ಬೆಂಗಳೂರು: ಎಪ್ಪತ್ತು-ಎಂಬತ್ತರ ವೃದ್ಧರು ಕನಿಷ್ಠ ಪಿಂಚಣಿಗಾಗಿ ನಗರದ ಇಪಿಎಫ್ಒ ಕಚೇರಿ ಆವರಣದಲ್ಲಿ ವಿನೂತನ ಪ್ರತಿಭಟನೆ ಮಾಡಿ ಕೇಂದ್ರ ಸರ್ಕಾರಕ್ಕೆ ತಮ್ಮ ಇಳಿ ವಯಸ್ಸಿನಲ್ಲಿಯೂ ಸಂದೇಶ ಕಳುಹಿಸಿದ್ದಾರೆ.
ಇಪಿಎಸ್ ನೂರಾರು ಪಿಂಚಣಿದಾರರು ಇಪಿಎಫ್ಒ ಕಚೇರಿ ಆವರಣದಲ್ಲಿ ಬುಧವಾರ ಸಮಾವೇಶಗೊಂಡು ಈ ವೃದ್ಧಾಪ್ಯದಲ್ಲೂ ನಮಗೆ ನೆಮ್ಮದಿಯ ಜೀವನ ನಡೆಸುವುದಕ್ಕೆ ಆಗದ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ತಂದಿದ್ದು ಭಾರಿ ನೋವು ತರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಇಪಿಎಸ್ ಪಿಂಚಣಿದಾರರ ಈ ವಿನೂತನ ಪ್ರತಿಭಟನೆ ಪಾರ್ಲಿಮೆಂಟ್ ಅಧಿವೇಶನ ನಡೆಯುತ್ತಿರುವ ಹೊತ್ತಿನಲ್ಲಿ ಭಾರಿ ಗಮನ ಸೆಳೆಯುತ್ತಿರುವುದು ನಮ್ಮ ಬೇಡಿಕೆಗಳನ್ನು ಎಲ್ಲೋ ಒಂದು ಕಡೆ ಸರ್ಕಾರ ಈಡೇರಿಸುತ್ತದೆ ಎಂಬ ಆಶಾಭಾವನೆಯನ್ನು ಹುಟ್ಟಿಸುತ್ತಿದೆ ಎಂದು ಪ್ರತಿಭಟನಾ ನಿರತ ಹಿರಿಯ ಜೀವಗಳು ಹೇಳಿದವು.
ಇಲ್ಲಿ ನಾವಷ್ಟೇ ಈ ಪ್ರತಿಭಟನೆ ಮಾಡುತ್ತಿಲ್ಲ ಗಾಢ ನಿದ್ರೆಯಲ್ಲಿ ಮಲಗಿರುವಂತೆ ನಾಟಕವಾಡುತ್ತಿರುವ ಕೇಂದ್ರ ಸರ್ಕಾರವನ್ನು ಬಡಿದೆಬ್ಬಿಸಲು ದೇಶಾದ್ಯಂತ ಎಲ್ಲ ಇಪಿಎಸ್ ನಿವೃತ್ತರು ಪ್ರತಿಭಟನೆ ಮಾಡುತ್ತಿದ್ದೇವೆ. ಈ ಮೂಲಕ ನಮ್ಮ ಬೇಡಿಕೆಯ ಮನವಿ ಪತ್ರವನ್ನು ಕೇಂದ್ರ ಸರ್ಕಾರದ ( Minister for Labour & Employment) ಉದ್ಯೋಗ ಹಾಗೂ ಕಾರ್ಮಿಕ ಸಚಿವರಿಗೆ ನೀಡುತ್ತಿದ್ದೇವೆ.
ಈ ನಮ್ಮ ಪ್ರತಿಭಟನೆಯ ನೇತೃತ್ವವನ್ನು ಎನ್ಎಸಿ ಮುಖ್ಯಸ್ಥ ಕಮಾಂಡರ್ ಅಶೋಕ್ ರಾಹುತ್ ಅವರು ವಹಿಸಿದ್ದು, ಈ ಹಿನ್ನೆಲೆಯಲ್ಲಿ ಇಂದು ನಗರದ ರಿಚ್ಮಂಡ್ ವೃತ್ತದ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ, ಬೇಸಿಗೆಯ ಮಧ್ಯಾಹ್ನದ ಕಡುಬಿಸಿಲಿನಲ್ಲಿ ಎಪ್ಪತ್ತು-ಎಂಬತ್ತರ ಇಳಿವಯಸ್ಸಿನಲ್ಲೂ ನಾವು ವೃದ್ಧರು ಎಂಬುವುದನ್ನು ಲೆಕ್ಕಿಸದೆ ಪಥ ಸಂಚಲನ ನಡೆಸುವ ಮೂಲಕ ಧಿಕ್ಕಾರದ ಘೋಷಣೆಯೊಂದಿಗೆ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಸಂಘದ ಖಜಾಂಚಿ ಡೋಲಪ್ಪನವರು ಎಲ್ಲ ಮುಖಂಡರು ಹಾಗೂ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರೆ, ಎನ್ಎಸಿ ಮುಖ್ಯ ಸಂಯೋಜಕ ರಮಾಕಾತ ನರಗುಂದ ಅವರು ಎಲ್ಲ ಇಪಿಎಸ್ ನಿವೃತ್ತರನ್ನು ಉದ್ದೇಶಿಸಿ, ನಮ್ಮ ಎಲ್ಲ ಬೇಡಿಕೆಗಳ ಈಡೇರಿಕೆಗೆ ಏ.30 ರವರೆಗೆ ಅಂತಿಮ ಗಡುವು ನೀಡಿದ್ದು, ಅಷ್ಟರಲ್ಲಿ ಕೇಂದ್ರ ಸರ್ಕಾರ ಕ್ರಮ ವಹಿಸದೆ ಇದ್ದಲ್ಲಿ, ನಮ್ಮ ಮುಂದಿನ ನಡೆ, ಮತ್ತೊಂದು ತಿರುವು ಪಡೆಯುವುದು ಎಂದು ಎಚ್ಚರಿಕೆ ನೀಡಿದರು.

ಸಯಂಮ, ಶಿಸ್ತು ಮತ್ತು ಶಾಂತಿಗೆ ಹೆಸರಾದ ಕೆಎಸ್ಆರ್‌ಟಿಸಿ & ಬಿಎಂಟಿಸಿ ಹಾಗೂ ಇತರೆ ಹತ್ತಾರು ಕಂಪನಿಗಳ ನೂರಾರು ಇಪಿಎಸ್ ನಿವೃತ್ತರನ್ನು ಉದ್ದೇಶಿಸಿ ಸಂಘದ ಅಧ್ಯಕ್ಷ ನಂಜುಂಡೇಗೌಡ ಮಾತನಾಡಿ, ಅಧಿಕ ಪಿಂಚಣಿಗೆ ಸಂಬಂಧಿಸಿದಂತೆ, ಕಾನೂನು ಹೋರಾಟ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಇಷ್ಟಕ್ಕೆಲ್ಲ ಕಾರಣರಾಗಿರುವ ಇಪಿಎಫ್ಒ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಆಗಲಿದೆ ಎಂಬ ಎಚ್ಚರಿಕೆ ನೀಡಿದರು.
ಕನಿಷ್ಠ ಹೆಚ್ಚುವರಿ ಪಿಂಚಣಿ ಬಗ್ಗೆ ನಮ್ಮ ನಾಯಕರು ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಚಿವರ ಜತೆ ಚರ್ಚೆ ನಡೆಸುತ್ತಿದ್ದು, ಎಲ್ಲವೂ ಫಲಪ್ರದವಾಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಸರ್ವೋಚ್ಚ ನ್ಯಾಯಾಲಯವು ಸುನಿಲ್ ಕುಮಾರ್ ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡು, ನಮ್ಮ ಜಂಟಿ ಆಯ್ಕೆ ಪತ್ರವನ್ನು ವಜಾಗೊಳಿಸುವ ಮೂಲಕ ತಪ್ಪೇಸಗಿದ್ದು, ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಅಧಿಕಾರಿಗಳು ಅನುಭವಿಸಬೇಕಾಗುತ್ತದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ಬಣ್ಣ ಗುಡುಗಿದರು.
ಇಪಿಎಸ್ ನಿವೃತ್ತರು ನಡೆಸುತ್ತಿರುವ ಹೋರಾಟ ಶೀಘ್ರವೇ ತಾರ್ಕಿಕ ಅಂತ್ಯ ಕಾಣಲಿದೆ ಎಂಬ ಆಶಯ ವ್ಯಕ್ತಪಡಿಸಿದ ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಟ್ರಸ್ಟ್ ಅಧ್ಯಕ್ಷ ಬ್ರಹ್ಮಚಾರಿ ಒಂದು ವೇಳೆ ನಮ್ಮ ಯೋಚನೆ ಕೈಗೂಡದೆ ಹೋದಲ್ಲಿ ಉಗ್ರ ಹೋರಾಟಕ್ಕೆ ಸಿದ್ದ, ಎಂಬ ಸಂದೇಶ ನೀಡಿದರು.
ಈ ಇಳಿ ವಯಸ್ಸಿನಲ್ಲಿ ಇಪಿಎಸ್ ನಿವೃತ್ತರು ನಡೆಸುತ್ತಿರುವ ಹೋರಾಟವನ್ನು ಕಂಡ ಅಧಿಕಾರಿಗಳು ದುಃಖ ಬರಿತರಾಗಿ, ನಮ್ಮ ಮನವಿ ಪತ್ರವನ್ನು ಸ್ವೀಕರಿಸುತ್ತಾ, ಶೀಘ್ರ ನಿಮ್ಮ ಬೇಡಿಕೆಗಳು ಈಡೇರಲಿ. ಈ ನಿಟ್ಟಿನಲ್ಲಿ ನಾವು ಕೂಡ ನಿಮ್ಮ ಎಲ್ಲ ಮನವಿ ಪತ್ರಗಳನ್ನು ಕೂಡಲೇ ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಕಳಿಸಿ ಕೊಡುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಿಎಂಟಿಸಿ & ಕೆಎಸ್‌ಆರ್‌ಟಿಸಿ, ಹಾಗೂ ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಟ್ರಸ್ಟ್ ಪದಾಧಿಕಾರಿಗಳು, ನಾಗರಾಜು ರುಕ್ಮೇಶ್, ಮನೋಹರ್, ಕೃಷ್ಣಮೂರ್ತಿ, ಸೊಣ್ಣಪ್ಪ, ರಮೇಶ್ ಸೇರಿದಂತೆ ನೂರಾರು ನಿವೃತ್ತರು ಭಾಗವಹಿಸಿದ್ದರು.
Related

 










