಮಠ, ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಮೋಹನ್, ಜಗದೀಶ್ ಚಂದ್ರ, ಅಶೋಕ್ ಮೃತ್ಯುಂಜಯ, ಶಶಿಧರ್ ಆರಾಧ್ಯ, ವಿಶ್ವನಾಥ್, ಮರಿಯಾ, ಮಹಾಲಕ್ಷ್ಮಿ, ಶ್ರೀನಿವಾಸ ರೆಡ್ಡಿ, ಮೌನೇಶ್, ದಿಲೀಪ್ ಕುಮಾರ್, ಮಂಜುರಾವ್ ಪಾಪಣ್ಣ, ಶಿವಕುಮಾರ್ ಮತ್ತು ಜ್ಯೋತಿಷ್ ಕುಮಾರ್ ಸೇರಿದಂತೆ ಎಎಪಿ ಕಾರ್ಯಕರ್ತರು ಇದ್ದರು.

Leave a Reply

error: Content is protected !!
LATEST
ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರಿಗೆ ಸಿಹಿ ಸಾರಿಗೆ ನೌಕರರಿಗೆ ನಿರಾಸೆ KRS ಅಣೆಕಟ್ಟೆಗೆ 24ಗಂಟೆಯಲ್ಲೇ ಹರಿದು ಬಂತು 2 ಟಿಎಂಸಿ ನೀರು- ಅನ್ನದಾತರ ಮೊಗದಲ್ಲಿ ಮಂದಹಾಸ ಆಗಸ್ಟ್​ 1ರಿಂದಲೇ ಸರ್ಕಾರಿ ನೌಕರರ ವೇತನ ಹೆಚ್ಚಳ: ಸಿಎಂ ಸಿದ್ದರಾಮಯ್ಯ ಆದೇಶ KKRTC ಬಸ್‌ ಡಿಕ್ಕಿ ಬೈಕ್‌ ಸವಾರ ಸಾವು ಮತ್ತೊಂದು ಘಟನೆಯಲ್ಲಿ ಡಿವೈಡರ್​​ಗೆ ಕಾರು ಡಿಕ್ಕಿ ಇಬ್ಬರು ಮೃತ, ಮೂವರಿಗೆ ಗಾಯ ಕಬಿನಿ ಜಲಾಶಯ ತುಂಬಲು ಒಂದು ಅಡಿ ಬಾಕಿ, KRSಗೆ ಹೆಚ್ಚಾಯಿತು ಒಳಹರಿವು ಮಹಿಳೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದು ಬಳಿಕ ಸುಟ್ಟುಹಾಕಿದ ಪಾಪಿಗಳು KSRTC: 2024ರ ಜ.1ರಿಂದ 1.25 ಲಕ್ಷ ನೌಕರರಿಗೆ ಆಗಬೇಕಿರುವ ವೇತನ ಪರಿಷ್ಕರಣೆ ಬಗ್ಗೆ ನಾಳೆಯ ಸಚಿವ ಸಂಪುಟ ಸಭೆಯಲ್ಲಿ ಆಗಲ... ನಾಳೆ ರಾಜ್ಯ ಸಚಿವ ಸಂಪುಟ ಸಭೆ: ಸರ್ಕಾರಿ ನೌಕರರಿಗೆ ಸಿಎಂ ಕಬ್ಬು ಕೊಡುವರೋ ಇಲ್ಲ ಬೇವು ಕೊಡುವರೋ..!? KSRTC EFWA: ಉತ್ತಮ ವಿದ್ಯೆ ಪಡೆದು ಉನ್ನತ ಹುದ್ದೆಗೇರಿ - ಸಾರಿಗೆ ನೌಕರರ ಮಕ್ಕಳ ಸನ್ಮಾನಿಸಿದ ಸಚಿವ ರಾಮಲಿಂಗಾರೆಡ್ಡಿ ... ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯ ಯಾವುದೂ ಇಲ್ಲ: ಪುರಸಭೆ ಮಾಜಿ ಸದಸ್ಯ ನೀಲಕಂಠ