ಬೆಂಗಳೂರು: ರಾಷ್ಟ್ರೀಯ ಸಂಘರ್ಷ ಸಮಿತಿ ಹಾಗೂ ಬಿಎಂಟಿಸಿ & ಕೆಎಸ್‌ಆರ್‌ಟಿಸಿ ವತಿಯಿಂದ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆಯನ್ನು ಮೇ 27 ರಂದು ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಪಾರ್ಲಿಮೆಂಟ್ ಚುನಾವಣೆ ಮುಗಿಯುತ್ತಾ ಬಂದಿದ್ದು, ಇನ್ನೊಂದು ವಾರದಲ್ಲಿ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಇನ್ನು ಮುಂದೆ ಕೇಂದ್ರ ಸರ್ಕಾರವೇ ಆಗಲಿ, ಇಪಿಎಫ್ಒ ಅಧಿಕಾರಿಗಳೇ ಆಗಲಿ, ನಮ್ಮ ಬೇಡಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಸಬೂಬು ನೀಡುವಂತಿಲ್ಲ.
ಸರ್ವೋಚ್ಚ ನ್ಯಾಯಾಲಯದ ತೀರ್ಪು ಅಕ್ಟೋಬರ್(october) 04-2016 & ನವಂಬರ್ 04-2022 ಕ್ರಮವಾಗಿ ಆರ್.ಸಿ.ಗುಪ್ತ ಹಾಗೂ ಸುನಿಲ್ ಕುಮಾರ್ ಪ್ರಕರಣಗಳನ್ನು ಕೂಡಲೇ ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು ಎಂದು ಬಿಎಂಟಿಸಿ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ಆಗ್ರಹಿಸಿದ್ದಾರೆ.
ಇಪಿಎಸ್ ನಿವೃತ್ತರ ಹೆಚ್ಚುವರಿ ಪಿಂಚಣಿಗೆ ಸಂಬಂಧಿಸಿದಂತೆ ಇಪಿಎಫ್ಒ ಅಧಿಕಾರಿಗಳು ತಾವೇ ನಿಗದಿಪಡಿಸಿಕೊಂಡಿದ್ದ ಗಡುವು ಮೇ 31 ಕ್ಕೆ ಮುಕ್ತಾಯವಾಗಲಿದ್ದು, ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಎಲ್ಲ ಇಪಿಎಸ್ ನಿವೃತ್ತರಿಗೆ ಡಿಮ್ಯಾಂಡ್(demand) ನೋಟಿಸ್ ನೀಡಿ, ನಾವು ಪಾವತಿಸಬೇಕಾದ ದೇಣಿಗೆ ಮೊಬಲಗು, ಪ್ರತಿಯಾಗಿ ತಮ್ಮ ಕಚೇರಿಯಿಂದ ನಮಗೆ ಪಾವತಿಸುವ ಬಾಕಿ ಪಿಂಚಣಿ ಹಾಗೂ ಮಾಸಿಕ ಪಿಂಚಣಿ ಮೊತ್ತಕ್ಕೆ ಸಂಬಂಧಿಸಿದಂತೆ ಲೆಕ್ಕ ತಕ್ತೆ ( calculation memo) ಇವೆಲ್ಲವನ್ನು ಕೂಡಲೇ ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.
ಇನ್ನು ನಮ್ಮ ತಾಳ್ಮೆಯನ್ನು ಪರೀಕ್ಷಿಸುವ ಕಾಲ ಈಗಾಗಲೇ ಮುಗಿದುಹೋಗಿದೆ. ಇಪಿಎಫ್ಒ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿ, ಮೇ 27 ರಂದು “ನಿಧಿ ಆಪ್ಕೆ ನಿಕಟ್” ಕಾರ್ಯಕ್ರಮವನ್ನು ದೇಶಾದ್ಯಂತ ಇರುವ ಎಲ್ಲ ಪಿಎಫ್ ಕಚೇರಿ ಆವರಣದಲ್ಲಿ ನಡೆಸುತ್ತಿದ್ದು, ನಿವೃತ್ತರ ಎಲ್ಲ ಕುಂದುಕೊರತೆಗಳನ್ನು ಬಗೆಹರಿಸುತ್ತೇವೆ ಎಂದು ಪ್ರಚೂರಾಪಡಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ, ರಾಷ್ಟ್ರೀಯ ಸಂಘರ್ಷ ಸಮಿತಿ ವತಿಯಿಂದ, ನವದೆಹಲಿಯಲ್ಲಿ ನಮ್ಮ ಮುಖಂಡರು ಕೈಗೊಂಡಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಕೇಂದ್ರ ಕಾರ್ಮಿಕ ಹಾಗೂ ಕಾರ್ಮಿಕ ಸಚಿವರು, (minister for labour & employment) ಕೈ ಬಿಡಿಸಿ, ಸಂಧಾನದ ಮೂಲಕ ನಿವೃತ್ತರ ಎಲ್ಲ ಬೇಡಿಕೆಗಳನ್ನು ಈಡೇರಿಸಿ ಕೊಡುವುದಾಗಿ ವಾಗ್ದಾನ ನೀಡಿದ್ದರು.
ಆದರೆ, 7500 ರೂ.ಗಳ ಭತ್ಯ, ವೈದ್ಯಕೀಯ ಸೌಲಭ್ಯ ಇದುವರೆಗೂ ಈ ಬೇಡಿಕೆಗಳ ಬಗ್ಗೆ ನಿರ್ಧಾರ ಕೈಗೊಳ್ಳದೆ ಇರುವುದು ನಿವೃತ್ತರ ಆಕ್ರೋಶಕ್ಕೆ ಕಾರಣವಾಗಿದೆ. ನಾವು ಅಧಿಕಾರಿಗಳ ಮೂಲಕ ಸಚಿವರಿಗೆ 14 ಮನವಿ ಪತ್ರಗಳನ್ನು ನೀಡಿದ್ದರೂ ಸಹ ತಮ್ಮ ಕಚೇರಿಯಿಂದ ಯಾವುದೇ ಸ್ಪಂದನೆ ಇಲ್ಲ.
ಹೀಗಾಗಿ ಎಲ್ಲ ಇಪಿಎಸ್ ನಿವೃತ್ತರು ಎಚ್ಚೆತ್ತುಕೊಂಡು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ರಾಷ್ಟ್ರೀಯ ಸಂಘರ್ಷ ಸಮಿತಿ ಮುಖ್ಯ ಸಂಯೋಜಕರಾದ ರಮಾಕಾಂತ ನರಗುಂದ ಹಾಗೂ ರಾಜ್ಯಾಧ್ಯಕ್ಷ ಜಿ.ಎಸ್.ಎಂ. ಸ್ವಾಮಿ ಇತರೆ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇಪಿಎಸ್ ನಿವೃತ್ತರ ಈ ಎಲ್ಲ ಬೇಡಿಕೆಗಳ ಈಡೇರಿಕೆ ಸಂಬಂಧ ಮೇ 27 ರಂದು ಬೆಳಗ್ಗೆ 11 ಗಂಟೆಗೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಜರುಗುವ ಬೃಹತ್ ಪ್ರತಿಭಟನೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ನಂಜುಡೇಗೌಡ ಮನವಿ ಮಾಡಿದ್ದಾರೆ.