CRIMENEWSದೇಶ-ವಿದೇಶ

ನೇಪಾಳ ಧಗಧಗ: ಅಧ್ಯಕ್ಷ, ಪ್ರಧಾನಿ, ಸಂಸತ್‌ಗೆ ದಾಳಿಯಿಟ್ಟು ಹಿಂಸಾಚಾರ

ವಿಜಯಪಥ ಸಮಗ್ರ ಸುದ್ದಿ

ಕಠ್ಮಂಡು: ಸಾಮಾಜಿಕ ಜಾಲತಾಣಗಳ ನಿರ್ಬಂಧ ಮಾಡಿದ್ದಕ್ಕೆ ಯುವಕರು ದಂಗೆ ಎದ್ದಿರುವ ಕಾರಣ ಭಾರತದ ನೆರೆಯ ರಾಷ್ಟ್ರ ನೇಪಾಳ ಹೊತ್ತಿ ಉರಿಯುತ್ತಿದೆ. ಸತತ 3ನೇ ದಿನವೂ ನೇಪಾಳ ಕುದಿಯುತ್ತಿದೆ.

ಈ ಮೂಲಕ ಆಂತರ್ಯುದ್ಧಕ್ಕೆ ಶ್ರೀಲಂಕಾ, ಬಾಂಗ್ಲಾದೇಶದಂತೆ ನೇಪಾಳವೂ ಬದಲಾಗಿದ್ದು, ರಾಜಧಾನಿ ಕಠ್ಮಂಡುವಿನಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಯುವಕರ ಕೋಪಾತಾಪಕ್ಕೆ ನೇಪಾಳದ ಪ್ರಧಾನಿ ಓಲಿ ಸರ್ಕಾರ ಮಂಡಿಯೂರಿದೆ. ಪರಿಣಾಮ 120 ವರ್ಷಗಳಷ್ಟು ಹಳೆಯದಾದ ಅರಮನೆ ಧಗಧಗ ಹೊತ್ತಿ ಉರಿದಿದೆ.

ಭುಗಿಲೆದ್ದ ʻಜೆನ್ ಝಡ್‌ʼ ರಣಕೋಪಕ್ಕೆ ಕೆಪಿ ಶರ್ಮಾ ಓಲಿ ಪ್ರಧಾನಿ ಹುದ್ದೆಯನ್ನೇ ತ್ಯಜಿಸಿದ್ದಾರೆ. ಅಧ್ಯಕ್ಷ ರಾಮಚಂದ್ರ ಪೌಡೆಲ್ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ಸೋಷಿಯಲ್ ಮೀಡಿಯಾ ನಿಷೇಧ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆದ ಬೆನ್ನಲ್ಲೇ ನಿಷೇಧ ಆದೇಶವನ್ನು ನಿನ್ನೆ ರಾತ್ರಿಯೇ ವಾಪಸ್ ಪಡೆದಿದ್ದರೂ, ಹಿಂಸಾಚಾರ ತಣ್ಣಗಾಗಿಲ್ಲ. ಪ್ರಧಾನಿ ಕೆ.ಪಿ.ಶರ್ಮಾ ಓಲಿ ರಾಜೀನಾಮೆ ನೀಡಬೇಕು ಎಂದು ಯುವಕರು ಪಟ್ಟು ಹಿಡಿದು ಇಂದು ಕೂಡ ಗಲಭೆ ಸೃಷ್ಟಿಸಿದ್ರು. ಕಠ್ಮಂಡುವಿನಲ್ಲಿ ಕರ್ಫ್ಯೂ ಮೀರಿ ಯುವಕರು ದಂಗೆ ಎದ್ದಿದ್ದಾರೆ.

ಇದರ ಪರಿಣಾಮ ಅಧ್ಯಕ್ಷರ ಭವನ, ಪ್ರಧಾನಿ ನಿವಾಸ, ಸಂಸತ್ ಭವನ, ಮಾಜಿ ಪಿಎಂ ಪ್ರಚಂಡ್ ಮನೆ, ಸಚಿವರ ನಿವಾಸಗಳನ್ನು ಗುರಿಯಾಗಿಸಿ ಕಲ್ಲು ತೂರಾಟ ನಡೆದಿದೆ. ಇದೇ ವೇಳೆ ವರ್ಷವಿಡೀ ಪ್ರವಾಸಿಗರಿಂದ ತುಂಬಿರುತ್ತಿದ್ದ ಏಷ್ಯಾದ ಅತಿದೊಡ್ಡ ಅರಮನೆ (Asias Largest Palace) ʻಸಿಂಹ ದರ್ಬಾರ್‌ʼಗೂ (Singha Durbar) ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ. ಅರಮನೆ ಧಗಧಗಿಸಿದ್ದು, ಭಾರೀ ಪ್ರಮಾಣದ ಸಂಪತ್ತು ನಷ್ಟವಾಗಿದೆ.

120 ವರ್ಷಗಳಷ್ಟು ಹಳೆಯದಾದ ಅರಮನೆ ಧಗಧಗ: ಹೊಸ ವಿಡಿಯೋಗಳು ವೈರಲ್‌ ಆಗಿದ್ದು, ಸುಮಾರು 120 ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಏಷ್ಯಾದ ಅತಿದೊಡ್ಡ ಅರಮನೆಯಾದ ʻಸಿಂಹ ದರ್ಬಾರ್‌ʼಗೂ ಬೆಂಕಿ ಹಚ್ಚಿದ್ದಾರೆ. 1903ರಲ್ಲಿ ನೇಪಾಳದ ಪ್ರಧಾನಿಯ ಅಧಿಕೃತ ನಿವಾಸವಾಗಿ ಈ ಅರಮನೆಯನ್ನ ನಿರ್ಮಿಸಲಾಗಿತ್ತು. ಬಳಿಕ ಐತಿಹಾಸಿಕ ಅರಮನೆಯಾಗಿ ಗುರುತಿಸಿಕೊಂಡಿದ್ದ ಈ ಅರಮನೆಯನ್ನ ಪ್ರವಾಸಿ ತಾಣವಾಗಿಯೂ ಮಾಡಲಾಗಿತ್ತು. ಇದೀಗ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿದ್ದಲ್ಲದೇ ಇದ್ದಬದ್ದ ವಸ್ತುಗಳೆಲ್ಲವನ್ನು ಲೂಟಿ ಮಾಡಿದೆ.

ನೇಪಾಳದಲ್ಲಿ ಅರಾಜಕತೆ ಸೃಷ್ಟಿಗೆ ಕಾರಣವೇನು?
* ಸಾಮಾಜಿಕ ಜಾಲತಾಣಗಳ ನಿರ್ಬಂಧ ಹೋರಾಟ ನೆಪವಷ್ಟೇ
* ಕೆಪಿ ಶರ್ಮಾ ಓಲಿ ಸಮ್ಮಿಶ್ರ ಸರ್ಕಾರ ವಿರುದ್ಧ ಇದ್ದ ಅಸಮಾಧಾನ
* ಭ್ರಷ್ಟಾಚಾರ, ಪಾರದರ್ಶಕತೆ ಕೊರತೆ ಆರೋಪ
* ಯುವಕರಿಗೆ ಉದ್ಯೋಗಾವಕಾಶಗಳ ಕೊರತೆ
* ಆರ್ಥಿಕ ಅಭಿವೃದ್ಧಿಯಲ್ಲಿನ ಅಸಮಾನತೆ ಬಗ್ಗೆ ಟೀಕೆ

Advertisement

ನೇಪಾಳದ ಆಡಳಿತ ವಹಿಸಿಕೊಂಡ ಸೇನೆ: ಇನ್ನೂ ನೇಪಾಳದಲ್ಲಿ ಮೂರನೇ ದಿನವೂ ಪ್ರತಿಭಟನೆ ನಿಲ್ಲದ ಹಿನ್ನೆಲೆ ಸೇನೆಯು ಆಡಳಿತವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಸೇನಾ ಮುಖ್ಯಸ್ಥ ಜನರಲ್ ಅಶೋಕ್ ರಾಜ್ ಶಿಗ್ಡೆಲ್ ಆಡಳಿತ ವಹಿಸಿಕೊಂಡಿದ್ದಾರೆ. ಹೊಸ ಸರ್ಕಾರ ರಚನೆಯಾಗುವವರೆಗೆ ಅಶೋಕ್ ರಾಜ್ ಶಿಗ್ಡೆಲ್ ನೇತೃತ್ವದಲ್ಲೇ ಆಡಳಿತ ನಡೆಯಲಿದೆ. ನೇಪಾಳದ ಸ್ವಾತಂತ್ರ್ಯ, ಸಾರ್ವಭೌಮತ್ವ, ರಾಷ್ಟ್ರೀಯ ಏಕತೆ, ನೇಪಾಳಿಗರ ಸುರಕ್ಷತೆ ಕಾಪಾಡಲು ಬದ್ಧ ಅಂತ ಅಶೋಕ್‌ ರಾಜ್‌ ಶಿಗ್ಡೆಲ್ ಹೇಳಿದ್ದಾರೆ.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!