ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ಗವರ್ನರ್ ಆದೇಶವನ್ನು ಎತ್ತಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದೆ.
ಸಿಎಂ ಸಿದ್ದರಾಮಯ್ಯ ಪರ ಹಾಗೂ ದೂರುದಾರರ ವಾದ, ಪ್ರತಿವಾದ ಆಲಿಸಿದ್ದ ಹೈಕೋರ್ಟ್ ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು. ಮುಡಾ ಪ್ರಕರಣದಲ್ಲಿ ಅರ್ಜಿದಾರರ ಕ್ರಮ ಸೂಕ್ತವಾಗಿದೆ. ಹೀಗಾಗಿ ಗವರ್ನರ್ ಆದೇಶವನ್ನು ಹೈಕೋರ್ಟ್ ಒಪ್ಪಿಕೊಂಡಿದೆ.
ಹೈಕೋರ್ಟ್ನ ಈ ಮಹತ್ವದ ತೀರ್ಪಿನಿಂದ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದೆ. ಅವರ ಅರ್ಜಿ ವಜಾಗೊಂಡಿರುವುದರಿಂದ ಅಧೀನ ನ್ಯಾಯಾಲಯ ತೀರ್ಪು ಘೋಷಿಸಬಹುದು. ಈ ಪ್ರಕರಣದಲ್ಲಿ ಸೆಕ್ಷನ್ 17A ಅನುಮತಿ ಪಡೆಯುವುದು ಮುಖ್ಯವಾಗಿದೆ.
ಹೈಕೋರ್ಟ್ನ ಈ ತೀರ್ಪು ನಿರೀಕ್ಷೆ ಮಾಡಿದ್ದ ಸಿಎಂ ಸಿದ್ದರಾಮಯ್ಯನವರು ಮುಂದಿನ ಹೋರಾಟಕ್ಕೆ ಸಜ್ಜಾಗಿದ್ದಾರೆ. ಎಲ್ಲವನ್ನೂ ಎದುರಿಸೋದಕ್ಕೆ ತಯಾರಾಗಿರುವ ಸಿದ್ದರಾಮಯ್ಯ, ಪ್ರಾಸಿಕ್ಯೂಷನ್ ನೀಡಿದ್ದನ್ನು ಪ್ರಶ್ನಿಸಿ ಮುಂದಿನ ಹೋರಾಟ ನಡೆಸಲಿದ್ದಾರೆ. ಮುಂದಿನ ಕಾನೂನು ಹೋರಾಟಕ್ಕೂ ಈಗಾಗಲೇ ಸಿಎಂ ಚರ್ಚೆ ನಡೆಸಿದ್ದು, ಸುಪ್ರೀಂ ಕೋರ್ಟ್ ಬಾಗಿಲು ತಟ್ಟಲೂ ಸಿದ್ಧವಾಗಿದ್ದಾರೆ.