NEWSನಮ್ಮಜಿಲ್ಲೆಬೆಂಗಳೂರು

ಮೆಜೆಸ್ಟಿಕ್ ಬಳಿ ಮೊಬೈಲ್ ಶೌಚಾಲಯ ವ್ಯವಸ್ಥೆ: ಆಯುಕ್ತ ರಾಜೇಂದ್ರ ಚೋಳನ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮೆಜೆಸ್ಟಿಕ್ ಬಳಿ ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದನ್ನು ನಿಯಂತ್ರಿಸುವ ಸಲುವಾಗಿ ಮೊಬೈಲ್ ಶೌಚಾಲಯಗಳ ವ್ಯವಸ್ಥೆ ಮಾಡಲು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಮುಂಭಾಗದ ಆಟೋ ಟಿಪ್ಪರ್ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೆಜೆಸ್ಟಿಕ್ ಪ್ರದೇಶದಲ್ಲಿ ಪಾದಚಾರಿಗಳ ಸಂಚಾರ ಹೆಚ್ಚು ಇರುವುದರಿಂದ ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಬೇಕು. ಇದರಿಂದ ಜನರು ಪಾದಚಾರಿ ಮಾರ್ಗದ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವವರ ಸಂಖ್ಯೆ ಕಡಿಮೆಯಾಗಿ ಸ್ವಚ್ಛತೆ ಕಾಪಾಡಬಹುದಾಗಿದೆ ಎಂದು ತಿಳಿಸಿದರು.

ಆಟೋ ಚಾಲಕರು ಮತ್ತು ಸಿಬ್ಬಂದಿ ಸರಿಯಾದ ಉಡುಪು, ಶೂ ಸುರಕ್ಷಾ ಸಾಮಗ್ರಿಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸಬೇಕು. ಮಸ್ಟರಿಂಗ್ ಕೇಂದ್ರಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ 5.30 ರಿಂದ 6.30 ರೊಳಗೆ ಹಾಜರಾತಿ ಪೂರ್ಣಗೊಳ್ಳಬೇಕು. ಪೌರಕಾರ್ಮಿಕರು ಶೂ, ಸಮವಸ್ತ್ರ ಹಾಗೂ ಕೈಗವಸನ್ನು ತಪ್ಪದೆ ಧರಿಸಬೇಕು. ಕಟ್ಟಡ ಭಗ್ನಾವಶೇಷಗಳು, ಬ್ಲಾಕ್ ಸ್ಪಾಟ್ ಗಳನ್ನು ತೆರವುಗೊಳಿಸುವ ಕುರಿತಂತೆ ವರದಿ ವ್ಯವಸ್ಥೆ ಜಾರಿಗೊಳಿಸಬೇಕು. ಅದನ್ನು ಸರಿಯಾಗಿ ಅನುಷ್ಠಾನಗೊಳಿಸಲು ಮೇಲ್ವಿಚಾರಣೆ ಮಾಡುವ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲು ತಿಳಿಸಿದರು.

ಮೆಜೆಸ್ಟಿಕ್ ಸುತ್ತಮುತ್ತ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಿ ಪ್ರತಿನಿತ್ಯ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು. ಓಕಳಿಪುರಂನಂತಹ ಪ್ರಮುಖ ಜಂಕ್ಷನ್‌ಗಳಲ್ಲಿ ತೀವ್ರ ಸ್ವಚ್ಛತೆ ಮಾಡಬೇಕು. ಧನ್ವಂತರಿ ರಸ್ತೆಯಲ್ಲಿ ಹಾಕಲಾಗಿರುವ (ರೈಲ್ವೇ ಜಾಗದ ಎದುರು) ಕಟ್ಟಡಗಳ ಭಗ್ನಾವಶೇಷಗಳನ್ನು ತೆರವುಗೊಳಿಸಬೇಕು. ಪಾದಚಾರಿ ಮಾರ್ಗದಲ್ಲಿ ಹಾಳಾಗಿರುವ ಕರ್ಬ್ ಸ್ಟೋನ್ ಗಳು, ಸ್ಲ್ಯಾಬ್ ಗಳನ್ನು ಬದಲಾಯಿಸಬೇಕೆಂದು ಸೂಚನೆ ನೀಡಿದರು.

ಡಸ್ಟ್ ಬಿನ್‌ಗಳನ್ನು ಅಳವಡಿಸಿ: ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬರುವ ಹೋಟೆಲ್‌ಗಳು ಹಾಗೂ ವಾಣಿಜ್ಯ ಮಳಿಗೆಗಳ ಬಳಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಈ ಸಂಬಂಧ ಎಲ್ಲಾ ಮಳಿಗೆಗಳ ಮುಂಭಾಗ ವಿಶೇಷ ಡಸ್ಟ್ ಬಿನ್ ಗಳನ್ನು ಅಳವಡಿಸಿಕೊಳ್ಳಲು ಸೂಚನೆ ನೀಡಬೇಕು. ಅದನ್ನು ಪಾಲಿಸದಿರುವವರಿಗೆ ದಂಡ ವಿಧಿಸುವ ಕೆಲಸ ಮಾಡಬೇಕು. ಇದಲ್ಲದೆ ಸುತ್ತಮುತ್ತಲಿನ ನಾಗರಿಕರು ಹಾಗೂ ಅಂಗಡಿ ಮಾಲೀಕರು ಅದನ್ನು ಸಹಕರಿಸಲು ಮನವಿ ಮಾಡಲು ಸೂಚಿಸಿದರು.

ಸಣ್ಣ ಜಂಕ್ಷನ್‌ಗಳಲ್ಲಿ ಸಸಿಗಳನ್ನು ನೆಡಿ: ಸಣ್ಣ-ಸಣ್ಣ ಜಂಕ್ಷನ್‌ಗಳಲ್ಲಿ ತೋಟಗಾರಿಕಾ ವಿಭಾಗದ ವತಿಯಿಂದ ಸಸಿಗಳನ್ನು ನೆಟ್ಟು, ಸಂರಕ್ಷಿಸುವ ಕೆಲಸ ಮಾಡಬೇಕು. ಜೊತೆಗೆ ಪಾದಚಾರಿ ಮಾರ್ಗಗಳಲ್ಲಿ ನೆಟ್ಟಿರುವ ಸಸಿಗಳನ್ನು ಸರಿಯಾಗಿ ಪೋಷಣೆ ಮಾಡಬೇಕು ಹಾಗೂ ಸಸಿಗಳ ಸುತ್ತಲು ಗ್ರಿಲ್ ಅಳವಡಿಸಬೇಕೆಂದು ಸೂಚನೆ ನೀಡಿದರು.

Advertisement

ಗ್ರೇಟಿಂಗ್ ಗಳಲ್ಲಿ ಸ್ವಚ್ಛತೆ ಕಾಪಾಡಿ: ಮಳೆ ಬೀಳುವ ಸಮಯದಲ್ಲಿ ರಸ್ತೆಯಿಂದ ಸೈಡ್ ಡ್ರೈನ್ ಗಳಿಗೆ ಸರಾಗವಾಗಿ ನೀರು ಹರಿದು ಹೋಗುವ ಸಲುವಾಗಿ ಗ್ರೇಟಿಂಗ್‌ಗಳ ಬಳಿ ಶುಚಿತ್ವ ಕಾಪಾಡಿ. ಜೊತೆಗೆ ಸೈಡ್ ಡ್ರೈನ್‌ಗಳಲ್ಲಿ ಹೂಳೆತ್ತಿ ಸರಾಗವಾಗಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡಲು ಸೂಚನೆ ನೀಡಿದರು.

ನೋಟಿಸ್ ನೀಡಿ: ಕೇಂದ್ರ ನಗರ ಪಾಲಿಕೆಯ ಪಾದಚಾರಿ ಮಾರ್ಗಗಳಲ್ಲಿ ಜಲಮಂಡಳಿ, ಬೆಸ್ಕಾಂ ಸಂಸ್ಥೆಗಳು ಪೈಪ್‌ಗಳು ಅಥವಾ ಇತರ ಕಾಮಗಾರಿಗಳ ತ್ಯಾಜ್ಯ/ ಸಾಮಗ್ರಿಗಳನ್ನು ಪಾದಚಾರಿ ಮಾರ್ಗದಲ್ಲಿ ಹಾಕಬಾರದು. ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗುವಂತೆ ತ್ಯಾಜ್ಯ ಹಾಕಿದವರಿಗೆ ಕೂಡಲೇ ನೋಟಿಸ್ ನೀಡಿ ತೆರವುಗೊಳಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.

ತೀವ್ರ ಸ್ವಚ್ಛತೆ ಕಾಪಾಡಿ: ಬಿನ್ನಿ ಮಿಲ್ ಟ್ಯಾಂಕ್ ಬಂಡ್ ರಸ್ತೆಯಲ್ಲಿ ತೀವ್ರ ಸ್ವಚ್ಛತಾ ಕಾರ್ಯ ನಡೆಸಬೇಕು. ಇನ್ನು ಪೊಲೀಸ್ ವಸತಿಗೃಹ ಎದುರು ಪಾದಚಾರಿ ಮಾರ್ಗದ ಅತಿಕ್ರಮಣವನ್ನು ತೆರವುಗೊಳಿಸಬೇಕು. ಇದೇ ವೇಳೆ ದ್ವಿತೀಯ ಹಂತದ ಘನತ್ಯಾಜ್ಯ ಘಟಕ ಹಾಗೂ ಸ್ವಯಂ ಚಾಲಿತ ತ್ಯಾಜ್ಯ ವಿಂಗಡಣೆ ಘಟಕಕ್ಕೆ ಭೇಟಿ ನೀಡಿ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಿದರು.

ಈ ವೇಳೆ ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!