NEWSನಮ್ಮಜಿಲ್ಲೆನಮ್ಮರಾಜ್ಯ

ಮೈಸೂರು: ಬಿಸಿಲ ಝಳದಿಂದ ಬಳಲಿ ಮಡಕೆ ಫಿಲ್ಟರ್‌ಗಳ ಮೊರೆ ಹೋಗುತ್ತಿರುವ ಜನತೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚಾಗುತ್ತಿರುವುದರಿಂದ ಜನರು ಕೂತಲ್ಲೇ ಕೂರಲಾಗದೆ ನಿಂತಲೇ ನಿಲ್ಲಲಾಗದೆ ಚಟಪಡಿಸುತ್ತಿದ್ದಾರೆ.

ಈ ನಡುವೆ ಈ ವೇಳೆಗಾಗಲೇ ಕೃಪೆ ತೋರಬೇಕಿದ್ದ ವರುಣ ಇದುವರೆಗೂ  ಮೈಸೂರಿನತ್ತ ಸುಳಿದಿಲ್ಲ. ಹೀಗಾಗಿ ಬಿಸಿಲ ಝಳ ನೆತ್ತಿಯನ್ನು ಸುಡುತ್ತಿದ್ದು, ದಾಹ ತಣಿಸುವುದೇ ಕಷ್ಟಕರವಾಗಿ ಪರಿಣಮಿಸಿದೆ.

ಜತೆಗೆ ಸಾಂಕ್ರಾಮಿಕ ರೋಗದ ಭಯವೂ ಜನರನ್ನು ಕಾಡುತ್ತಿದ್ದು ಕುದಿಸಿ ಆರಿಸಿದ ನೀರಿಗೆ ಮನೆಗಳಲ್ಲಿ ಆದ್ಯತೆ ನೀಡುತ್ತಿರುವ ಪರಿಣಾಮ ನೀರನ್ನು ಸಂಗ್ರಹಿಸಿಡುವ ಸಲುವಾಗಿ ಹೆಚ್ಚಿನವರುಮಡಕೆಗಳ (ಮಣ್ಣಿನ ಫಿಲ್ಟರ್ ಗಳ) ಮೊರೆ ಹೋಗಿರುವುದು ಎದ್ದು ಕಾಣಿಸುತ್ತಿದೆ.

ಮೈಸೂರಿನಲ್ಲಿ ಬೇಸಿಗೆ ಬಂತೆಂದರೆ ಮಣ್ಣಿನ ಮಡಕೆಗಳಿಗೆ ಬೇಡಿಕೆ ಹೆಚ್ಚುತ್ತಿತ್ತು. ಆದರೀಗ ಮಣ್ಣಿನ ಆಕರ್ಷಕ ಫಿಲ್ಟರ್ ಗಳು ಮಾರುಕಟ್ಟೆಗೆ ಬಂದಿರುವ ಕಾರಣ ಹೆಚ್ಚಿನವರು ಅದರತ್ತ ಆಕರ್ಷಿತರಾಗುತ್ತಿದ್ದಾರೆ. ಮನೆಗೊಂದಿರಲಿ ಎಂದು ಖರೀದಿಸುತ್ತಿದ್ದಾರೆ. ಹೀಗಾಗಿ ಬೇಡಿಕೆ ಹೆಚ್ಚಿರುವ ಕಾರಣ ನಗರದ ವಿವಿಧ ಕಡೆಗಳಲ್ಲಿ ಮಾರಾಟ ಮಾಡುವವರ ಸಂಖ್ಯೆಯೂ ಅಷ್ಟೇ ಅಧಿಕವಾಗಿದೆ.

ಹಾಗೆನೋಡಿದರೆ ಹಿಂದಿನ ಕಾಲದಲ್ಲಿ ಮಣ್ಣಿನ ಮಡಕೆಯಲ್ಲಿ ಕುದಿಸಿ ಆರಿಸಿದ ನೀರನ್ನು ಸಂಗ್ರಹಿಸಿಟ್ಟುಕೊಂಡು ಕುಡಿಯುತ್ತಿದ್ದರು. ಇದರಿಂದ ನೀರಡಿಕೆ ಕಡಿಮೆಯಾಗುತ್ತಿತ್ತಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಸಹಕಾರಿಯಾಗಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಮಣ್ಣಿನ ಮಡಕೆ ಬಳಕೆ ಕಡಿಮೆಯಾಗಿದೆ.

ಆದರೆ ಮಣ್ಣಿನ ಮಡಿಕೆಯಲ್ಲಿ ನೀರು ಸಂಗ್ರಹಿಸಿಟ್ಟುಕೊಂಡು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂಬುದು ಗೊತ್ತಿರುವ ಕಾರಣ ಜನ ಮಣ್ಣಿನ ಮಡಕೆಗಳನ್ನು ಇಷ್ಟಪಡುತ್ತಿದ್ದಾರೆ.

ಜನರ ಅನುಕೂಲಕ್ಕಾಗಿ ಮಣ್ಣಿನ ಫಿಲ್ಟರ್‍ಗಳನ್ನು ಹೊರ ರಾಜ್ಯಗಳಿಂದ ತಂದು ತಯಾರಿಸಿ ಮಾರಾಟ ಮಾಡಲಾಗುತ್ತಿದ್ದು, ಈಗ ನಗರದಲ್ಲಿ ಎಲ್ಲೆಂದರಲ್ಲಿ ಸುಂದರವಾಗಿ ಜೋಡಿಸಿಟ್ಟ ಮಣ್ಣಿನ ಸುಂದರ ಫಿಲ್ಟರ್‌ ಗಳು ಕಂಡು ಬರುತ್ತವೆ. ಮನೆಗಳಲ್ಲಿ ಆಧುನಿಕ ತಂತ್ರಜ್ಞಾನಗಳಿಂದ ಹಲವು ಬಗೆಯ ಫಿಲ್ಟರ್‌ಗಳು ಇದ್ದರೂ ಮಣ್ಣಿನ ಫಿಲ್ಟರ್ ಸೇರಿದಂತೆ ಮಣ್ಣಿನ ಪಾತ್ರೆಗಳತ್ತ ಜನ ಆಕರ್ಷಿತರಾಗುತ್ತಿದ್ದಾರೆ.

ಬಿಹಾರ, ಗುಜರಾತ್, ರಾಜಸ್ತಾನದಿಂದ ಬಂದ ವ್ಯಾಪಾರಿಗಳು ಇಲ್ಲಿನ ಫ್ಯಾಷನ್ ಪ್ರಿಯರ ಇಷ್ಟದಂತೆಯೇ ಆಕರ್ಷಕ, ಕಲಾತ್ಮಕ ಮಣ್ಣಿನ ಫಿಲ್ಟರ್‌ಗಳನ್ನು ತಂದು ರಸ್ತೆ ಬದಿಗಳಲ್ಲಿ ಮಾರಾಟ ಮಾಡುತ್ತಿದ್ದು, ಇವು ನೋಡಲು ವಿಭಿನ್ನ ಮತ್ತು ವಿಶಿಷ್ಟವಾಗಿರುವುದರಿಂದ ಜತೆಗೆ ಮನೆಗೂ ಶೋಭೆ ತರುತ್ತಿದ್ದು, ಅವುಗಳಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಂಡು ಕುಡಿಯುತ್ತಿದ್ದಾರೆ.

ಈ ಬಾರಿ ಬಿಸಿಲ ಝಳ ಹೆಚ್ಚಾಗಿದೆ. ಇಷ್ಟರಲ್ಲಿಯೇ ಮಳೆ ಸುರಿಯಬೇಕಾಗಿತ್ತಾದರೂ ಇದುವರೆಗೂ ಕೃಪೆ ತೋರಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಬೇಸಿಗೆ ಝಳ ಹೆಚ್ಚಾಗಿದ್ದು, ಹಗಲು ಹೊತ್ತಿನಲ್ಲಿ ನಡೆದಾಡುವುದೇ ಕಷ್ಟವಾಗಿದೆ. ಸ್ವಲ್ಪ ನಡೆದಾಡಿದರೂ ಏನಾದರೂ ಕುಡಿಯಬೇಕೆನಿಸುತ್ತದೆ.

ದೇಹವನ್ನು ತಣ್ಣಗೆ ಮಾಡುವ ಸಲುವಾಗಿ ರೆಫ್ರಿಜೇಟರ್ ನೀರನ್ನು ಹೆಚ್ಚು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳಿತಲ್ಲ. ಹೀಗಾಗಿ ಮಣ್ಣಿನ ಫಿಲ್ಟರ್ ಗಳ ನೀರು ಆಸರೆಯಾಗಿದೆ. ಕಳೆದ ವರ್ಷವೂ ಬೇಸಿಗೆಯಲ್ಲಿ ಮಳೆ ಸುರಿದಿರಲಿಲ್ಲ. ಈ ಬಾರಿಯೂ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ.

ಬೇಸಿಗೆಯ ದಿನಗಳು ನಮ್ಮನ್ನು ಹಲವು ಬಗೆಯಲ್ಲಿ ಕಾಡುವ ದಿನಗಳಾಗಿದ್ದು, ಈ ವೇಳೆಯಲ್ಲಿ ನಮ್ಮನ್ನು ನಾವು ಕಾಪಾಡಿ ಕೊಳ್ಳುವುದು ಬಹು ಮುಖ್ಯವಾಗಿದೆ. ಆದ್ದರಿಂದ ಮಣ್ಣಿನ ಮಡಕೆ ಮತ್ತು ಮಣ್ಣಿನ ಫಿಲ್ಟರ್ ಗಳಿಗೆ ತುಸು ಬೆಲೆ ಹೆಚ್ಚೇ ಆದರೂ ಅದನ್ನು ಖರೀದಿಸುವತ್ತ ಗಮನಹರಿಸುತ್ತಿದ್ದಾರೆ. ಹಾಗಾಗಿಯೇ ಈ ಸಮಯದಲ್ಲಿ ಬೇಡಿಕೆ ಹೆಚ್ಚಾಗಿದೆ.

Leave a Reply

error: Content is protected !!
LATEST
ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಬಿಜೆಪಿಗೆ ಜೈ ಎಂದ ಪ್ರಜ್ವಲ್ ರೇವಣ್ಣ ವಿರುದ್ಧ ಪಕ್ಷದಿಂದ ನಿರ್ದಾಕ್ಷಿಣ್ಯ ಕ್ರಮ : ಎಚ್‌ಡಿಕೆ ಪ್ರಜ್ವಲ್ ರೇವಣ್ಣನ ಪಕ್ಷದಿಂದ ಅಮಾನತು ಮಾಡಿ: ಎಚ್‌ಡಿಡಿಗೆ ಶಾಸಕ ಶರಣಗೌಡ ಕಂದಕೂರ ಒತ್ತಾಯ ಉಪ್ಪು ತಿಂದವರು ನೀರು ಕುಡಿಯಲೇ ಬೇಕು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಮಾಜಿ ಸಿಎಂ ಎಚ್‌ಡಿಕೆ ಖ್ಯಾತ ಭೋಜಪುರಿ ನಟಿ ಅಮೃತಾ ಪಾಂಡೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು ಲೈಂಗಿಕ ಪ್ರಕರಣ: ಶಾಸಕ ಎಚ್‌.ಡಿ.ರೇವಣ್ಣ ಪುತ್ರ ಪ್ರಜ್ವಲ್ ವಿರುದ್ಧ ಎಸ್‌ಐಟಿ ತನಿಖೆ ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಇನ್ನಿಲ್ಲ ಕಾಲೇಜು ಸಹಪಾಠಿಗಳ ಮೇಲೆ ಹಲ್ಲೆ ಪ್ರಕರಣ: ಏ.28ರಂದು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ KKRTC: ಎಲ್ಲ ಸಿಬ್ಬಂದಿಗಳು ಸಮವಸ್ತ್ರ ಧರಿಸುವುದು ಕಡ್ಡಾಯ - ವಿಜಯಪುರ ಡಿಸಿ ಸ್ಪಷ್ಟನೆ ಕರ್ತವ್ಯ ನಿರತ ಸರ್ಕಾರಿ ಬಸ್‌ ನಿರ್ವಾಹಕರ ಮೇಲೆ ಹಲ್ಲೆ: ಮೂವರ ವಿರುದ್ಧ ದೂರು ದಾಖಲು