ನ್ಯೂಡೆಲ್ಲಿ: ದೆಹಲಿ ನೂತನ ಸಿಎಂ ಸ್ಥಾನಕ್ಕೆ ಸಚಿವೆ ಅತಿಶಿ (Atishi) ಅವರ ಹೆಸರನ್ನು ಅರವಿಂದ್ ಕೇಜ್ರಿವಾಲ್ ಪ್ರಸ್ತಾಪಿಸಿದ್ದಾರೆ. ಅತಿಶಿ ಅವರು ದೆಹಲಿ ಎಎಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಆಮ್ ಆದ್ಮಿ ಪಕ್ಷದ ನಾಯಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇಂದಿನ ಎಎಪಿ ಸಭೆಯಲ್ಲಿ, ಪಕ್ಷದ ನಾಯಕ ದಿಲೀಪ್ ಪಾಂಡೆ ಅವರು, ಸಿಎಂ ಯಾರೆಂದು ಕೇಜ್ರಿವಾಲ್ ನಿರ್ಧರಿಸಬೇಕೆಂದು ಪ್ರಸ್ತಾಪಿಸಿದರು. ಎಎಪಿ ರಾಷ್ಟ್ರೀಯ ಸಂಚಾಲಕರು ಅತಿಶಿ ಅವರ ಹೆಸರನ್ನು ಪ್ರಸ್ತಾಪಿಸಿದಾಗ, ಎಲ್ಲ ಎಎಪಿ ಶಾಸಕರು ಎದ್ದುನಿಂತು ಅದನ್ನು ಒಪ್ಪಿಕೊಂಡರು. ಈ ಮೂಲಕ ಎಂ.ಎಸ್. ಅತಿಶಿ ಅವರು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದರು.
ಅತಿಶಿ ಪ್ರಸ್ತುತ ದೆಹಲಿ ಸರ್ಕಾರದಲ್ಲಿ ಶಿಕ್ಷಣ ಮತ್ತು PWD ಪ್ರಮುಖ ಖಾತೆಗಳನ್ನು ಹೊಂದಿದ್ದಾರೆ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿ ಅತಿಶಿ ಅವರು ದೆಹಲಿಯ ಶಾಲೆಗಳಲ್ಲಿ ಶಿಕ್ಷಣವನ್ನು ಕೂಲಂಕಷವಾಗಿ ಪರಿಶೀಲಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಕಲ್ಕಾಜಿ ಕ್ಷೇತ್ರದ ಶಾಸಕಿಯಾಗಿರುವ ಅತಿಶಿ ಅವರು, ಮದ್ಯ ನೀತಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಸೋಡಿಯಾ ಮತ್ತು ಸಿಎಂ ಅರವಿಂದ್ ಕೇಜ್ರಿವಾಲ್ ಜೈಲುಪಾಲಾದಾಗ ಪಕ್ಷವನ್ನು ಮುನ್ನಡೆಸಿದ್ದರು.
ಈ ಎಲ್ಲ ಬೆಳವಣಿಗೆಯ ಮಧ್ಯೆ ಕೇಜ್ರಿವಾಲ್ ರಾಜೀನಾಮೆ ಸುದ್ದಿಯ ಹಿಂದೆ ತೂರಿ ಬಂದ ಪ್ರಶ್ನೆ ಅದು ಕೇಜ್ರಿವಾಲ್ ಜಾಗಕ್ಕೆ ಯಾರು ಬಂದು ಕುಳಿತುಕೊಳ್ಳಲಿದ್ದಾರೆ ಅನ್ನೋದು. ಈಗ ಅದಕ್ಕೂ ಉತ್ತರ ಸಿಕ್ಕಿದ್ದು, ಅತಿಶಿ ಮರ್ಲೇನಾ ಮುಂದಿನ ಸಿಎಂ ಎಂದು ಪಕ್ಷದ ಎಲ್ಲ ಶಾಸಕರು ಒಮ್ಮತ ಅಭಿಪ್ರಾಯದೊಂದಿಗೆ ಆಯ್ಕೆ ಮಾಡಿದ್ದಾರೆ.
ದೆಹಲಿಗೆ 3ನೇ ಮಹಿಳಾ ಸಿಎಂ ಅತಿಶಿ ಮರ್ಲೇನಾ!: ಈ ಹಿಂದೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರದಲ್ಲಿ ಅತಿಶಿ ಮರ್ಲೇನಾ ಒಬ್ಬರೇ ಮಹಿಳಾ ಮಂತ್ರಿಯಾಗಿದ್ದರು. ಈಗ ಅವರನ್ನೇ ಸಿಎಂ ಸ್ಥಾನಕ್ಕೆ ತಂದು ಕೂರಿಸಲು ಅರವಿಂದ್ ಕೇಜ್ರಿವಾಲ್ ಮುಂದಾಗಿದ್ದಾರೆ.
ಇನ್ನು ಕೇಜ್ರಿವಾಲ್ ಸಿಎಂ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಮಾಡಿದ ದಿನದಿಂದಲೂ ಹಲವು ಹೆಸರುಗಳು ಸಿಎಂ ರೇಸ್ನಲ್ಲಿ ಕೇಳಿ ಬಂದಿದ್ದವು. ಅತಿಶಿ ಜೊತೆ ಜೊತೆಗೆ ಗೋಪಾಲ್ ರೈ, ಕೈಲಾಶ್ ಗೆಹ್ಲೊಟ್, ಸೌರಭ್ ಭಾರದ್ವಾಜ್ ಹಾಗೂ ಸುನೀತಾ ಕೇಜ್ರಿವಾಲ್ ಹೆಸರು ಮುನ್ನೆಲೆಯಲ್ಲಿದ್ದವು. ಕೊನೆಗೆ ಅವಕಾಶ ಗಿಟ್ಟಿಸಿಕೊಂಡಿದ್ದು ಅತಿಶಿ ಮೆರ್ಲೇನಾ.
ಲೋಕಸಭಾ ಚುನಾವಣೆಯನ್ನು ಸೌರಭ ಭಾರದ್ವಾಜ್ ಜತೆ ಸೇರಿಕೊಂಡು ಸಮರ್ಥವಾಗಿ ಎದುರಿಸಿದ್ದು ಕೂಡ ಇದೇ ಅತಿಶಿ. ಈ ವೇಳೆ ಆಪ್ ಪಾಳಯದಲ್ಲಿ ಅತ್ಯಂತ ಪ್ರಮುಖ ನಾಯಕಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಹರಿಯಾಣ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ. ಈ ವೇಳೆ ಅವರು ಅನಾರೋಗ್ಯಕ್ಕೆ ಈಡಾಗಿ ಆಸ್ಪತ್ರೆಗೆ ಸೇರಿದ್ದು ಇವೆಲ್ಲವೂ ಅತಿಶಿಯವರ ನಾಯಕತ್ವದ ಗುಣವನ್ನು ಆಚೆ ತಂದಿದ್ದವು
ಇಂದು ಸಂಜೆ 4.30ಕ್ಕೆ ಅರವಿಂದ್ ಕೇಜ್ರಿವಾಲ್ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೆನಾ ಅವರನ್ನು ಭೇಟಿ ಮಾಡಿ ಅವರ ರಾಜೀನಾಮೆ ಪತ್ರವನ್ನು ನೀಡಲಿದ್ದಾರೆ. ಇದಾದ ಬಳಿಕ ಅತಿಶಿ ಪದಗ್ರಹಣದ ದಿನಾಂಕವು ನಿಗದಿಯಾಗಲಿದೆ.