ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಕಷ್ಟ- ಸುಖದಲ್ಲಿ ಭಾಗಿಯಾಗುವ KSRTC ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ನೌಕರರ 70ಕ್ಕೂ ಹೆಚ್ಚು SSLC ಮತ್ತು ದ್ವಿತೀಯ PCUಯಲ್ಲಿ ಅಧಿಕ ಅಂಕಗಳಿಸಿರುವ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲು ಜುಲೈ 13ರಂದು ಸಮಾರಂಭ ಆಯೋಜಿಸಲಾಗಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಪಕ್ಕದಲ್ಲಿರುವ ನಯನ ಸಭಾಂಗಣದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ನಾಳೆ ಅಂದರೆ ಜು.13ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ಆಯೋಜಿಸಲಾಗಿದೆ ಎಂದು ಸಂಘದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧ್ಯಕ್ಷ ರುದ್ರೇಶ್ ಎಸ್.ನಾಯಕ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಸ್ಆರ್ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ (ವಾಸಣ್ಣ), ಮಾಜಿ ಸಚಿವ ಕೆ.ಗೋಪಾಲಯ್ಯ, ಕೆಎಸ್ಆರ್ಟಿಸಿ ಎಂಡಿ ವಿ.ಅನ್ಬುಕುಮಾರ್, ಸಿಬ್ಬಂದಿ ಮತ್ತು ಜಾಗ್ರತಾ ವಿಭಾಗದ ನಿರ್ದೇಶಕರಾದ ನಂದಿನ ದೇವಿ, ಬಿಎಂಟಿಸಿ ಎಂಡಿ ರಾಮಚಂದ್ರನ್ ಸೇರಿದಂತೆ ನಿಗಮಗಳ ಅಧಿಕಾರಿಗಳು ಮತ್ತಿತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಹೋದ್ಯೋಗಿ ಸಾರಿಗೆ ಬಂಧುಗಳು, ನಮ್ಮ ಕುಟುಂಬ ಕ್ಷೇಮಾಭಿವೃದ್ಧಿ ಸಂಘದಲ್ಲಿ ಸದಸ್ಯತ್ವ ಪಡೆದ ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವ ಈ ಸಮಾರಂಭಕ್ಕೆ ಸಂಘಕ್ಕೆ ಅರ್ಜಿ ಹಾಕಿದ ಎಲ್ಲ ನೌಕರರು ಮತ್ತು ಮಕ್ಕಳು ಹಾಗೂ ಸಂಘಟನೆಯ ಮುಖಂಡರ ಜತೆ ಸಮಸ್ತ ಸಾರಿಗೆ ನೌಕರರು ಆಗಮಿಸಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಭೈರೇಗೌಡ (ಭೈರಣ್ಣ) ಮನವಿ ಮಾಡಿದ್ದಾರೆ.