ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ನಾಳೆ (ಸೆ.22) ಉದ್ಘಾಟನೆಯಾಗಲಿದ್ದು, ನಾಡಹಬ್ಬ ಉದ್ಘಾಟನೆಗೆ ಚಾಮುಂಡಿ ಬೆಟ್ಟದಲ್ಲಿ ಭರದ ಸಿದ್ಧತೆ ಆರಂಭವಾಗಿದೆ.
ಈಗಾಗಲೇ ಚಾಮುಂಡೇಶ್ವರಿ ಉತ್ಸವ ಮೂರ್ತಿ ಶುಚಿಗೊಳಿಸಿ ಸಿದ್ಧತೆ ಮಾಡಿಕೊಂಡ ಅರ್ಚಕರು, ಹಸಿರು ಸೀರೆಯುಡಿಸಿ ತಯಾರಿ ಮಾಡಿಕೊಂಡಿದ್ದಾರೆ.
ನಾಳೆ ಮುಂಜಾನೆಯಿಂದಲೇ ವಿವಿಧ ಅಭಿಷೇಕ, ಪೂಜಾಕೈಂಕರ್ಯಗಳು ನೆರವೇರಿದ ಬಳಿಕ ಬೆಳ್ಳಿರಥಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನ ವೇದಿಕೆಗೆ ತಂದು ಪುಷ್ಪಾರ್ಚನೆ ನಡೆಸಲಾಗುತ್ತದೆ.
ಇನ್ನು ನಾಳೆ ಸೋಮವಾರ ಬೆಳಗ್ಗೆ 10:40ರ ವೃಶ್ಚಿಕ ಶುಭ ಲಗ್ನದಲ್ಲಿ ಉತ್ಸವ ಮೂರ್ತಿಗೆ ಲೇಖಕಿ ಬಾನುಮುಷ್ತಾಕ್ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ.
ಇನ್ನು ಚಾಮುಂಡೇಶ್ವರಿ ದೇವಾಲಯ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, 1 ಸಾವಿರ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಮಳೆ ಹಿನ್ನೆಲೆ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದ್ದು, ವಿವಿಐಪಿ, ವಿಐಪಿ ಹಾಗೂ ಪಾಸ್ ಹೊಂದಿದವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.
ಇತ್ತ ದಸರಾ ಉದ್ಘಾಟನೆ ಮುಗಿಯುವವರೆಗೂ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ನಿರ್ಬಂಧ ಹೇರಲಾಗಿದ್ದು, ಆಹ್ವಾನಿತರಿಗೆ ಮಾತ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗಿದೆ. ಕಾರ್ಯಕ್ರಮದಲ್ಲಿ ದಸರಾ ಉದ್ಘಾಟಕಿ ಬಾನುಮುಷ್ತಾಕ್, ಸಿಎಂ ಸಿದ್ದರಾಮಯ್ಯ ಸೇರಿ ಹಲವು ಸಚಿವರು, ಶಾಸಕರು, ಸಂಸದರು ಭಾಗಿಯಾಗಲಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

Related
