ಬೆಂಗಳೂರು: 59ನೇ ಘಟಿಕೋತ್ಸವದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ (Gurukiran) ಮತ್ತು ಸಮಾಜ ಸೇವಕ ಕೆ.ಎಸ್.ರಾಜಣ್ಣ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯವು (Bengaluru University) ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
59ನೇ ವಾರ್ಷಿಕ ಘಟಿಕೋತ್ಸವದಲ್ಲಿ 31,382 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದು, 26,210 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. 21,853 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆದುಕೊಂಡಿದ್ದು, 5,861 ವಿದ್ಯಾರ್ಥಿಗಳು ಪ್ರಥಮ ದರ್ಜೆ, 1,289 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಪಡೆದುಕೊಂಡು ತೇರ್ಗಡೆ ಹೊಂದಿದ್ದಾರೆ.
ಒಟ್ಟು 308 ಚಿನ್ನದ ಪದಕಗಳನ್ನು (Gold Medal) ವಿದ್ಯಾರ್ಥಿಗಳು ಮುಡಿಗೇರಿಸಿಕೊಂಡಿದ್ದು, 79 ನಗದು ಬಹುಮಾನವನ್ನು ಸ್ವೀಕರಿಸಿದ್ದಾರೆ. 140 ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಸ್ವೀಕರಿಸಿದರು.
ಈ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಎಸ್.ಅನ್ನಪೂರ್ಣ 9 ಚಿನ್ನದ ಪದಕ ಮತ್ತು ಸ್ನಾತಕ ಪದವಿ ವಿಭಾಗದಲ್ಲಿ ಅನುರಾಧ 9 ಚಿನ್ನದ ಪದಕ ಸ್ವೀಕರಿಸಿ ಅತಿ ಹೆಚ್ಚು ಚಿನ್ನದ ಪದಕ ಪಡೆದ ಪಟ್ಟಿಗೆ ಸೇರಿದ್ದಾರೆ.
ಇನ್ನು ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರೂ ಗಣ್ಯರಿಗೂ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಲಾಯಿತು. ಗೌರವ ಡಾಕ್ಟರೇಟ್ ಸ್ವೀಕರಿಸುವ ಸಂದರ್ಭದಲ್ಲಿ ಗುರುಕಿರಣ್ ಕುಟುಂಸ್ಥರು ಸೇರಿದಂತೆ ಅಶ್ವಿನಿ ಪುನೀತ್ ರಾಜ್‌ಕುಮಾರ್, ಪ್ರಿಯಾಂಕಾ ಉಪೇಂದ್ರ ಉಪಸ್ಥಿತರಿದ್ದರು.
ಬೆಂಗಳೂರು ವಿಶ್ವವಿದ್ಯಾಲಯ 59ನೇ ಘಟಿಕೋತ್ಸವಕ್ಕೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಗೈರಾದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವರು ಮತ್ತು ಸಹ ಕುಲಾಧಿಪತಿಗಳಾದ ಡಾ.ಎಂ.ಸಿ.ಸುಧಾಕರ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು.
ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ ಉಪಾಧ್ಯಕ್ಷ ಪ್ರೊ.ದೀಪಕ್ ಕುಮಾರ್ ಶ್ರೀವಾಸ್ತವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವದ ಭಾಷಣ ಮಾಡಿದರು.
ಕುಲಪತಿ ಡಾ.ಎಸ್.ಎಂ ಜಯಕರ, ಕುಲಸಚಿವ ಕೆ.ಎ.ಎಸ್ ಶೇಕ್ ಲತೀಫ್, ಪರೀಕ್ಷಾಂಗ ಕುಲಸಚಿವ ಸಿ.ಶ್ರೀನಿವಾಸ್ ಸೇರಿದಂತೆ ಸಿಂಡಿಕೇಟ್ ಸದಸ್ಯರು, ಡೀನರ್ ಉಪಸ್ಥಿತರಿದ್ದರು.