NEWSನಮ್ಮರಾಜ್ಯಮೈಸೂರು

ಘನತೆ, ಸಂಸ್ಕೃತಿಗೆ ಧಕ್ಕೆ ಆಗದಂತೆ ಸಾಂಸ್ಕೃತಿಕ ನಗರಿ ಮೈಸೂರು ಜಿಎಂಎ ಆಗಬೇಕು: ಸಿಎಂ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಗ್ರೇಟರ್ ಮೈಸೂರು ಆಗಬೇಕು. ಆದರೆ ನಗರದ ಈಗಿನ ಘನತೆ, ಸಂಸ್ಕೃತಿ, ವಿಶಾಲತೆಗೆ ಧಕ್ಕೆ ಆಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ‌

ಮೈಸೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಇಂದು ನಡೆದ ಗ್ರೇಟರ್ ಮೈಸೂರು ಕುರಿತ ಪ್ರಥಮ ಸಭೆಯಲ್ಲಿ ಅವರು ಮಾತನಾಡಿದರು.

ಬೆಂಗಳೂರಿನ‌ ರೀತಿ ಟ್ರಾಫಿಕ್ ಸಮಸ್ಯೆ, ಒಳಚರಂಡಿ, ಫುಟ್ ಪಾತ್, ಕುಡಿಯುವ ನೀರು, ಎಸ್‌ಟಿಪಿ ಯಾವುದರ ಸಮಸ್ಯೆಯೂ ಇರದಂತೆ ಜಿಲ್ಲಾಡಳಿತವು ಸ್ಪಷ್ಟವಾದ, ವೈಜ್ಞಾನಿಕವಾದ ಬ್ಲೂ ಪ್ರಿಂಟ್ ಸಿದ್ಧಪಡಿಸಿ, ಅನುಷ್ಠಾನ ಮಾಡಬೇಕು ಎಂದು ತಾಕೀತು ಮಾಡಿದರು.

ಇನ್ನು ಗ್ರೇಟರ್ ಮೈಸೂರು ಸುಸಜ್ಜಿತವಾಗಿರಬೇಕು ಮತ್ತು ವ್ಯವಸ್ಥಿತವಾಗಿರಬೇಕು. ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಾಗ ಈಗಿನ ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ರೂಪಿಸದೆ, ಮುಂದಿನ 15-20 ವರ್ಷಗಳ ಮುಂದಾಲೋಚನೆಯಿಂದ ವೈಜ್ಞಾನಿಕ ಯೋಜನೆ ರೂಪಿಸಬೇಕಿದೆ ಎಂದು ತಿಳಿಸಿದರು.

ಟ್ರಾಫಿಕ್ ಸಮಸ್ಯೆ ಯಾವುದೇ ಕಾರಣಕ್ಕೂ ಇರಬಾರದು. ಉದ್ಯೋಗ ಸೃಷ್ಟಿಯಿಂದ ಘನ ತ್ಯಾಜ್ಯ ನಿರ್ವಹಣೆವರೆಗೂ ಆಧುನಿಕ‌ ತಂತ್ರಜ್ಞಾನ ಬಳಕೆ ಮಾಡುವ ಬಗ್ಗೆ ಯೋಜನೆ ಸಿದ್ಧಪಡಿಸಿ, ಅನುಷ್ಠಾನ ಮಾಡಬೇಕು. ತ್ಯಾಜ್ಯ ವಿಲೇವಾರಿ, ಕೈಗಾರಿಕಾ ತ್ಯಾಜ್ಯ ವಿಲೇವಾರಿ ಎಲ್ಲವೂ ವೈಜ್ಞಾನಿಕವಾಗಿರಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಇನ್ನು ಬಡಾವಣೆಗಳ ನಿರ್ಮಾಣ ಆಗುವಾಗ ಚರಂಡಿ, ರಸ್ಯೆಗಳು, ಒಳಚರಂಡಿ, ನೀರು, ವಿದ್ಯುತ್ ಸಂಪರ್ಕದ ಜೊತೆಗೆ ಪಾರ್ಕ್ ಗಳು ಕೂಡ ವ್ಯವಸ್ಥಿತವಾಗಿರಬೇಕು. ಮೈಸೂರಿಗೆ ಮತ್ತೊಂದು ಹೊರ ವರ್ತುಲ ರಸ್ತೆ ಅಗತ್ಯ ಬೀಳುತ್ತದೆ. ಇದಕ್ಕೆ ಈಗಲೇ ಯೋಜನೆ ಸಿದ್ಧ ಮಾಡಬೇಕು. ಆದಾಯವೂ ಹೆಚ್ಚಾಗಬೇಕು. ಇದಕ್ಕೆ ಸ್ಪಷ್ಟ ಅಂದಾಜು, ಯೋಜನೆ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ವಿಶಾಲವಾದ ರಸ್ತೆಗಳು ಮೈಸೂರಿನ ಹೆಗ್ಗಳಿಕೆ, ಗ್ರೇಟರ್ ಮೈಸೂರು ಇನ್ನಷ್ಟು ಯೋಜನಾ ಬದ್ಧವಾಗಿರಬೇಕು. ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರ ಸಂಖ್ಯೆ ಹೆಚ್ಚಾಗಬೇಕಿದೆ ಎಂಬ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತವು ಒಂದು ಸಮಗ್ರವಾದ ಪ್ರಗತಿ ಯೋಜನೆ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ವಿಧಾನ ಪರಿಷತ್ ಸದಸ್ಯ ಯತಿಂದ್ರ ಸಿದ್ದರಾಮಯ್ಯ, ಚಾಮರಾಜನಗರ ಸಂಸದ ಸುನಿಲ್ ಬೋಸ್, ಶಾಸಕರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ ಸೇರಿದಂತೆ ಜಿಲ್ಲಾ ವ್ಯಾಪ್ತಿಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು, ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.

Megha
the authorMegha

Leave a Reply

error: Content is protected !!