ಮೈಸೂರು: ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಮೈಸೂರಿನ ರಾಜಮನೆತನ ವಿರೋಧ ವ್ಯಕ್ತಪಡಿಸಿರುವುದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದು, ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರನ್ನು ಕೆಲವು ಸೈದ್ಧಾಂತಿಕ ವಿಚಾರದಲ್ಲಿ ಮಾತ್ರ ವಿರೋಧಿಸುತ್ತೇನೆ. ಬೆಟ್ಟದ ಯದ್ವಾತದ್ವಾ ಬೆಳವಣಿಗೆ ನಿಯಂತ್ರಿಸಲು ನ್ಯೂನತೆಗಳನ್ನು ಸರಿದೂಗಿಸಲು ಪ್ರಾಧಿಕಾರದ ಅವಶ್ಯಕತೆ ಇದೆ ಎಂದು ಹೇಳುವ ಮೂಲಕ ಸಿಎಂ ನಡೆ ಸರಿ ಇದೆ ಎಂದು ಹೇಳಿದ್ದಾರೆ.
ಬೆಟ್ಟಕ್ಕೆ ಪೊಲೀಸ್ ಠಾಣೆ ಹಾಗೂ ಆಸ್ಪತ್ರೆ ಬೇಕು. ಇದೆಲ್ಲ ಆಗಬೇಕಾದರೆ ಒಂದು ಪ್ರಾಧಿಕಾರ ಬೇಕೇಬೇಕು. ಈ ಹಿಂದೆ ಬಿಜೆಪಿ ಸರ್ಕಾರದಲ್ಲೂ ಪ್ರಾಧಿಕಾರ ಬೇಕೆಂದು ಧ್ವನಿ ಎತ್ತಿದ್ದೆವು. ಸಿದ್ದರಾಮಯ್ಯ ಅವರು ಪ್ರಾಧಿಕಾರ ರಚನೆ ಮಾಡಿದ್ದಾರೆ. ಖಂಡಿತ ಇದು ಒಳ್ಳೆಯ ಕೆಲಸ ಎಂದು ಹೇಳಿದ್ದಾರೆ.
ಆಸ್ತಿ ಗಲಾಟೆಯ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ದೇವರು ಭಕ್ತರಿಗೆ ಸೇರಬೇಕು. ಭಕ್ತರಿಗೆ ಸೌಲಭ್ಯ ಕಲ್ಪಿಸಬೇಕಾಗಿದ್ದು ಸರ್ಕಾರದ ಕರ್ತವ್ಯ ಎಂದು ಹೇಳುವ ಮೂಲಕ ಚಾಮುಂಡಿ ಬೆಟ್ಟದ ಪ್ರಾಧಿಕಾರದ ಪರ ಬ್ಯಾಟಿಂಗ್ ಬೀಸಿದ್ದಾರೆ.
ಅಮೃತ್ ಯೋಜನೆ ಕುಡಿಯುವ ನೀರು ಬೆಟ್ಟಕ್ಕೆ ತಲುಪದೇ ಇರಲು ಕಾರಣ ಯಾರು? ನಾನು ಹೇಳಿದರೆ ವಿವಾದ ಆಗುತ್ತದೆ. ಪೈಪ್‌ಲೈನ್ ಎಲ್ಲಿ ತಡೆದು ನಿಂತಿದೆ? ನೀವೇ ಹೋಗಿ ಹುಡುಕಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಂಸದ ಯದುವೀರ್ ಒಡೆಯರ್‌ಗೆ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ.
ಯುದವೀರ್ ಹೇಳಿದ್ದೇನು?: ಚಾಮುಂಡಿ ಬೆಟ್ಟ ನಮ್ಮ ಸಂಸ್ಥಾನಕ್ಕೆ ಸೇರಿದ್ದು. ಚಾಮುಂಡಿ ಬೆಟ್ಟ ಈಗ ಹೇಗಿದೆಯೋ ಮುಂದೆಯೂ ಹಾಗೆಯೇ ಇರಲಿ. ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಪ್ರಾಧಿಕಾರದ ರಚನೆ ಅಗತ್ಯವಿಲ್ಲ. ದೇವಸ್ಥಾನದ ಜತೆ ಯಾವ ಸಂಸ್ಥಾನದ ಸಂಬಂಧ ಇದೆಯೋ ಆ ಸಂಸ್ಥಾನಕ್ಕೆ ದೇವಸ್ಥಾನ ಸೇರಬೇಕು ಎಂದು ಪರೋಕ್ಷವಾಗಿ ಚಾಮುಂಡಿ ಬೆಟ್ಟ ತಮ್ಮ ಆಸ್ತಿ ಎಂದು ಹೇಳಿದ್ದರು.
ಹಿನ್ನೆಲೆ ಏನು?: ಚಾಮುಂಡಿ ಬೆಟ್ಟವನ್ನು ಸಮಗ್ರ ಅಭಿವೃದ್ಧಿ ಮಾಡುವ ಉದ್ದೇಶದಿಂದ ಸರ್ಕಾರ ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಈ ಪ್ರಾಧಿಕಾರ ರಚನೆಗೆ ರಾಜಮನೆತನ ವಿರೋಧ ವ್ಯಕ್ತಪಡಿಸಿದೆ. ರಾಜಮನೆತನದ ವಿರೋಧದ ನಡೆವೆಯೂ ಸೆ.3 ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಧಿಕಾರದ ಮೊದಲ ಸಭೆ ನಡೆದಿತ್ತು.
ಕೋರ್ಟ್‌ನಲ್ಲಿದೆ ಪ್ರಕರಣ: ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಸಿಂಧುತ್ವ ಪ್ರಶ್ನಿಸಿ ಮೈಸೂರು ಮಹಾರಾಜ ಮನೆತನದ ಪ್ರಮೋದಾದೇವಿ ಒಡೆಯರ್ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಇನ್ನು ವಿಚಾರಣೆಯ ವೇಳೆ ರಾಜವಂಶ ಪರ ವಕೀಲರು, ಚಾಮುಂಡೇಶ್ವರಿ ಕ್ಷೇತ್ರದ ಮಾಲೀಕತ್ವದ ಬಗ್ಗೆ ಕಳೆದ 20 ವರ್ಷಗಳಿಗೂ ಹಿಂದಿನಿಂದ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆದಿದೆ.
ರಾಜಮನೆತನ ಸಲ್ಲಿಸಿದ್ದ ಅರ್ಜಿಯನ್ನು 2004ರಲ್ಲಿ ಹೈಕೋರ್ಟ್ ವಜಾಗೊಳಿಸಿದೆ. ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ಹಂತದಲ್ಲಿದೆ ಎಂದು ಗಮನಕ್ಕೆ ತಂದಿದ್ದರು. ಈ ವಾದವನ್ನು ಅಲಿಸಿದ ಬಳಿಕ ಹೈಕೋರ್ಟ್ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದ ಸ್ಥಿರ ಮತ್ತು ಚರ ಆಸ್ತಿಗಳನ್ನು ಸದ್ಯ ಯಾವುದೇ ರೀತಿಯಲ್ಲಿ ಬದಲಾವಣೆ ಮಾಡಬಾರದು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಸೆ.25ಕ್ಕೆ ಅರ್ಜಿಯನ್ನು ಮುಂದೂಡಿದೆ.