ಬೆಂಗಳೂರು: ಇಪಿಎಸ್ ನಿವೃತ್ತರ ಕನಿಷ್ಠ ಹೆಚ್ಚುವರಿ ಪಿಂಚಣಿ 7,500 ರೂ. ಭತ್ಯೆ + ವೈದ್ಯಕೀಯ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇತ್ತೀಚೆಗೆ ಫ್ರೀಡಂ ಪಾರ್ಕ್ನಲ್ಲಿ ಜರುಗಿದ ಇಪಿಎಸ್ ನಿವೃತ್ತರ ಬೃಹತ್ ಪ್ರತಿಭಟನಾ ಸಭೆಗೆ ನೂರಾರು ನಿವೃತ್ತರು ಆಗಮಿಸುವ ಮೂಲಕ ಯಶಸ್ವಿಗೊಳಿಸಿದ್ದಾರೆ.
ಈ ಪ್ರತಿಭಟನಾ ಸಭೆಗೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ನೂರಾರು ಮಂದಿ ಹಿರಿಯ ಜೀವಗಲೂ ಆದ ಇಪಿಎಸ್ ನಿವೃತ್ತರು ಬಂದು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದದರು.
ಪ್ರತಿಭಟನಾ ಕಾರ್ಯಕ್ರಮ ಶ್ರೀಕಂಠ ನಾಯಕ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಸಂಘದ ಖಜಾಂಚಿ ಡೋಳಪ್ಪನವರು ಸಭೆಗೆ ಆಗಮಿಸಿದ್ದ ಎಲ್ಲ ಮುಖಂಡರನ್ನು ಸ್ವಾಗತಿಸುವ ಮೂಲಕ ಶುಭ ಕೋರಿದ್ದು, ದೀಪ ಬೆಳಗಿಸುವ ಮೂಲಕ ಪ್ರತಿಭಟನಾ ಸಭೆಗೆ ಚಾಲನೆ ನೀಡಲಾಯಿತು.
ಸಂಘದ ಅಧ್ಯಕ್ಷರಾದ ನಂಜುಂಡೇಗೌಡ ಪ್ರಸ್ತಾವಿಕ ಭಾಷಣ ಮಾಡಿ, ಇದೊಂದು ಇಪಿಎಸ್ ನಿವೃತ್ತರ ಅವಿಸ್ಮರಣೀಯ ಪ್ರತಿಭಟನಾ ಸಭೆಯಾಗಿದ್ದು, 238ನೇ ಸಿಬಿಟಿ ಸಭೆ ಇದೆ ಅಕ್ಟೋಬರ್ 13ರಂದು ದೆಹಲಿಯಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಇಪಿಎಸ್ ನಿವೃತ್ತರ ಕನಿಷ್ಠ ಹೆಚ್ಚುವರಿ ಪಿಂಚಣಿ 7,500 ರೂ. ಭತ್ಯೆ + ವೈದ್ಯಕೀಯ ಸೌಲಭ್ಯ ಹಾಗೂ ಅಧಿಕ ಪಿಂಚಣಿ ( ಆರ್ ಸಿ ಗುಪ್ತ ಹಾಗೂ ಸುನಿಲ್ ಕುಮಾರ್ ಪ್ರಕರಣ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳು) ಈ ಎರಡು ಅಂಶಗಳಿಗೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಸಿಬಿಟಿ ಸಭೆಯಲ್ಲಿ ಅಧಿಕಾರಿಗಳು ಮಂಡಿಸಿ, ಚರ್ಚಿಸಿ, ಅಂಗೀಕರಿಸಬೇಕೆಂದು ಸಭೆಯಲ್ಲಿ ಆಗ್ರಹಿಸಿದ್ದರು.
ರಾಷ್ಟ್ರೀಯ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಜಿಎಸ್ಎಮ್ ಸ್ವಾಮಿ ಮಾತನಾಡಿ, ಇಪಿಎಸ್ ನಿವೃತ್ತರ ತಾಳ್ಮೆಯ ಕಟ್ಟೆ ಒಡೆದಿದ್ದು, ಕೇಂದ್ರ ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಗೌರವಯುತವಾಗಿ ನಮಗೆ ಮಾಸಿಕ ಪಿಂಚಣಿ 7,500 ರೂ. ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ನೀಡಬೇಕೆಂದು ಈ ಪ್ರತಿಭಟನಾ ಸಭೆಯ ಮೂಲಕ ಒತ್ತಾಯಿಸಿದ್ದರು.
ಸಂಘದ ಕಾರ್ಯಾಧ್ಯಕ್ಷ ಶಂಕರ್ ಕುಮಾರ್ ಮಾತನಾಡಿ, ನಮ್ಮಿಂದ ಸಂಗ್ರಹಿಸಿರುವ ದೇಣಿಗೆ ಮೊತ್ತ, ಒಂದು ಲಕ್ಷ ಕೋಟಿ ರೂ. ಕೇಂದ್ರ ಇಪಿಎಫ್ಒ ಖಾತೆಯಲ್ಲಿದ್ದು, ಈ ಹಣವನ್ನು 78 ಲಕ್ಷ ಇಪಿಎಸ್ ನಿವೃತ್ತರಿಗೆ ವಿನಿಯೋಗಿಸಲು ಅವಕಾಶವಿದೆ. ಈ ಬಗ್ಗೆ ಕೇಂದ್ರ ಸರ್ಕಾರ ನಿವೃತ್ತರನ್ನು ನಿರ್ಲಕ್ಷಿಸಿದೆ ಎಂದು ದೂರಿದರು.

ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಟ್ರಸ್ಟಿನ ಅಧ್ಯಕ್ಷ ಬ್ರಹ್ಮಚಾರಿ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ಹಾಗೂ ಇಪಿಎಫ್ಒ ಅಧಿಕಾರಿಗಳಿಗೆ ಇಚ್ಛಾಶಕ್ತಿಯ ಕೊರತೆ ಇದ್ದು, ಈ ಕೂಡಲೇ ನಮ್ಮ ಬೇಡಿಕೆಯನ್ನು ಈಡೇರಿಸದೆ ಹೋದಲ್ಲಿ ನಾವೆಲ್ಲರೂ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಕೀಲ ಎಂ.ಆರ್. ವರುಣ ಮಾತನಾಡಿ, ಸರ್ವೋಚ್ಚ ನ್ಯಾಯಾಲಯ ಹಾಗೂ ಇತ್ತೀಚೆಗೆ ತಮಿಳುನಾಡಿನ ಮಧುರೈ ಉಚ್ಚ ನ್ಯಾಯಾಲಯವು ನಿವೃತ್ತರ ಪರ ನೀಡಿರುವ ತೀರ್ಪನ್ನು ಉಲ್ಲೇಖಿಸಿ, 2014ರ ನಂತರ ನಿವೃತ್ತರಾದ ಎಲ್ಲ ಇಪಿಎಸ್ ನಿವೃತ್ತರು ಅಧಿಕ ಪಿಂಚಣಿಗೆ ಅರ್ಹರಾಗುತ್ತಾರೆ ಎಂದು ಪ್ರಸ್ತಾಪಿಸಿ, ಆಸಕ್ತರು ಈ ಬಗ್ಗೆ ಕ್ರಮವಹಿಸಬಹುದು ಎಂದು ತಿಳಿಸಿದರು.
ಟ್ರಸ್ಟ್ ಪದಾಧಿಕಾರಿಗಳಾದ ಸೋಣ್ಣಪ್ಪ, ಸಿರಸಿಯ ನಾರಾಯಣರಾವ್ ಹಾಗೂ ಸಾಮಾಜಿಕ ಹೋರಾಟಗಾರರಾದ ಚಂದ್ರೇಗೌಡರು ಸಹ ಇಪಿಎಸ್ ನಿವೃತ್ತರನ್ನುದ್ದೇಶಿಸಿ ಮಾತನಾಡಿದರು. ಪ್ರತಿಭಟನಾ ಸಭೆಯಲ್ಲಿ ಇಪಿಎಸ್ ನಿವೃತ್ತರ ಧಿಕ್ಕಾರ ಹಾಗೂ ಆಕ್ರೋಶದ ಕೂಗು ಮುಗಿಲು ಮುಟ್ಟಿತು.
ಸಭೆಯ ನಿರ್ವಹಣೆಯನ್ನು ಸಂಘದ ಪದಾಧಿಕಾರಿಗಳಾದ ನಾಗರಾಜು, ರಂಗನಾಥ್, ಮನೋಹರ್, ರುಕ್ಮೇಶ್, ಕೃಷ್ಣಮೂರ್ತಿ ಹಾಗೂ ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು ಯಶಸ್ವಿಯಾಗಿ ನಡೆಸಿಕೊಟ್ಟರು. ಬಿಎಂಟಿಸಿ ನಿರ್ವಹಾಕಿ ಪಿ.ಉಮಾ, ಕಾರ್ಯಕ್ರಮದ ನಿರೂಪಣೆ ಮಾಡಿದರು. ಬಿಎಂಟಿಸಿ ನಿವೃತ್ತ ನೌಕರ ನಟರಾಜು ವಂದನಾರ್ಪಣೆ ಮಾಡಿದರು.
Related
