ಮೈಸೂರು: ಈ ಬಾರಿ ನಾಡಹಬ್ಬ ದಸರಾದಲ್ಲಿ ಭಾಗವಹಿಸುವ ಅಭಿಮನ್ಯು ನೇತೃತ್ವದ 9 ಗಜಪಡೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಬಾಗಿಲು ವೀರನ ಹೊಸಹಳ್ಳಿಯಲ್ಲಿ ಇಂದು ಬುಧವಾರ 21-08-2024ರಂದು ಬೆಳಗ್ಗೆ 10.20 ರಿಂದ 10.45ರ ತುಲಾ ಶುಭಲಗ್ನದಲ್ಲಿ ಗಣ್ಯರಿಂದ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಇಂದು ಮೊದಲ ಹಂತದ ಗಜ ಪಯಣವಾಗಿದ್ದು, 9 ದಸರಾ ಆನೆಗಳು ಮೈಸೂರಿಗೆ ಆಗಮಿಸುತ್ತಿವೆ. ಗಜಪಯಣಕ್ಕೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹಾಗೂ ಅರಣ್ಯ ಸಚಿವ ಈಶ್ವರ್ಖಂಡ್ರೆ ಅಧಿಕೃತ ಚಾಲನೆ ನೀಡಿದರು. ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಮೊದಲ ಹಂತದಲ್ಲಿ ಅಭಿಮನ್ಯು ನೇತೃತ್ವದ ಕಂಜನ್, ಏಕಲವ್ಯ, ಭೀಮ, ಲಕ್ಷ್ಮೀ, ವರಲಕ್ಷ್ಮೀ, ರೋಹಿತ್, ಧನಂಜಯ ಹಾಗೂ ಗೋಪಿ ಆನೆಗಳು ಮೈಸೂರಿಗೆ ಆಗಮಿಸಲಿವೆ. ಮೈಸೂರಿನ ಅಶೋಕಪುರಂ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಲಿದ್ದು, ಆಗಸ್ಟ್ 23 ರಂದು ಅರಮನೆಗೆ ಸ್ವಾಗತಿಸಲಾಗುವುದು ಎಂದು ತಿಳಿಸಿದರು.
ಅರ್ಜುನ ಆನೆ 14 ಬಾರಿ ದಸರಾದಲ್ಲಿ ಭಾಗವಹಿಸಿ, 9 ಬಾರಿ ಅಂಬಾರಿ ಹೊತ್ತು, ವೀರ ಮರಣ ಹೊಂದಿದೆ. ಮಾನವ ಹಾಗೂ ಪ್ರಾಣಿ ಸಂಘರ್ಷಕ್ಕೆ ಕಾರಣವಾಗುತ್ತಿರುವ ಅರಣ್ಯ ನಾಶ ಮತ್ತು ಒತ್ತುವರಿಯನ್ನು ತಡೆಗಟ್ಟಬೇಕು. ಈ ಬಾರಿ ನಾಡಿನಲ್ಲಿ ಉತ್ತಮವಾಗಿ ಮಳೆಯಾಗಿದ್ದು, ಎಲ್ಲ ಜಲಾಶಯಗಳು ಭರ್ತಿಯಾಗಿವೆ. ಆದ್ದರಿಂದ ಮುಖ್ಯಮಂತ್ರಿಗಳು ಈ ಬಾರಿ ದಸರಾವನ್ನು ಅದ್ದೂರಿಯಾಗಿ ಆಚರಿಸಲು ತಿಳಿಸಿದ್ದಾರೆ ಎಂದರು.
ಕಿರು ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಅರ್ಜುನ ಆನೆಗೆ ಸ್ಮಾರಕ ನಿರ್ಮಾಣ ಮಾಡಲಾಗುತ್ತಿದೆ. 2ನೇ ಹಂತದಲ್ಲಿ 5 ಆನೆಗಳು ದಸರಾಗೆ ಆಗಮಿಸಲಿವೆ. ಮೈಸೂರಿನ ಅಂದಿನ ಮಹಾರಾಜರಾದ ಜಯ ಚಾಮರಾಜೇಂದ್ರ ಒಡೆಯರ್ ಅವರು ಎಚ್.ಡಿ. ಕೋಟೆಯ ಮಾಸ್ತಿ ಗುಡಿ ಬಳಿ ಆನೆಗಳಿಗೆ ಪೂಜೆ ಮಾಡಿ ಚಾಲನೆ ನೀಡುತ್ತಿದ್ದರು. ಈಗ ವೀರನ ಹೊಸಹಳ್ಳಿ ಬಳಿ ಚಾಲನೆ ನೀಡಲಾಗುತ್ತಿದೆ ಎಂದರು.
ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್ ಮಾತನಾಡಿ, ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು. ಅಧಿಕಾರಿಗಳು ಈ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿದ್ದಾರೆ. ನಮ್ಮ ಸರ್ಕಾರ ಎಲ್ಲ ಸಹಕಾರವನ್ನು ನೀಡುತ್ತದೆ ಎಂದು ತಿಳಿಸಿದರು.
ಅರಣ್ಯ ವಸತಿ ಧಾಮಗಳ ಅಧ್ಯಕ್ಷ ಹಾಗೂ ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಅಂಬಾರಿ ಸವಾರಿ ದಸರಾಕ್ಕೆ ಮೆರಗು. 9 ಬಾರಿ ಅಂಬಾರಿ ಹೊತ್ತು ವೀರ ಮರಣ ಹೊಂದಿರುವ ಅರ್ಜುನ ಆನೆಯ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು ಎಂದು ದಸರಾ ಹೈ ಪವರ್ ಕಮಿಟಿ ಸಭೆಯಲ್ಲಿ ಮನವಿ ಮಾಡಿದ್ದೇನೆ. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ಮಾಡುತ್ತಿದ್ದು, ಇದು ನಮಗೆ ಹೆಮ್ಮೆಯ ವಿಷಯ ಎಂದರು.
ಸಭಾ ಕಾರ್ಯಕ್ರಮದಲ್ಲಿ ಆನೆ ಮಾವುತರಾದಂತಹ ಕಾವಾಡಿಗಳಿಗೆ ಸನ್ಮಾನ ಮಾಡಲಾಯಿತು. ಇದಕ್ಕೂ ಮುನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ತಂಡಗಳು, ಹಾಗೂ ಹಾಡಿ ಜನರ ಸಾಂಪ್ರದಾಯಿಕ ನೃತ್ಯಗಳು ಗಜಪಯಾಣಕ್ಕೆ ಮೆರಗು ತಂದವು.
ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ಚಾಮರಾಜನಗರ ಸಂಸದ ಸುನಿಲ್ ಬೋಸ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕೆ.ಆರ್.ನಗರ ಶಾಸಕ ಡಿ.ರವಿಶಂಕರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ದೊಡ್ಡ ಹೆಜ್ಜುರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಮತ್ತಿತರರು ಉಪಸ್ಥಿತರಿದ್ದರು.
ಮೊದಲ ಆಗಮಿಸುತ್ತಿರುವ9 ಆನೆಗಳು: ಅಭಿಮನ್ಯು (58), ಭೀಮ (24), ಗೋಪಿ (41), ಧನಂಜಯ (43), ಕಂಜನ್(25), ರೋಹಿತ್ (22), ಲಕ್ಷ್ಮೀ (53), ವರಲಕ್ಷ್ಮೀ (67), ಏಕಲವ್ಯ (38).
ಇನ್ನು ಎರಡನೇ ಹಂತದಲ್ಲಿ 5 ಆನೆಗಳು ಆಗಮಿಸಲಿವೆ. ಹೆಚ್ಚುವರಿಯಾಗಿ 4 ಮೀಸಲು ಆನೆಗಳನ್ನು ಗುರುತಿಸಲಾಗಿದೆ. ದಸರಾದಲ್ಲಿ ಪಾಲ್ಗೊಳ್ಳಲು ಒಟ್ಟು ಹದಿನಾಲ್ಕು ಆನೆಗಳು ಮಾತ್ರ ಮೈಸೂರಿಗೆ ಆಗಮಿಸುತ್ತಿವೆ. ಅಗತ್ಯ ಬಿದ್ದರೆ ಮಾತ್ರ ಮೀಸಲು ಆನೆಗಳನ್ನು ಕರೆತರಲು ತೀರ್ಮಾನ ಕೈಗೊಳ್ಳಲಾಗಿದೆ.
ಈ ಮಧ್ಯೆ, ನಾಲ್ಕು ಮೀಸಲು ಆನೆಗಳು ಸೇರಿ ಒಟ್ಟು 18 ಆನೆಗಳಿಗೆ 87,50,000 ವಿಮೆ ಮಾಡಿಸಲಾಗಿದೆ. ಅರಣ್ಯಧಿಕಾರಿಗಳು, ಮಾವುತರು, ಕಾವಾಡಿಗಳಿಗೆ ತಲಾ 2 ಲಕ್ಷದಂತೆ 50 ಜನರಿಗೆ 1 ಕೋಟಿ ವಿಮೆ ಸೌಲಭ್ಯ ಕಲ್ಪಿಸಲಾಗಿದೆ.