ಬೆಂಗಳೂರು: ಸೆ.29, 2025 ರಂದು “ನಿಧಿ ಆಪ್ಕೆ ನಿಕಟ್” ಇಪಿಎಸ್ ಪಿಂಚಣಿದಾರರ 30ನೇ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. 238ನೇ ಸಿಬಿಟಿ ಸಭೆ ಬೆಂಗಳೂರಿನಲ್ಲಿ ಅ.11,12 ರಂದು ನಡೆಯುತ್ತಿರುವುದರಿಂದ ಈ ಇಪಿಎಸ್ ನಿವೃತ್ತರ 30ನೇ ಪ್ರತಿಭಟನಾ ಸಭೆ ಅತ್ಯಂತ ಮಹತ್ವದ್ದಾಗಿದೆ ಎಂದು ನಂಜುಂಡೇಗೌಡ ತಿಳಿಸಿದ್ದಾರೆ.
ಈ ಸಂಬಂಧ ಬಿಎಂಟಿಸಿ ಹಾಗೂ ಕೆಎಸ್ಆರ್ ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ಅವರು ಇಂದು ಪತ್ರಿಕಾ ಹೇಳಿಕೆ ನೀಡಿದ್ದು, ಸಿಬಿಟಿ ಸಭೆಯ ಪ್ರಸ್ತಾವನೆಯಲ್ಲಿ ಇಪಿಎಸ್ ನಿವೃತ್ತರ ಬಹುದಿನಗಳ ಬೇಡಿಕೆಗಳ ಬಗ್ಗೆ ವಿಷಯ ಮಂಡನೆಯಾಗಿ ಚರ್ಚೆಗೆ ಬರಬೇಕು ಎಂದರು.
ಇನ್ನು ಇಪಿಎಸ್ ನಿವೃತ್ತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಸೆ.29ರ ಸೋಮವಾರ ಬೆಳಗ್ಗೆ 10:30ಕ್ಕೆ ಪ್ರತಿಭಟನೆ ಹಮ್ಮಿಕೊಂಡಿದ್ದು, ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಜರುಗುವ ಈ ಶಾಂತಿಯುತ ಪ್ರತಿಭಟನೆ ಹಾಗೂ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರದ ಸಚಿವರಿಗೆ ಮನವಿ ಸಲ್ಲಿಸುವ ಸಭೆಗೆ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.
ಇನ್ನು ಇಪಿಎಸ್ ನಿವೃತ್ತರ ಕನಿಷ್ಠ ಪಿಂಚಣಿ 7,500 ರೂ.ಗಳು + ಭತ್ಯೆ ಹಾಗೂ ಆರೋಗ್ಯ ಸೌಲಭ್ಯ, ವ್ಯಾಪ್ತಿಯಲ್ಲಿ ಬರದ ನಿವೃತ್ತರಿಗೆ ₹5000 ನೀಡಬೇಕು. ಜಂಟಿ ಆಯ್ಕೆ ಪತ್ರ ಸಲ್ಲಿಸಿರುವ ಎಲ್ಲ ಇಪಿಎಸ್ ನಿವೃತ್ತರಿಗೆ ಇತ್ತೀಚಿನ ನ್ಯಾಯಾಲಯದ ತೀರ್ಪಿನ ಪ್ರಕಾರ ಅಧಿಕ ಹೆಚ್ಚುವರಿ ಪಿಂಚಣಿ ನೀಡಬೇಕು. ಅದಕ್ಕಾಗಿ ಈ ಪ್ರತಿಭಟನಾ ಸಭೆ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್, ಚಿಕ್ಕಬಳ್ಳಾಪುರ ವತಿಯಿಂದ ಆಯೋಜಿಸಿರುವ, ಇಪಿಎಸ್ ನಿವೃತ್ತರ ಪ್ರತಿಭಟನಾ ಸಭೆ ಹಾಗೂ ಮನವಿ ಪತ್ರ ಸಲ್ಲಿಸುವ ಮೂಲಕ ನಮ್ಮ ಕೂಗು ನವದೆಹಲಿಗೆ ತಲಪಬೇಕು, ಹಾಗಾಗಿ ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಅಧಿಕ ಪಿಂಚಣಿ ಈ ಎರಡು ಅಂಶಗಳಿಗೆ ಸಂಬಂಧಿಸಿದಂತೆ ಶಾಂತಿಯುತ ಬೃಹತ್ ಪ್ರತಿಭಟನೆ ಹಾಗೂ ಮನವಿಪತ್ರ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪ್ರತಿಭಟನಾ ಸಭೆಗೆ ನಮ್ಮ ಸಂಘದ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘಟನೆಗಳ ಎಲ್ಲ ಇಪಿಎಸ್ ನಿವೃತ್ತರು, ಕಂಪನಿ ಹಾಗೂ ಕಾರ್ಖಾನೆಗಳ ನಿವೃತ್ತರು ಆಗಮಿಸಲಿದ್ದಾರೆ. ಇನ್ನು ಸಿಬಿಟಿ ಸಭೆಯಲ್ಲಿ ನಮ್ಮ ಹಕ್ಕೋತ್ತಾಯಕ್ಕೆ ಅಗ್ರಹಿಸಿ ಪ್ರತಿಭಟಿಸಲಾಗುವುದು ಎಂದಿದ್ದಾರೆ.

ಈ ನಮ್ಮ ಹೋರಾಟ ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಹೈಯರ್ ಪಿಂಚಣಿ (ನ್ಯಾಯಾಲಯದ ತೀರ್ಪಿನ ಪ್ರಕಾರ) ಎರಡೂ ಅಂಶಗಳು ಈಡೇರುವವರೆಗೂ ಈ ಹೋರಾಟ ನಿಲ್ಲದು. ಈ ದೆಶೆಯಲ್ಲಿ ಎಲ್ಲ ಇಪಿಎಸ್ ನಿವೃತ್ತರು ಸಂಘಟಿತರಾಗಿ ಹೋರಾಟವನ್ನು ತೀವ್ರಗೊಳಿಸುವುದು ಅವಶ್ಯಕವಾಗಿದೆ. ನಮ್ಮ ಹೋರಾಟದ ಸಂದೇಶ ದೆಹಲಿ ತಲುಪಬೇಕು ಈ ದೃಷ್ಟಿಯಿಂದ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.
Related
