ಬೆಂಗಳೂರು: ರಾಷ್ಟ್ರೀಯ ಸಂಘರ್ಷ ಸಮಿತಿ, ಬಿಎಂಟಿಸಿ & ಕೆಎಸ್ಆರ್ಟಿಸಿ ಹಾಗೂ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಸಂಘ, ಚಿಕ್ಕಬಳ್ಳಾಪುರ ವತಿಯಿಂದ ಆಯೋಜಿಸಿದ್ದ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ ನಗರದ ರಿಚ್ಮಂಡ್ ವೃತ್ತದ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಜರುಗಿತು.
ಅ.28ರಂದು “ನಿಧಿ ಆಪ್ಕೆ ನಿಕಟ್” ಕಾರ್ಯಕ್ರಮದಂದು ಜರುಗಿದ ಈ ಬೃಹತ್ ಪ್ರತಿಭಟನೆಯಲ್ಲಿ ಸಂಯಮ, ಶಿಸ್ತು ಮತ್ತು ಶಾಂತಿಗೆ ಹೆಸರಾದ ಕೆಎಸ್ಆರ್ಟಿಸಿ, ಬಿಎಂಟಿಸಿ ಹಾಗೂ ಇತರೆ ಹತ್ತಾರು ಕಂಪನಿಗಳ ಸಾವಿರಾರು ನಿವೃತ್ತ ನೌಕರರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನಿವೃತ್ತರ ಆಕ್ರೋಶ (akrosha)ದ ಕಟ್ಟೆ ಒಡೆದಿತ್ತು.
ಈ ಪ್ರತಿಭಟನೆಗೆ ಸಮರೋಪಾದಿಯಲ್ಲಿ ಜನಸಾಗರವೇ ನೆರೆದಿತ್ತು. ನಿವೃತ್ತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಚೇರಿ ಆವರಣದಲ್ಲಿ ಪಥಸಂಚಲನ ನಡೆಸುತ್ತಾ, ಅಧಿಕಾರಿಗಳ ವಿರುದ್ಧ ಕೂಗಿದ ಧಿಕ್ಕಾರದ ಘೋಷಣೆ ಮಾರ್ದನಿಸಿತು. ಸಂಘದ ಪ್ರಧಾನ ಕಾರ್ಯದರ್ಶಿ ಡೋಲಪ್ಪನವರು ಎಲ್ಲ ಮುಖಂಡರು ಹಾಗೂ ಪ್ರತಿಭಟನಾಕಾರರನ್ನು ಸ್ವಾಗತಿಸಿ, ಹೋರಾಟದ ರೂಪುರೇಷೆ ಬಗ್ಗೆ ವಿವರಿಸಿದರು.
ಈ ದಿನವೇ ನಮ್ಮ ನೇತಾರರಾದ ಕಮಾಂಡರ್ ಶ್ರೀ ಅಶೋಕ್ ರಾಹುತ್ ಅವರ ಜನ್ಮ ದಿನಾಚರಣೆ ಇದ್ದು, ದೇಶಾದ್ಯಂತ ಎನ್ಎಸಿ ಸಂಘಟನೆಯನ್ನು ಸ್ಥಾಪಿಸಿ, ಇಪಿಎಸ್ ನಿವೃತ್ತರಲ್ಲಿ ಜಾಗೃತಿ ಮೂಡಿಸಿದ ಕೀರ್ತಿ ರಾಹುತ್ ಅವರಿಗೆ ಸಲ್ಲುತ್ತದೆ ಎಂದು ಕಾರ್ಯಾಧ್ಯಕ್ಷರಾದ ನಂಜುಂಡೇಗೌಡ ಹೇಳಿದರು.
ಇನ್ನು ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪನ್ನು ಇಪಿಎಫ್ ಅಧಿಕಾರಿಗಳು ಎರಡು ವರ್ಷ ಕಳೆದರೂ ಯಾವುದೇ ಕ್ರಮ ವಹಿಸದೆ ಇರುವ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿ, ಕೇಂದ್ರ ಸರ್ಕಾರದ ಉದ್ಯೋಗ ಮತ್ತು ಕಾರ್ಮಿಕ ಖಾತೆ ಸಚಿವ (Minister for labour and employment) ಮುನ್ಸುಖ್ ಮಾಂಡವೀಯಾ ಅವರು ಇತ್ತೀಚೆಗೆ ಹೇಳಿಕೆ ನೀಡಿ, ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಎಲ್ಲ ಇಪಿಎಸ್ ಪಿಂಚಣಿದಾರರ ಬೇಡಿಕೆಯನ್ನು ಈಡೇರಿಸಲು ಕೇಂದ್ರಸರ್ಕಾರ ತನ್ನ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗುವುದು ಎಂದು ತಿಳಿಸಿದ್ದು, ಇನ್ನೂ ಕ್ರಮ ವಹಿಸದೆ ಇರುವ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದರು.
ಎಲ್ಲ ನಿವೃತ್ತರು ಒಗ್ಗಟ್ಟು ಪ್ರದರ್ಶಿಸಬೇಕು, ಇನ್ನೂ ಅಸಂಖ್ಯಾತ ಸಂಖ್ಯೆಯಲ್ಲಿ ನಿವೃತ್ತರು ಪ್ರತಿಭಟನಾ ಸಭೆಗೆ ಆಗಮಿಸಬೇಕು ಎಂದು ಎನ್ಎಸಿ ಅಧ್ಯಕ್ಷರಾದ ಜಿಎಸ್ಎಮ್ ಸ್ವಾಮಿ ಕರೆ ನೀಡಿದರು.
ಅಧಿಕಾರಿಗಳು ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸದೆ ಹೋದಲ್ಲಿ ದೇಶಾದ್ಯಂತ ಇರುವ ಎಲ್ಲ ಇಪಿಎಸ್ ನಿವೃತ್ತರು ವಿನೂತನ ಪ್ರತಿಭಟನೆ ನಡೆಸುತ್ತಾರೆ ಎಂದು ಎಚ್ಚರಿಕೆ ನೀಡಿದರು. ಮುಂದುವರಿದಂತೆ ನಮ್ಮ ಹೋರಾಟ ಫಲಪ್ರದವಾಗುವ ಎಲ್ಲ ಲಕ್ಷಣಗಳು ಇವೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಅಧ್ಯಕ್ಷ ಶಂಕರ್ ಕುಮಾರ್ ಮಾತನಾಡಿ, ನಮ್ಮ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ, ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಕೇಂದ್ರ ಸರ್ಕಾರ ಹಾಗೂ ಇಪಿಎಫ್ಒ ಅಧಿಕಾರಿಗಳ ಮೇಲೆ ಒತ್ತಡ ಹೇರಬೇಕು ಹಾಗಾಗಿ ಅಧಿಕ ಸಂಖ್ಯೆಯಲ್ಲಿ ನಿವೃತ್ತರು ಮುಂದಿನ ದಿನಗಳ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಉಪಾಧ್ಯಕ್ಷ ಸುಬ್ಬಣ್ಣ ಮಾತನಾಡಿ, ಇಪಿಎಫ್ಒ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸುತ್ತಿದ್ದು, ಇಪಿಎಸ್ ನಿವೃತ್ತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಇನ್ನೆಷ್ಟು ದಿನ ನಿವೃತ್ತರು ಕಾಯಬೇಕು ಎಂದು ಅಧಿಕಾರಿಗಳನ್ನು ತಾರಾಟಿಗೆ ತೆಗೆದುಕೊಂಡರು. ನಿವೃತ್ತರ ತಾಳ್ಮೆ ಪರೀಕ್ಷಿಸುವ ಕಾಲ ಮುಗಿದಿದ್ದು, ಉಗ್ರ ಹೋರಾಟಕ್ಕೆ ತಾವೆಲ್ಲರೂ ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಚಿಕ್ಕಬಳ್ಳಾಪುರ, ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಡು ಮಾತನಾಡಿ, ಇಷ್ಟು ವರ್ಷಗಳ ಕಾಲ ಇಪಿಎಸ್ ನಿವೃತ್ತರು ಸಂಯಮದಿಂದ ನಡೆದುಕೊಂಡಿದ್ದು, ನಮ್ಮ ನಾಯಕರು ಮಂಡಿಸಿರುವ ಬೇಡಿಕೆ 7500 ರೂ.ಗಳು. ಭತ್ಯೆ ಹಾಗೂ ವೈದ್ಯಕೀಯ ವೆಚ್ಚ, ಇಪಿಎಸ್ ವ್ಯಾಪ್ತಿಯಲ್ಲಿ ಬರುವ ನಿವೃತ್ತರಿಗೆ 5,000 ರೂ.ಗಳನ್ನು ಕೂಡಲೇ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ನಿರತರ ಮನವಿ ಪತ್ರ ಸ್ವೀಕರಿಸಲು ವಿಳಂಬ ಮಾಡಿದ ಅಧಿಕಾರಿಗಳ ವಿರುದ್ಧ ನಿವೃತ್ತರ ಆಕ್ರೋಶದ (akrosha) ಕೂಗು ಮತ್ತೊಮ್ಮೆ ಬುಗಿಲೆದ್ದಿತು. ಸ್ಥಳಕ್ಕಾಗಮಿಸಿದ ಇಪಿಎಫ್ಒ ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡ ನಿವೃತ್ತರು, ನಮ್ಮ ಎಲ್ಲ ಮನವಿಗಳಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮ, ವಿವರಣೆಯನ್ನು ಕೂಡಲೇ ನೀಡಬೇಕು ಎಂದು ಅಗ್ರಹಿಸಿರು. ಆದರೆ, ಮುಖಂಡರು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಯು ಉತ್ತರಿಸದೆ ತಬ್ಬಿಬ್ಬಾದತು.
ಬಳಿಕ ಮನವಿಪತ್ರ ಸ್ವೀಕರಿಸಿ, ನಮ್ಮ ಎಲ್ಲ ಮನವಿ ಪತ್ರಗಳನ್ನು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಈಗಾಗಲೇ ಕಳುಹಿಸಿಕೊಟ್ಟಿದ್ದು, ಅದರ ಎಲ್ಲ ವಿವರಗಳನ್ನು ನೀಡುವುದಾಗಿ, ಇಂದಿನ ಮನವಿ ಪತ್ರವನ್ನು ಸಹ ತಮ್ಮ ಉಲ್ಲೇಖದೊಂದಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ನಾಗರಾಜು, ರುಕ್ಮೇಶ್ ಹಾಗೂ ಮನೋಹರ್, ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಸಂಘ, ಚಿಕ್ಕಬಳ್ಳಾಪುರದ ಪದಾಧಿಕಾರಿಗಳಾದ ಜೆ.ಎನ್. ಶ್ರೀನಿವಾಸ ನಾಯ್ಡು, ಬ್ರಹ್ಮಚಾರಿ ಹಾಗೂ ಇನ್ನು ಹಲವಾರು ಸದಸ್ಯರು ಭಾಗವಹಿಸಿದ್ದರು.