NEWSದೇಶ-ವಿದೇಶಬೆಂಗಳೂರು

GBA ಜತೆ ನಾವೀನ್ಯತೆ, ನಗರಾಭಿವೃದ್ಧಿಗೆ ಸಹಕಾರ ನೀಡಲು ಮೆಲ್ಬೋರ್ನ್ ಆಸಕ್ತಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಆಸ್ಟ್ರೇಲಿಯಾ ದೇಶದ ಮೆಲ್ಬೋರ್ನ್ ನಗರವು ಗ್ರೇಟರ್ ಬೆಂಗಳೂರು ಪ್ರಾಧಿಕಾರದೊಂದಿಗೆ ನಾವೀನ್ಯತೆ, ಸ್ಥಿರತೆ ಮತ್ತು ಸಮಗ್ರ ನಗರಾಭಿವೃದ್ಧಿ ಕ್ಷೇತ್ರಗಳಲ್ಲಿ ಸಹಕಾರ ನೀಡಲು ಆಸಕ್ತಿ ವ್ಯಕ್ತಪಡಿಸಿದ್ದು, ಈ ಸಂಬಂಧ ಇಂದು ತಾಜ್ ವೆಸ್ಟ್ ಎಂಡ್‌ನಲ್ಲಿ ಉದ್ದೇಶ ಪತ್ರವನ್ನು ಹಸ್ತಾಂತರಿಸಿದೆ.

ಮೆಲ್ಬೋರ್ನ್ ನ ಲಾರ್ಡ್ ಮೇಯರ್ ನಿಕೊಲಸ್ ರೀಸ್ ಅವರು, ಕರ್ನಾಟಕ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ಈ ಉದ್ದೇಶ ಪತ್ರ ಹಸ್ತಾಂತರಿಸಿದರು.

“ಸಿಸ್ಟರ್ ಸಿಟಿ”ಗಳ ನಡುವಿನ ಪರಸ್ಪರ ಸಹಕಾರವನ್ನು ಗಟ್ಟಿಗೊಳಿಸುವ ಉದ್ದೇಶದಿಂದ, ಎರಡೂ ನಗರಗಳು ಕೆಳಕಂಡ ಪ್ರಮುಖ ಕ್ಷೇತ್ರಗಳಲ್ಲಿ ಸಹಯೋಗವನ್ನು ಅನ್ವೇಷಿಸಲು ಒಮ್ಮತ ವ್ಯಕ್ತಪಡಿಸಿವೆ:

1. ನಗರ ನವೀನತೆ ಮತ್ತು ಸ್ಮಾರ್ಟ್ ಸಿಟಿ. 2. ತಂತ್ರಜ್ಞಾನ ಮತ್ತು ನಾವೀನ್ಯ ಪರಿಸರ ವ್ಯವಸ್ಥೆಗಳು. 3. ಸುಸ್ಥಿರತೆ ಮತ್ತು ಹವಾಮಾನ ಸ್ಥಿತಿಸ್ಥಾಪಕತೆ. 4. ಶಿಕ್ಷಣ ಹಾಗೂ ಜ್ಞಾನ ವಿನಿಮಯ. 5. ಸಾಂಸ್ಕೃತಿಕ ಮತ್ತು ಕ್ರೀಡಾ ವಿನಿಮಯ.

ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮಾತನಾಡಿ, ಮೆಲ್ಬೋರ್ನ್ ನಗರ ಹಾಗೂ ಬೆಂಗಳೂರು ನಗರಗಳ ನಡುವಿನ ವ್ಯವಸ್ಥಿತ ಮಾಹಿತಿ ವಿನಿಮಯ ಮತ್ತು ಅನುಭವ ಹಂಚಿಕೆ ಎರಡೂ ನಗರಗಳ ಅಭಿವೃದ್ಧಿಗೆ ದಾರಿಯಾಗಲಿದೆ, ಎಂದು ತಿಳಿಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್, “ನಗರಗಳ ನಡುವಿನ ಈ ಉದ್ದೇಶ ಘೋಷಣೆ, ಪರಸ್ಪರ ಕಲಿಕೆ ಮತ್ತು ಸಹಕಾರಕ್ಕೆ ಬಲ ತುಂಬುತ್ತದೆ. ಇದರಿಂದ ನಗರಾಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗಲಿದೆ,” ಎಂದು ತಿಳಿಸಿದರು.

ಮೆಲ್ಬೋರ್ನ್ ಲಾರ್ಡ್ ಮೇಯರ್ ನಿಕೊಲಸ್ ರೀಸ್, ಸಹಕಾರ ಮತ್ತು ಪರಿಣಿತಿಯ ಹಂಚಿಕೆ ಮೂಲಕ, ಎರಡೂ ನಗರಗಳ ಹೊಸತನ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ AI ಆಧಾರಿತ ನಗರ ಪರಿಹಾರಗಳನ್ನು ರೂಪಿಸಲು ನಾವು ಎದುರು ನೋಡುತ್ತಿದ್ದೇವೆ, ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಜಿಬಿಎ ಹಾಗೂ ನಗರ ಪಾಲಿಕೆಗಳ ಕಾರ್ಯವೈಖರಿ, ಬೆಂಗಳೂರು ನಗರದಲ್ಲಿನ ನಡೆಯುತ್ತಿರುವ ಮತ್ತು ಮುಂದಿನ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿದ್ದು, ಲಾರ್ಡ್ ಮೇಯರ್ ರವರು ಜಿಬಿಎ ಮತ್ತು ನಗರಪಾಲಿಕೆ ವ್ಯವಸ್ಥೆಯನ್ನು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಮೆಲ್ಬೋರ್ನ್ ನ ಉಪ ಲಾರ್ಡ್ ಮೇಯರ್ ರೋಶೇನಾ ಕ್ಯಾಂಪ್ಬೆಲ್, ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್, ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ: ರಾಮ್ ಪ್ರಸಾತ್ ಮನೋಹರ್, ಮೆಲ್ಬೋರ್ನ್ ನಗರದ ಪ್ರತಿನಿಧಿಗಳು ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Megha
the authorMegha

Leave a Reply

error: Content is protected !!