ಮೈಸೂರು: ತಮಿಳುನಾಡಿನ ತಿರುಚಿಯಲ್ಲಿ ಇದು ನಡೆಯುತ್ತಿರುವ ರಾಷ್ಟ್ರೀಯ ರೈತ ಸಮಾವೇಶದಲ್ಲಿ ಭಾಗವಹಿಸಲು ಕರ್ನಾಟಕದಿಂದ ನೂರಾರು ರೈತರು ಸೋಮವಾರ ಮೈಸೂರಿನಿಂದ ರೈಲಿನ ಮೂಲಕ ತೆರಳಿದ್ದಾರೆ.
ತಮಿಳುನಾಡಿನ ತಿರುಚಿಯಲ್ಲಿ ನಡೆಯುವ ರಾಷ್ಟ್ರೀಯ ರೈತ ಸಮಾವೇಶಕ್ಕೆ ಕರ್ನಾಟಕದಿಂದ ನೂರಾರು ರೈತರು ತೆರಳಿದ್ದು. ಕರ್ನಾಟಕ ರಾಜ್ಯ ಸೇರಿದಂತೆ ದೇಶಾದ್ಯಂತ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಜಾರಿಯಾಗಬೇಕು.
ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ಡಾ.ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಪ್ರಬಲಗೊಳಿಸಲು ಮತ್ತು ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಸಿದ್ದಪಡಿಸಲಾಗುವುದು.
ಅಲ್ಲದೆ ರಾಷ್ಟ್ರದ ಎಲ್ಲ ರಾಜ್ಯಗಳ ರೈತ ಮುಖಂಡರು ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚ (ರಾಜಕೀಯೆತರ) ಸಂಘಟನೆಯ ದಕ್ಷಿಣ ಭಾರತ ಸಂಚಾಲಕ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.
ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೆತರ ಸಂಘಟನೆಯ ಮುಖಂಡ ಜಗಜಿತ್ ಸಿಂಗ್ ದಲೆವಾಲಾ ಮತ್ತಿತರ ಮುಖಂಡರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆದು ಸಿಖ್ ಧರ್ಮದ ಲಾಂಛನವನ್ನು ಬಳಸದೆ ವಿಮಾನ ಪ್ರವೇಶಿಸಬೇಕೆಂಬ ಖ್ಯಾತೆ ತೆಗೆದಿದ್ದಾರೆ ಪೊಲೀಸರು.
ನಂತರ ಕಾಯ್ದಿರಿಸಿರುವ ವಿಮಾನ ಟಿಕೆಟ್ ರದ್ದುಗೊಳಿಸಿ ವಾಮಮಾರ್ಗದ ಮೂಲಕ ಚಳವಳಿಯನ್ನ ಹತ್ತಿಕುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಇನ್ನು ದಕ್ಷಿಣ ಭಾರತದಲ್ಲಿ ರೈತ ಚಳವಳಿಯ ಪ್ರಾಬಲ್ಯವನ್ನು ತಡೆಯಲು ಯತ್ನಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಮುಖಂಡರಿಗೆ ತಮಿಳುನಾಡಿನ ರಾಷ್ಟ್ರೀಯ ರೈತ ಸಮಾವೇಶಕ್ಕೆ ಬರಲು ಅವಕಾಶ ಕಲ್ಪಿಸದಿದ್ದರೆ ದೇಶಾದ್ಯಂತ ಹೋರಾಟಕ್ಕೆ ಕರೆ ಕೊಡಬೇಕಾಗುತ್ತದೆ ಎಂದು ಕುರುಬೂರ್ ಶಾಂತಕುಮಾರ್ ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ರೈತರ ಜತೆ ತಮಿಳುನಾಡಿಗೆ ಹೋಗುವಾಗ ಎಚ್ಚರಿಸಿದರು.
ಮೇಕೆದಾಟು ಅಣೆಕಟ್ಟೆ ನಿರ್ಮಿಸಿ ಸಂಕಷ್ಟಕಾಲದಲ್ಲಿ ಕಾವೇರಿ ನೀರನ್ನ ಬಳಸಿಕೊಳ್ಳುವ ಬಗ್ಗೆ ತಮಿಳುನಾಡಿನ ರೈತ ಮುಖಂಡರ ಜತೆ ಚರ್ಚಿಸಲು ತಂಜಾವೂರಿಯಲ್ಲಿ ಎರಡು ರಾಜ್ಯಗಳ ರೈತ ಮುಖಂಡರ ಸಭೆ ನಡೆಸಲಾಗುತ್ತಿದೆ ಎಂದು ಇದೇ ವೇಳೆ ತಿಳಿಸಿದರು.