- ಇದೇ ಜ.27ರ ಮಂಗಳವಾರ ವಿಧಾನಪರಿಷತ್ನಲ್ಲಿ ಚರ್ಚೆಗೆ ಬರಬಹುದು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ದುಡಿಯುತ್ತಿರುವ ಅಧಿಕಾರಿ/ ನೌಕರರಿಗೆ ಸಕಾಲದಲ್ಲಿ ವೇತನ ಪರಿಷ್ಕರಣೆಯಾಗುತ್ತಿಲ್ಲ ಈ ಬಗ್ಗೆ ಸರ್ಕಾರ ಯಾವ ನಿಲುವು ತೆಗೆದುಕೊಂಡಿದೆ ಎಂಬುದರ ಬಗ್ಗೆ ಚರ್ಚೆ ಮಾಡುವುದಕ್ಕೆ ಈ ವಿಶೇಷ ಜಂಟಿ ಅಧಿವೇಶನದಲ್ಲಿ ಅವಕಾಶ ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಶಾಸಕ ಜಗದೇವ ಗುತ್ತೇದಾರ್ ಮನವಿ ಮಾಡಿದ್ದಾರೆ.

ಈ ಸಂಬಂಧ ಶುಕ್ರವಾರ ವಿಧಾನ ಪರಿಷತ್ ಸಭಾಪತಿ ಅವರಿಗೆ ಲಿಖಿತವಾಗಿ ಮನವಿ ಮಾಡಿರುವ ಅವರು, ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳಲ್ಲಿ ದುಡಿಯುತ್ತಿರುವ ಸುಮಾರು 1.15ಲಕ್ಷ ಅಧಿಕಾರಿ, ನೌಕರರಿಗೆ ಸಕಾಲದಲ್ಲಿ ವೇತನ ಪರಿಷ್ಕರಣೆಯಾಗುತ್ತಲೇ ಇಲ್ಲ. ಅಲ್ಲದೆ, 38 ತಿಂಗಳ ವೇತನ ಹಿಂಬಾಕಿಯೂ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಶ್ರಮಿಸುತ್ತಿರುವ ನೌಕರರು ವೇತನವಿಲ್ಲದೆ ಅಶಕ್ತರಾಗಿದ್ದಾರೆ!
ಇನ್ನು ಶಕ್ತಿದಾತರೇ ಅಶಕ್ತರು! ವೇತನ ಹಿಂಬಾಕಿಗಾಗಿ 1.15 ಲಕ್ಷ ಸಾರಿಗೆ ಸಿಬ್ಬಂದಿ ಹೆಣಗಾಟ, ಸರ್ಕಾರ ಗಮನಹರಿಸದಿದ್ದರೆ ಸಿಡಿದೇಳಲು ನೌಕರರು ಸಜ್ಜು ನೋಟಿಸ್ ನೀಡದೆ ಮುಷ್ಕರ ಎಂದು ಯೂನಿಯನ್ ಎಚ್ಚರಿಕೆ ಎಂದು ದಿನಪತ್ರಿಕೆಯೊಂದರಲ್ಲಿ ಸುದ್ದಿ ಪ್ರಕಟವಾಗಿದೆ ಎಂದು ಸಭಾಪತಿಗಳ ಗಮನಕ್ಕೆ ತಂದಿದ್ದಾರೆ.
ಅಲ್ಲದೆ ಸಾರಿಗೆ ನಿಗಮಗಳು ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಗಳಾಗಿದ್ದು ಈ ಸಂಸ್ಥೆಗಳ ನಿರ್ವಹಣೆ, ಸಿಬ್ಬಂದಿ ವೇತನ ಪಾವತಿ ಹಾಗೂ ಎಲ್ಲ ಆರ್ಥಿಕ ಸೌಲಭ್ಯಗಳನ್ನು ತಮ್ಮ ಆಂತರಿಕ ಮೂಲದಿಂದಲೇ ಭರಿಸಬೇಕಾಗಿದೆ. ಆದರೆ, ಕೆ.ಎಸ್.ಆರ್.ಟಿ.ಸಿ. ಬಿ.ಎಂ.ಟಿ.ಸಿ. ವಾಯವ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ಹಲವು ವರ್ಷಗಳಿಂದ ನಷ್ಟದಲ್ಲಿವೆ.
ಸರ್ಕಾರದ ನೆರವಿನ ಹೊರತಾಗಿಯೂ ಚೇತರಿಸಿಕೊಳ್ಳುತ್ತಿಲ್ಲ. ಪರಿಣಾಮ, ಸರ್ಕಾರದ ಇತರೆ ಇಲಾಖೆಗಳ ನೌಕರರಿಗೆ ಸಿಗುವಂತೆ ಸಕಾಲದಲ್ಲಿ ವೇತನ ಹಾಗೂ ಇತರ ಸೌಲಭ್ಯಗಳು ದೊರಕುತ್ತಿಲ್ಲ. 1800 ಕೋಟಿ ರೂ. ವೇತನ ಹಿಂಬಾಕಿ ಇದೆ. ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳ ಅಧಿಕಾರಿ, ನೌಕರರಿಗೆ ಕೈಗಾರಿಕಾ ಒಪ್ಪಂದದ ಅನ್ವಯ 4 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಬೇಕಿದೆ. ಅದರಂತೆ 2016ರಲ್ಲಿ ವೇತನ ಪರಿಷ್ಕರಣೆಯಾಗಿದ್ದು ನಂತರ 2020ರಲ್ಲಿ ವೇತನ ಪರಿಷ್ಕರಣೆ ಮಾಡಬೇಕಿತ್ತು.
ಕೈಗಾರಿಕಾ ಒಪ್ಪಂದದನ್ವಯ ಸಾರಿಗೆ ನಿಗಮಗಳ ಅಧಿಕಾರಿ, ನೌಕರರಿಗೆ 2024ರ ಜ.1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳ ಮಾಡಬೇಕಿತ್ತು. ಅದರೆ ಎರಡು ವರ್ಷ ಕಳೆದರೂ ಸರ್ಕಾರ ವೇತನ ಪರಿಷ್ಕರಣೆ ಮಾಡಿಲ್ಲ. ಈ ಹಿಂದೆ ನಾನಾ ಬೇಡಿಕೆಗಳನ್ನು ಮುಂದಿಟ್ಟು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನೌಕರರು ಸಿದ್ಧಗೊಂಡಿದ್ದರು. ಆಗ ಹೈಕೋರ್ಟ್ ಮಧ್ಯಪ್ರವೇಶಿಸಿ ಮುಷ್ಕರ ನಡೆಸದಂತೆ ಮಧ್ಯಂತರ ತಡೆ ನೀಡಿತ್ತು.
ಹೀಗಾಗಿ ಅವರು ಮುಷ್ಕರ ಕೈಬಿಟ್ಟಿದ್ದರು. ಇದಾದ ನಂತರವೂ ಸಿಎಂ ಹಾಗೂ ಸಾರಿಗೆ ಸಚಿವರೊಂದಿಗೆ ಸಭೆಗಳಾಗಿವೆ. ಆದರೆ ವೇತನ ಪರಿಷ್ಕರಣೆ, ಹಿಂಬಾಕಿ ಪಾವತಿ ಕುರಿತು ಅಂತಿಮ ತೀರ್ಮಾನವಾಗಿಲ್ಲ. ಹೀಗಾಗಿ ನೌಕರರು ಈಗಾಗಲೇ ಇದೇ 29ನೇ ತಾರೀಖು ಪ್ರತಿಭಟನೆ ಮಾಡಿ ಬೆಂಗಳೂರು ಚಲೋ ಚಳವಳಿಯನ್ನು ಹಮ್ಮಿಕೊಂಡಿದ್ದಾರೆ. ಆದ್ದರಿಂದ ಕೂಡಲೇ ಸಾರಿಗೆ ಸಿಬ್ಬಂದಿಗಳ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕೆನ್ನುವ ವಿಷಯವನ್ನು ಪ್ರಸ್ತಾಪಿಸಲು ಹಾಗೂ ಸರ್ಕಾರ ಕೂಡಲೇ ಅವರಿಗೆ ನ್ಯಾಯವನ್ನು ಒದಗಿಸಬೇಕೆಂದು ಒತ್ತಾಯಿಸಲು ವಿಶೇಷ ಪ್ರಸ್ತಾವನೆಯಡಿಯಲ್ಲಿ ಪ್ರಸ್ತಾಪಿಸಲು ಅನುಮತಿ ನೀಡಬೇಕೆಂದು ಕೋರಿದ್ದಾರೆ.
ಈ ವಿಷಯ ಇದೇ ಜ.27ರ ಮಂಗಳವಾರ ವಿಧಾನಪರಿಷತ್ನಲ್ಲಿ ಚರ್ಚೆಗೆ ಬರಬಹುದು. ಅಷ್ಟರೊಳಗೆ ಸರ್ಕಾರ ನೌಕರರಿಗೆ ಸಿಹಿಸುದ್ದಿಕೊಡಬೇಕು ಎನ್ನುವುದು ಸಮಸ್ತರ ಆಶಯವಾಗಿದೆ.

Related










