ಪಿರಿಯಾಪಟ್ಟಣ: ಶುಕ್ರವಾರ ಸುರಿದ ಬಾರಿ ಮಳೆಗೆ ಮನೆ ಕುಸಿದು ಬಿದ್ದು ಸಾವನ್ನಪ್ಪಿದ ತಾಲೂಕಿನ ಕಗ್ಗುಂಡಿ ಗ್ರಾಮದ ಹೇಮಲತಾ ರವರ ಮನೆಗೆ ಪಶುಪಾಲನಾ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಭೇಟಿ ನೀಡಿ ಸಾಂತ್ವನ ಹೇಳಿ 5 ಲಕ್ಷ ಪರಿಹಾರ ಧನ ವಿತರಿಸಿ ಸ್ಥಳೀಯ ಆಡಳಿತದಿಂದ 1.25 ಲಕ್ಷ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಕುಂಜಿ ಅಹಮದ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಕುಮಾರ್, ಕೆಪಿಸಿಸಿ ಸದಸ್ಯ ಅನಿಲ್ ಕುಮಾರ್, ಮುಖಂಡ ಹರೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಾಜಿ ಶಾಸಕ ಮಹದೇವ್ ಹಾಗೂ ಪುತ್ರ ಪ್ರಸನ್ನಭೇಟಿ: ಇದಕ್ಕೂ ಮೊದಲು ಗೋಡೆ ಕುಸಿದು ಸಾವನ್ನಪ್ಪಿದ ಮೃತರ ಕುಟುಂಬಕ್ಕೆ ವೈಯಕ್ತಿಕ ಧನ ಸಹಾಯ ಮಾಡಿ ಸಾಂತ್ವನ ಹೇಳಿದ ಮಾಜಿ ಶಾಸಕರಾದ ಕೆ.ಎಂ. ಮಹದೇವ್ ಹಾಗೂ ಪುತ್ರ ಪಿ.ಎಂ.ಪ್ರಸನ್ನ ಅವರು ಇನ್ನೂ ಸಚಿವರು ಬಂದಿಲ್ಲ ಎಂದು ಕಿಡಿಕಾರಿದ್ದರು.
ಕಗ್ಗುಂಡಿ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಅಪಾರ ಮಳೆಗೆ ಹೇಮಲತಾ ಎಂಬ 22 ವರ್ಷದ ವಿವಾಹಿತ ಮಹಿಳೆ ಮನೆಯ ಗೋಡೆ ಕುಸಿದ ಸಾವನ್ನಪ್ಪಿದ್ದರು. ಈ ಸಮಯದಲ್ಲಿ ತನ್ನೊಂದಿಗೆ ಇದ್ದ 2 ವರ್ಷದ ಮಗುವನ್ನು ದೂರಕ್ಕೆ ತಳ್ಳಿ ಮಗುವಿನ ಪ್ರಾಣ ಕಾಪಾಡಿ ತನ್ನ ಪ್ರಾಣವನ್ನೇ ತೆತ್ತು ತಾಯಿ ಮಮತೆಯನ್ನು ಎತ್ತಿ ಇಡಿದಿದ್ದರು.
ಈ ವಿಚಾರ ಕಾಡ್ಗಿಚ್ಚಿನಂತೆ ರಾಜ್ಯದೆಲ್ಲೆಡೆ ಹಬ್ಬಿ ಇಡೀ ರಾಜ್ಯವೇ ತಾಯಿಯ ತ್ಯಾಗಕ್ಕೆ ಕಂಬನಿ ಮಿಡಿದಿದ್ದಾರೆ. ಇನ್ನು ವಿಷಯ ತಿಳಿದ ಬಳಿಕ ಸ್ಥಳಕ್ಕೆ ಇಂದು ಮುಂಜಾನೆಯೇ ಮಾಜಿ ಶಾಸಕರಾದ ಕೆ.ಎಂ. ಮಹಾದೇವ್ ಹಾಗೂ ಅವರ ಪುತ್ರ ಕಗ್ಗುಂಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ಆದ ಪಿ.ಎಂ. ಪ್ರಸನ್ನ ಅವರು ಭೇಟಿನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಪರಿಹಾರ ನೀಡಿದರು.
ಇದಲ್ಲದೆ ಸರ್ಕಾರದಿಂದ ಸಿಗುವ ಪರಿಹಾರದ ಕುರಿತಾಗಿ ಡಿಸಿ ಹಾಗೂ ತಹಸೀಲ್ದಾರ್ ಅವರೊಡನೆ ಚರ್ಚಿಸಿ 11ಗಂಟೆಯ ಒಳಗೆ ಕುಟುಂಬದವರ ಖಾತೆಗೆ ಹಣ ಹಾಕಿಸುವುದಾಗಿ ಹಾಗೂ ಹೊಸ ಮನೆ ನಿರ್ಮಾಣಕ್ಕೆ ಹಣ ಸಹಾಯದ ಭರವಸೆ ನೀಡಿದ್ದರು.
ಇಡೀ ರಾಜ್ಯವೇ ಮೈಸೂರಿನಲ್ಲಿ ಮೊದಲ ಬಲಿ ಪಡೆದ ವರುಣನ ಕ್ರೂರತೆಗೆ ಮರುಗುತ್ತಾ ಇದ್ದರೂ ತಾಲೂಕಿನ ಹಾಲಿ ಶಾಸಕರು ಹಾಗೂ ಸಚಿವರು ಆಗಿರುವ ಕೆ. ವೆಂಕಟೇಶ್ ಇದುವರೆಗೂ ಸ್ಥಳಕ್ಕೆ ಆಗಮಿಸದೆ ಇರುವುದು ದುಃಖದ ಸಂಗತಿ ಎಂಬಂತೆ ಕಾಣುತ್ತದೆ. ಸಚಿವರು ಈಗಲಾದರೂ ಕೂಡಲೇ ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಸರ್ಕಾರದ ಸವಲತ್ತುಗಳನ್ನು ಕೂಡಲೇ ಕೊಡಿಸಿ ಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದರು.