ಮಾಧ್ಯಮಗಳ ಜತೆ ಸಾಕಷ್ಟು ಮಾತಾಡಿ ಬಂದು ಎಂದಿನಂತೆ ಪಾತ್ರೆಗಳ ತೊಳೆದರು ನನ್ನಣ್ಣ: ಜ್ಯೋತಿ ಅನಂತಸುಬ್ಬರಾವ್

ಬೆಂಗಳೂರು: ನಾನು 2026 ಜನವರಿ 28 ಮಧ್ಯಾಹ್ನ ಸುಮಾರು 3.45ರ ಹೊತ್ತಿಗೆ ನನ್ನ ತಂದೆಯ ಬಳಿ ಹೋದೆ. ಅವರು ಮಾಧ್ಯಮಗಳ ಜತೆ ಸಾಕಷ್ಟು ಮಾತಾಡಿ ಬಂದು ಎಂದಿನಂತೆ ಪಾತ್ರೆಗಳನ್ನು ತೊಳೆಯುತ್ತಿದ್ದರು.

ಆಗ ನಾನು ಹೊರಹೋಗುತ್ತಿದೆ. ನನ್ನನ್ನು ಗಮನಿಸಿದ ಅವರು “ಎಲ್ಲಿಗೆ ಹೊರಟೆಯಮ್ಮ?” ಎಂದರು. ನಾನು “ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿಗೆ,” ಎಂದೆ.
“ಯಾಕೆ?” ಎಂದು ಅವರದ್ದೇ ವಿಶಿಷ್ಟ ರಾಗದಲ್ಲಿ ಕೇಳಿದರು. “ಎಸ್‌ಐಆರ್ ಬಗ್ಗೆ ಚರ್ಚಿಸಲು ನಾವೆಲ್ಲ ಒಂದು ನಿಯೋಗ ಹೋಗುತ್ತಿದ್ದೇವೆ,” ಎಂದು ತಿಳಿಸಿದೆ. “ಸರಿ, ಒಳ್ಳೆಯದು. ಹೋಗಿ ಬಾರಮ್ಮ,” ಎಂದು ಹೇಳಿದರು.
“ಆಯ್ತು ಅಣ್ಣ. ಹೋಗಿ ಬರುತ್ತೇನೆ,” ಎಂದು ಹೊರಟೆ. (ನಾನು ಮತ್ತು ನನ್ನ ಅಕ್ಕ ನಮ್ಮ ತಂದೆಯನ್ನು ಅಣ್ಣ ಎಂದು ಕರೆಯುತ್ತೇವೆ.). ನನ್ನನ್ನು ಚಳವಳಿಯ ಭಾಗವಾಗಿ ಚುನಾವಣಾ ಆಯೋಗಕ್ಕೆ ನಗುನಗುತ್ತಲೇ ಕಳಿಸಿಕೊಟ್ಟ ಕಾಮ್ರೇಡ್ ಅನಂತಸುಬ್ಬರಾವ್ ಮರುದಿನ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಸಾರಿಗೆ ನೌಕರರ ಹೋರಾಟದ ತಯಾರಿಗಾಗಿ ಕಚೇರಿಗೆ ಬರುತ್ತೇನೆಂದಿದ್ದರು.
ನಾನೂ ಸಹ ಸಂಜೆ ಕೆಲಸ ಮುಗಿಸಿ ಆಫೀಸಿಗೆ ಹೋಗಲು ಬಸ್ ಹತ್ತಿ ಅದು ಕೊಂಚ ಮುಂದೆ ಹೊರಟ ಕೂಡಲೇ ನನಗೆ ಸಿಕ್ಕ ಸುದ್ದಿ ನಿಜಕ್ಕೂ ನನ್ನ ಎದೆ ಒಡೆಯುವಂತಹದ್ದೇ ಆಗಿತ್ತು. ನಾನು ನಮ್ಮ ಸಾರಿಗೆ ಸಂಗಾತಿಗಳ ಜತೆ ಮನೆಗೆ ಹೋಗುವ ಹೊತ್ತಿಗೆ ನನ್ನ ತಂದೆ ಆಂಬುಲೆನ್ಸ್‌ನಲ್ಲಿ ಉಸಿರು ಕಳೆದುಕೊಂಡು ಮಲಗಿದ್ದರು.
ನನ್ನ ಬದುಕಿಗೆ, ನನ್ನ ಹೋರಾಟದ ಹಾದಿಗೆ ಸದಾಕಾಲ ನನ್ನ ತಾಯಿಯೊಂದಿಗೆ ಹೆಮ್ಮೆಯಿಂದ ಬೆಂಬಲವಾಗಿ ನಿಂತಿದ್ದ ನನ್ನ ಪ್ರೀತಿಯ ತಂದೆಯ ಬಗ್ಗೆ ಎಷ್ಟು ಹೇಳಿದರೂ, ಎಷ್ಟು ಬರೆದರೂ ನನ್ನ ಮನಸ್ಸಿಗೆ ತೃಪ್ತಿಯಾಗುವುದಿಲ್ಲ. ಅವರು ಒಂದು ಹಾಳೆಯಲ್ಲ, ಒಂದು ಪುಸ್ತಕವಲ್ಲ, ಒಂದು ವಿಶೇಷ ಅನುಭವಗಳನ್ನು ಹೊತ್ತ ಗ್ರಂಥಗಳ ಭಂಡಾರವೇ ಆಗಿದ್ದಾರೆ. lಜ್ಯೋತಿ ಅನಂತಸುಬ್ಬರಾವ್, ರಾಯರ ಎರಡನೇ ಪುತ್ರಿ
Related









