NEWSನಮ್ಮರಾಜ್ಯ

BMTC‍‍ & KSRTC- ಕನಿಷ್ಠ ಪಿಂಚಣಿಗಾಗಿ ಇಷ್ಟರಲ್ಲೇ ನಿವೃತ್ತ ನೌಕರರ ಬೃಹತ್ ಪ್ರತಿಭಟನೆ: ಜೆಎಸ್ಎಂ ಸ್ವಾಮಿ

ವಿಜಯಪಥ ಸಮಗ್ರ ಸುದ್ದಿ
  • ಇಪಿಎಸ್ ಪಿಂಚಣಿದಾರರ 87ನೇ ಮಾಸಿಕ ಸಭೆಯಲ್ಲಿ ಘೋಷಣೆ

ಬೆಂಗಳೂರು: ಸದ್ಯದಲ್ಲೇ ನಿವೃತ್ತ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆಯನ್ನು ನಗರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಎನ್ಎಸಿ ರಾಜ್ಯಾಧ್ಯಕ್ಷ ಜೆಎಸ್ಎಂ ಸ್ವಾಮಿ ತಿಳಿಸಿದ್ದಾರೆ.

ಏ.6ರ ಶ್ರೀ ರಾಮನವಮಿಯಂದು ಲಾಲ್ ಬಾಗ್ ಆವರಣದಲ್ಲಿ ಆಯೋಜಿಸಿದ್ದ ಇಪಿಎಸ್ ಪಿಂಚಣಿದಾರರ 87ನೇ ಮಾಸಿಕ ಸಭೆಯಲ್ಲಿ ಮಾತನಾಡಿದರು.

ಇಪಿಎಸ್ ನಿವೃತ್ತರ ಪ್ರಮುಖ ಬೇಡಿಕೆ ₹7,500 + ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯ, ಇಪಿಎಸ್ ವ್ಯಾಪ್ತಿಯಲ್ಲಿ ಬರುವ ನಿವೃತ್ತರಿಗೆ ₹5,000 ಇದಕ್ಕೆ ನಾವು ಬದ್ಧ ಎಂದ ಜೆಎಸ್ಎಂ ಸ್ವಾಮಿ, ಎಲ್ಲ ಇಪಿಎಸ್ ನಿವೃತ್ತರನ್ನು ಸೇರಿಸಿ, ಬೃಹತ್ ಪ್ರತಿಭಟನಾ ಸಭೆಯನ್ನು ಇಷ್ಟರಲ್ಲಿಯೇ ಬೆಂಗಳೂರು ನಗರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು

ಇನ್ನು ಕಳೆದ ಏಳೆಂಟು ವರ್ಷಗಳಿಂದ ದೇಶಾದ್ಯಂತ ಇಪಿ ಎಸ್ ನಿವೃತ್ತರು ಕಮಾಂಡರ್ ಅಶೋಕ್ ರಾಹುತ್ ಅವರ ನೇತೃತ್ವದಲ್ಲಿ ನಡೆಸಿದ ಹೋರಾಟಕ್ಕೆ ಯಾವುದೇ ಪ್ರತಿಫಲ ಸಿಗದೇ ಇರುವುದಕ್ಕೆ ಬಿಎಂಟಿಸಿ & ಕೆಎಸ್‌ಆರ್‌ಟಿಸಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ಬೇಸರ ವ್ಯಕ್ತಪಡಿಸಿದರು.

ನಮ್ಮ ಎಲ್ಲ ಸಂಘಟನೆಗಳ ಸದಸ್ಯರು ಈ ಸಭೆಯಕಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಹೋರಾಟವನ್ನು ತೀವ್ರಗೊಳಿಸೋಣ ಜತೆಗೆ ಅದು ಪರಿಣಾಮಕಾರಿ ಪ್ರತಿಭಟನೆಯನ್ನಾಗಿ ರೂಪಿಸೋಣ ಎಂದು ಕರೆ ನೀಡಿದರು. ಈ ವೇಳೆ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚಿಸಲಾಯಿತು. ಮುಂದುವರಿದು ಮಾತನಾಡುತ್ತಾ, ಮತ್ತೊಂದು ಕಡೆ ಕಾನೂನು ಸಮರಕ್ಕೂ ನಾವು ಸಿದ್ಧರಿರಬೇಕು ಎಂದು ತಿಳಿಸಿದರು.

ಪ್ರತಿಯೊಂದು ಕ್ಷೇತ್ರಗಳಲ್ಲಿಯೂ, ಇಪಿಎಸ್ ನಿವೃತ್ತರು ತಮ್ಮ ಸಂಸದರಿಗೆ ಮನವಿ ಪತ್ರ ನೀಡಿ, ನಿವೃತ್ತರ ಪರ ಅಹವಾಲನ್ನು ಸಂಸತ್‌ನಲ್ಲಿ ಮಂಡಿಸುವಂತೆ, ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ಟ್ರಸ್ಟ್ ಅಧ್ಯಕ್ಷ ಬ್ರಹ್ಮಚಾರಿ ಬೇಸರ ವ್ಯಕ್ತಪಡಿಸಿದರು.

ಸಂಘದ ಖಜಾಂಚಿ ಡೋಲಪ್ಪ, ಪದಾಧಿಕಾರಿಗಳಾದ ನಾಗರಾಜು, ಮನೋಹರ್ ರುಕ್ಮೇಶ್ ಹಾಗೂ ರಮೇಶ್ ಸೇರಿದಂತೆ 200ಕ್ಕೂ ಹೆಚ್ಚು ನಿವೃತ್ತ ನೌಕರರು ಭಾಗವಹಿಸಿದರು.

ಮಾಸಿಕ ಸಭೆ ಹಾಗೂ ಶ್ರೀರಾಮನವಮಿ ಒಟ್ಟಾಗಿ ಬಂದಿದ್ದು, ತಾವು ಸೇವೆಯಲ್ಲಿರುವಾಗ ಹಬ್ಬ ಹರಿದಿನಗಳೆನ್ನದೆ, ಕರ್ತವ್ಯ ನಿರ್ವಹಿಸಿದ ದಿನಗಳನ್ನು ಮೆಲಕು ಹಾಕುತ್ತಾ, ನಿವೃತ್ತರು ಲಾಲ್ ಬಾಗ್ ಆವರಣದಲ್ಲಿ ವಾಯು ವಿಹಾರ ನಡೆಸುತ್ತಾ, ತಮ್ಮ ಹಳೆಯ ಸಹೋದ್ಯೋಗಿಗಳನ್ನು ಕಂಡೊಡನೆ ನವೊಲ್ಲಾಸದಿಂದ, ಉಭಯ ಕುಶಲೊಪರಿ ವಿಚಾರಿಸಿದ ಬಳಿಕ ಸಭೆಗೆ ಹಾಜರಾದರು.

Deva
the authorDeva

Leave a Reply

error: Content is protected !!