ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ (NWKRTC) ಸಂಸ್ಥೆಯ ನೌಕರರಿಗೆ ಆಯುಧ ಪೂಜೆ ಹಾಗೂ ವಿಜಯ ದಶಮಿ ಹಬ್ಬದ ಮುನ್ನವೇ ಸೆಪ್ಟೆಂಬರ್ ತಿಂಗಳ ವೇತನದಲ್ಲಿ 15 ಸಾವಿರ ರೂ.ಗಳನ್ನು ಮುಂಗಡವಾಗಿ ಸೆ.30ರಂದು ಪಾವತಿಸುವುದಾಗಿ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ತಿಳಿಸಿದ್ದಾರೆ.
ಹುಬ್ಬಳ್ಳಿಯ ಕೇಂದ್ರ ಕಚೇರಿಯಲ್ಲಿ ವಾಯುವ್ಯ ವಲಯ ನೌಕರರ ಕೂಟ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿಯಾಗಿ ನಾಡಹಬ್ಬ ದಸರಾ ನಿಮಿತ್ತ ವೇತನವನ್ನು 30.09.2025 ರಂದು ಪಾವತಿ ಮಾಡಲು ವಿನಂತಿಸಿ ಮನವಿಪತ್ರ ಸಲ್ಲಿಸಿದರು. ಈ ವೇಳೆ ವ್ಯವಸ್ಥಾಪಕ ನಿರ್ದೇಶಕರು ಸಕಾರಾತ್ಮಕವಾಗಿ ಸ್ಪಂದಿಸಿ ಸೆ.30 ರಂದು ವೇತನದ ಬದಲಾಗಿ 15000 ರೂ.ಗಳನ್ನು ಮುಂಗಡ ಪಾವತಿ ಮಾಡಲು ಕ್ರಮ ಕೈಗೊಳ್ಳುವುದು ಎಂದು ತಿಳಿಸಿದರು.
ರಾಜ್ಯದ ಅತಿದೊಡ್ಡ ನಾಡಹಬ್ಬವಾದ ನವರಾತ್ರಿ ಹಬ್ಬವು ಈಗಾಗಲೇ ಪ್ರಾರಂಭವಾಗಿದ್ದು, ಅಕ್ಟೋಬರ್ ತಿಂಗಳ ಒಂದನೇ ತಾರೀಖು ಆಯುಧ ಪೂಜೆ ಹಾಗೂ ಎರಡನೇ ತಾರೀಖು ವಿಜಯ ದಶಮಿಯಾಗಿದ್ದು, ಸಾರಿಗೆ ನೌಕರರು ಈ ಹಬ್ಬವನ್ನು ತಮ್ಮ ಕುಟುಂಬ ಸದಸ್ಯರೊಂದಿಗೆ ಭಕ್ತಿ ಮತ್ತು ಸಂಭ್ರಮದಿಂದ ಆಚರಣೆ ಮಾಡಲಾಗುವುದು.
ಈ ನಡುವೆ ನಮ್ಮ NWKRTC ಸಂಸ್ಥೆಯ ನೌಕರರಿಗೆ ವೇತನವು ತಿಂಗಳ 6ನೇ ತಾರೀಖು ಆಗುವುದರಿಂದ ನಮ್ಮ ನೌಕರರು ನಾಡಹಬ್ಬವನ್ನು ವೇತನವಿಲ್ಲದೆ ಆಚರಣೆ ಮಾಡಲು ಸಾಲ ಅಥವಾ ಇತರೆ ಮೂಲಗಳಿಂದ ಹಣವನ್ನು ಹೊಂದಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಬರುತ್ತದೆ.
ಈಗಾಗಲೇ ಕೆ.ಕೆ.ಆರ್.ಟಿ.ಸಿ. ಮತ್ತು ಕೆ.ಎಸ್.ಆರ್.ಟಿ.ಸಿ. ಸಾರಿಗೆ ನಿಗಮಗಳು ಆಯುಧ ಪೂಜೆ ಹಾಗೂ ವಿಜಯ ದಶಮಿ ಹಬ್ಬದ ಮುನ್ನವೇ ಸೆಪ್ಟೆಂಬರ್ ತಿಂಗಳ ವೇತನವನ್ನು ನೀಡಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, NWKRTC ಸಂಸ್ಥೆಯ ನೌಕರರು ಈ ಬಾರಿಯ ನಾಡಹಬ್ಬವನ್ನು ಭಕ್ತಿ ಮತ್ತು ಸಂಭ್ರಮದಿಂದ ಆಚರಣೆ ಮಾಡಲು ಸೆಪ್ಟೆಂಬರ್ ತಿಂಗಳ ವೇತನವನ್ನು ಈ ತಿಂಗಳ ಕೊನೆಯ ದಿನವೇ ನೀಡಲು ಕ್ರಮವಹಿಸಬೇಕೆಂದು ಕೋರಿದ್ದರು.
ಮನವಿ ಸಲ್ಲಿಸುವ ವೇಳೆ ವಿ.ಜಿ. ಪೂಜಾರ, ವಿ.ವೈ. ಕಲ್ಲನ್ನವರ, ಆರ್.ಎಸ್. ಮಾವಿನಕಾಯಿ, ಈರಯ್ಯ ಕರಣ್ಣವರ ಇತರರು ಇದ್ದರು.

Related
